ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕರ್ನಾಟಕ ವಿಧಾನಪರಿಷತ್ತಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ.೩ರಂದು ಬೆಳಗ್ಗೆ ೮ ರಿಂದ ಸಂಜೆ ೪ ರವರೆಗೆ ಮತದಾನ ನಡೆಯಲಿದ್ದು, ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಕ್ಷೇತ್ರದ ಡೀಸಿ ಶಿಲ್ಪಾನಾಗ್ ತಿಳಿಸಿದರು.ಡೀಸಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಸಿದ್ಧತೆಗಳ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದಕ್ಷಿಣ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು ಒಳಪಡಲಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು ೧೧ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಮತಗಟ್ಟೆಯಲ್ಲಿ ಮತದಾರರು ಮತ ಚಲಾಯಿಸಲು ಬ್ಯಾಲೆಟ್ ಪೇಪರ್‌ಗಳನ್ನು ಬಳಸಲಾಗುತ್ತದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಒಟ್ಟು ೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಗುಂಡ್ಲುಪೇಟೆ ಪಟ್ಟಣದ ತಾಲೂಕು ಆಡಳಿತ ಸೌಧ ಕೊಠಡಿ ಸಂಖ್ಯೆ ೧೭, ಚಾ.ನಗರ ಪಟ್ಟಣದ ತಾಲೂಕು ಆಡಳಿತ ಸೌಧದ ನೆಲಮಹಡಿಯಲ್ಲಿರುವ ಮೀಟಿಂಗ್ ಹಾಲ್, ಯಳಂದೂರಿನ ತಾಲೂಕು ಆಡಳಿತ ಸೌಧದ ನೆಲಮಹಡಿಯಲ್ಲಿರುವ ಕೊಠಡಿ ಸಂಖ್ಯೆ ೧ರ ಮಿಟಿಂಗ್ ಹಾಲ್, ಕೊಳ್ಳೇಗಾಲದ ತಾಲೂಕು ಆಡಳಿತ ಸೌಧದ ನೆಲಮಹಡಿಯಲ್ಲಿರುವ ಕೇಸ್ವಾನ್ ಕೊಠಡಿ ಸಂಖ್ಯೆ ೨ ಮತ್ತು ಹನೂರು ತಾಲೂಕಿಗೆ ಸಂಬಂಧಪಟ್ಟಂತೆ ಪಶು ವೈದ್ಯಕೀಯ ಆಸ್ಪತ್ರೆ ಸಭಾಂಗಣದಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದರು.
ಅಂತಿಮ ಮತದಾರರ ಪಟ್ಟಿಯಲ್ಲಿ ಗುಂಡ್ಲುಪೇಟೆ ತಾಲೂಕಿನಲ್ಲಿ ೩೦೬ ಪುರುಷರು, ೯೭ ಮಹಿಳೆಯರು ಸೇರಿದಂತೆ ಒಟ್ಟು ೪೦೩ ಮತದಾರರು, ಚಾಮರಾಜನಗರ ೩೮೪ ಪುರುಷರು, ೨೧೯ ಮಹಿಳೆಯರು ಸೇರಿದಂತೆ ಒಟ್ಟು ೬೦೩ ಮತದಾರರು, ಯಳಂದೂರು ೧೪೮ ಪುರುಷರು, ೫೪ ಮಹಿಳೆಯರು ಸೇರಿದಂತೆ ಒಟ್ಟು ೨೦೨ ಮತದಾರರು, ಕೊಳ್ಳೇಗಾಲ ೪೧೭ ಪುರುಷರು, ೩೦೭ ಮಹಿಳೆಯರು ಸೇರಿದಂತೆ ಒಟ್ಟು ೭೨೪ ಮತದಾರರು ಹಾಗೂ ಹನೂರು ತಾಲೂಕಿನಲ್ಲಿ ೧೯೩ ಪುರುಷರು, ೫೬ ಮಹಿಳೆಯರು ಸೇರಿದಂತೆ ಒಟ್ಟು ೨೪೯ ಮತದಾರರಿದ್ದು, ಜಿಲ್ಲೆಯಲ್ಲಿ ಒಟ್ಟು ೧೪೪೮ ಪುರುಷರು, ೭೩೩ ಮಹಿಳೆಯರು ಸೇರಿದಂತೆ ೨೧೮೧ ಮತದಾರರಿದ್ದಾರೆ ಎಂದು ಡಿಸಿ ತಿಳಿಸಿದರು.ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಜೂ.೨ರಂದು ಮಸ್ಟರಿಂಗ್ ಕಾರ್ಯ ನಡೆದಿದ್ದು, ಜೂ. ೩ರಂದು ಸಂಜೆ ೪.೩೦ ಗಂಟೆಯ ನಂತರ ಡಿ-ಮಸ್ಟರಿಂಗ್ ಕಾರ್ಯ ನಡೆಯಲಿದೆ. ಪ್ರತಿ ಮತಗಟ್ಟೆಗೆ ಓರ್ವ ಪ್ರಿಸೈಡಿಂಗ್ ಅಧಿಕಾರಿ, ಓರ್ವ ಮತಗಟ್ಟೆ ಅಧಿಕಾರಿ, ಇಬ್ಬರು ಮತದಾನ ಅಧಿಕಾರಿಗಳು, ಓರ್ವ ಮೈಕ್ರೋ ಅಬ್ಸರ್‌ವರ್ ಹಾಗೂ ಕಾಯ್ದಿರಿಸಿದ ಪ್ರಿಸೈಡಿಂಗ್ ಅಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು ೩೫ ಮಂದಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಚುನಾವಣೆ ನೀತಿ ಸಂಹಿತೆ ಪಾಲನೆಗೆ ಪ್ರತೀ ತಾಲೂಕಿಗೆ ಓರ್ವ ಸೆಕ್ಟರ್ ಅಧಿಕಾರಿ ಮೂವರು ಪ್ಲೈಯಿಂಗ್ ಸ್ಕ್ವಾಡ್ ಹಾಗೂ ಒಬ್ಬರು ಎಂಸಿಸಿ ತಂಡದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಚುನಾವಣೆಗೆ ಪ್ರತಿ ಮತಗಟ್ಟೆಗೆ 2 ವಾಹನಗಳು ಹಾಗೂ ಡೀಸಿ ಕಚೇರಿಗೆ ಎರಡು ವಾಹನ ಸೇರಿದಂತೆ ಒಟ್ಟು ೧೨ ವಾಹನಗಳನ್ನು ನಿಯೋಜಿಸಲಾಗಿದ್ದು, ಮತಗಟ್ಟೆಗೆ ನೇಮಕ ಮಾಡಿರುವ ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್ ಕೇಂದ್ರಕ್ಕೆ ಹಾಜರಾಗಿ ಮತದಾನಕ್ಕೆ ಅಗತ್ಯ ಬ್ಯಾಲೆಟ್ ಪೇಪರ್, ಬ್ಯಾಲೆಟ್ ಬಾಕ್ಸ್ ಮತ್ತು ಇನ್ನಿತರೆ ನಮೂನೆಗಳನ್ನು ಮಸ್ಟರಿಂಗ್ ಕೇಂದ್ರದಿಂದ ಪಡೆದು ಆಯಾ ತಾಲೂಕು ಕೇಂದ್ರದಲ್ಲಿ ತೆರೆಯಲಾಗಿರುವ ಮತಗಟ್ಟೆಗೆ ಪೊಲೀಸ್ ಎಸ್ಕಾರ್ಟ್‌ನೊಡನೆ ತೆರಳಲಿದ್ದಾರೆ ಎಂದರು. ಜೂ.೩ರಂದು ಮತದಾನ ಮುಕ್ತಾಯದ ಬಳಿಕ ಮತಪತ್ರಗಳು ತುಂಬಿದ ಮತಪೆಟ್ಟಿಗೆಯನ್ನು ಪೊಲೀಸ್ ಎಸ್ಕಾರ್ಟ್‌ನೊಡನೆ ಕಂಟೈನರ್ ವಾಹನದಲ್ಲಿ ಡಿ ಮಸ್ಟರಿಂಗ್ ಕೇಂದ್ರವನ್ನು ತಲುಪಿಸಲಾಗುತ್ತದೆ. ಡಿ ಮಸ್ಟರಿಂಗ್ ಕಾರ್ಯ ಮುಕ್ತಾಯ ನಂತರ ಜಿಲ್ಲೆಯಲ್ಲಿ ಮತದಾನವಾದ ೫ ಮತಗಟ್ಟೆಗಳ ಮತಪತ್ರ ತುಂಬಿದ ಮತಪೆಟ್ಟಿಗೆಗಳು ಮತ್ತು ಮತದಾನದ ದಾಖಲೆಗಳನ್ನು ಪೊಲೀಸ್ ಎಸ್ಕಾರ್ಟ್‌ನೊಡನೆ ಕಂಟೇನರ್ ವಾಹನದಲ್ಲಿ ಮೈಸೂರಿನಲ್ಲಿ ಸ್ಥಾಪಿಸಲಾಗಿರುವ ಎಣಿಕೆ ಕೇಂದ್ರಕ್ಕೆ ತಲುಪಿಸಿ, ಮತಪತ್ರ ತುಂಬಿದ ಮತಪೆಟ್ಟಿಗೆಗಳು ಮತ್ತು ದಾಖಲೆಗಳನ್ನು ಚುನಾವಣಾಧಿಕಾರಿ ಸುಪರ್ದಿಗೆ ವಹಿಸಲಾಗುತ್ತದೆ. ಜೂ.೬ರಂದು ಮೈಸೂರಿನಲ್ಲಿ ಸ್ಥಾಪಿಸಲಾಗಿರುವ ಎಣಿಕೆ ಕೇಂದ್ರದಲ್ಲಿ ಬೆಳಿಗ್ಗೆ ೮ ಗಂಟೆಯಿಂದ ಮತ ಎಣಿಕೆ ಕಾರ್ಯವನ್ನು ನಡೆಸಲಾಗುತ್ತದೆ ಎಂದು ಡೀಸಿ ಶಿಲ್ಪಾನಾಗ್ ತಿಳಿಸಿದರು. ಎಸ್ಪಿ ಪದ್ಮಿನಿ ಸಾಹು, ಜಿಪಂ ಸಿಇಒ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಎಡಿಸಿ ಗೀತಾ ಹುಡೇದ ಇದ್ದರು.