ಸಾರಾಂಶ
ಮಂಡ್ಯ : ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾದ ನನಗೆ ಶಿಕ್ಷಕರು ಆಶೀರ್ವಾದ ಮಾಡಿ ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಮನವಿ ಮಾಡಿದರು.
ನಗರದ ಸುಮರವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಜನರು ನನಗೆ ನಾಲ್ಕು ಬಾರಿ ಆಶೀರ್ವಾದ ಮಾಡಿ ಶಾಸನ ಸಭೆಗೆ ಕಳುಹಿಸಿದ್ದೀರಾ. ಅದರಂತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಈ ಬಾರಿಯೂ ಗೆಲ್ಲಿಸಿಕೊಂಡು ಬಂದರೆ ಮತ್ತಷ್ಟು ಕೆಲಸ ಮಾಡಲು ಸಹಾಯವಾಗುತ್ತದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿಕೊಂಡು ಬರಲು ಎಲ್ಲರೂ ಉತ್ಸುಕರಾಗಿ ಕೆಲಸ ಮಾಡಿದ್ದೇವೆ. ಜೂ.3ರಂದು ನಡೆಯುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎಲ್ಲರೂ ತಮ್ಮ ಗೆಲುವಿಗೆ ಕೆಲಸ ಮಾಡಬೇಕಿದೆ ಎಂದು ಕೋರಿದರು.
ಲೋಕಸಭಾ ಚುನಾವಣೆ ನಂತರ ಕೇವಲ ಎರಡೇ ತಿಂಗಳಲ್ಲಿ ನಾವು ಇಂತಹ ಚುನಾವಣೆ ಎದುರಿಸುತ್ತೇವೆ ಎಂಬುದು ತಿಳಿದಿರಲಿಲ್ಲ, ನಮ್ಮ ಚುನಾವಣೆಯು ಜೂನ್‌ನಲ್ಲಿ ನಡೆಯುತ್ತಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಇಂದಿನ ದಿನವೇ ನಮ್ಮ ಚುನಾವಣೆ ಮುಗಿಯುತ್ತದೆ ಎಂದರು.
ಈಗ ಶಾಲಾ ಕಾಲೇಜುಗಳು ರಜೆ ಇರುವುದರಿಂದ ಪ್ರಚಾರ ಮಾಡಲು ಸಮಸ್ಯೆ ಆಗಿದೆ. ಹಾಗಾಗಿ ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಪಕ್ಷದ ಮುಖಂಡರು ಮತ್ತು ನಾಯಕರು ಮತ ಕೇಳಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಶಾಸಕರು ಮತ್ತು ಮಾಜಿ ಶಾಸಕರು ಒಂದಲ್ಲ ಎರಡು ಬಾರಿ ಸಭೆ ಮಾಡಿ ಶಿಕ್ಷಕರು ಹಾಗೂ ಜನಪರ ಕಾಳಜಿಯುಳ್ಳ ಬಜೆಟ್ ಬಗ್ಗೆ ಮುಖ್ಯಮಂತ್ರಿ ಬಳಿ ಕೇಳಿಕೊಂಡಿದ್ದೇವು. ಅದರಂತೆ ಬಜೆಟ್‌ನಲ್ಲಿ ಎನ್.ಚಲುವರಾಯಸ್ವಾಮಿ ನಾಯಕತ್ವದಲ್ಲಿ ಮೈಷುಗರ್ ಹೊಸ ಕಾರ್ಖಾನೆ, ಹೊಸ ಕೃಷಿ ವಿವಿ ಸೆರಿದಂತೆ ಹಲವು ಯೋಜನೆ ಕೊಟ್ಟಿರುವುದು ನಮ್ಮ ಪುಣ್ಯದ ಕೆಲಸ ಎಂದು ಶ್ಲಾಘಿಸಿದರು.
ಕಾಂಗ್ರೆಸ್ ಸರ್ಕಾರ ಇನ್ನೂ ನಾಲ್ಕು ವರ್ಷ ಸುಭದ್ರವಾಗಿರಲಿದೆ. ಈ ಚುನಾವಣೆ ಮುಗಿದ ನಂತರ ಜಿಲ್ಲಾ ಮುಖಂಡರಿಗೆ ಸರ್ಕಾರದಿಂದ ಸ್ಥಾನಮಾನ ಕೊಡಿಸಲು ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಶ್ರಮಿಸಲಾಗುವುದು. ಚುನಾವಣೆಯು ಮುಖ್ಯವಾಗಿರುವುದರಿಂದ ತಮ್ಮ ಭಾಗದಲ್ಲಿಯೇ ಪ್ರಚಾರ ನಡೆಸುವ ಮೂಲಕ ನಮಗೆ ಆಶೀರ್ವಾದ ಮಾಡಬೇಕು ಎಂದು ಕೋರಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚು ಮತದಾನ ನಡೆಯುವಂತೆ ಎಲ್ಲ ಶಾಸಕರು ಮತ್ತು ಪಕ್ಷದ ಮುಖಂಡರು ಶ್ರಮ ವಹಿಸಬೇಕು. ಈಗಿನಿಂದಲೇ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಕೆಲಸ ಆಗಬೇಕು. ಬಿಜೆಪಿ ಮತ್ತು ಜೆಡಿಎಸ್ ಪರಿಸ್ಥಿತಿ ಸದ್ಯಕ್ಕೆ ಸರಿಯಲ್ಲ. ಅವರು ಯಾರೇ ಅಭ್ಯರ್ಥಿ ಹಾಕಲಿ ನಮ್ಮ ಅಭ್ಯರ್ಥಿ ಪರ ಮತ ಹೆಚ್ಚು ಬರಲು ನೋಡಿಕೊಳ್ಳುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.
ಈ ವೇಳೆ ಶಾಸಕರಾದ ಪಿ.ರವಿಕುಮಾರ್ ಗಣಿಗ, ದಿನೇಶ್ ಗೂಳಿಗೌಡ, ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕರಾದ ಎಚ್.ಬಿ.ರಾಮು, ಕೆ.ಬಿ.ಚಂದ್ರಶೇಖರ್ , ಕೀಲಾರ ರಾಧಾಕೃಷ್ಣ ಸೇರಿದಂತೆ ಹಲವರು ಇದ್ದರು.