ಇಂಡಿಗೋ ಸಂಸ್ಥೆಯ ಎಡವಟ್ಟಿನಿಂದ ವಿಮಾನಗಳ ರದ್ದತಿಯಾಗಿ ದೇಶಾದ್ಯಂತ ಪ್ರಯಾಣಿಕರು ಪರದಾಡುತ್ತಿದ್ದಾರೆ. ರೈಲ್ವೆ ಇಲಾಖೆಯೂ ವಿಶೇಷ ರೈಲುಗಳನ್ನು ಓಡಿಸುವ ಮೂಲಕ ಇಂಡಿಗೋಳ ತಡೆಯುವ ಪ್ರಯತ್ನ ಮಾಡುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಇಂಡಿಗೋ ಸಂಸ್ಥೆಯ ಎಡವಟ್ಟಿನಿಂದ ವಿಮಾನಗಳ ರದ್ದತಿಯಾಗಿ ದೇಶಾದ್ಯಂತ ಪ್ರಯಾಣಿಕರು ಪರದಾಡುತ್ತಿದ್ದಾರೆ. ರೈಲ್ವೆ ಇಲಾಖೆಯೂ ವಿಶೇಷ ರೈಲುಗಳನ್ನು ಓಡಿಸುವ ಮೂಲಕ ಇಂಡಿಗೋಳ ತಡೆಯುವ ಪ್ರಯತ್ನ ಮಾಡುತ್ತಿದೆ.

ಪೈಲೆಟ್‌, ಸಿಬ್ಬಂದಿ ಕೊರತೆ, ತಾಂತ್ರಿಕ ತೊಂದರೆಗಳಿಂದಾಗಿ ದೇಶಾದ್ಯಂತ 1000ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಇಂಡಿಗೋ ಸಂಸ್ಥೆ ರದ್ದುಪಡಿಸಿದೆ. ಬರೋಬ್ಬರಿ 5 ದಿನಗಳಾದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ವಿಮಾನ ಇಲ್ಲದೇ ಸಕಾಲಕ್ಕೆ ಗಮ್ಯ ಸ್ಥಳಕ್ಕೆ ಹೋಗಲು ಸಾಧ್ಯವಾಗದೇ ಕಂಗಾಲಾಗುತ್ತಿದ್ದಾರೆ. ಅಸ್ಥಿ ವಿಸರ್ಜನೆಗೆ ಹೋಗಲು ಸಾಧ್ಯವಾಗದೇ ಅಲ್ಲಲ್ಲಿ ಕೆಲವರು ಸಿಲುಕಿದ್ದರೆ, ಮತ್ತೆ ಕೆಲವರು ತಮ್ಮ ಆರತಕ್ಷತೆಗೆ ಆನ್‌ಲೈನ್‌ ಮೂಲಕ ಹಾಜರಾಗಿರುವುದುಂಟು. ಹನಿಮೂನ್‌ ಕೂಡ ಕ್ಯಾನ್ಸಲ್‌ ಮಾಡಿದ ಪ್ರಸಂಗಗಳು ನಡೆದಿರುವುದುಂಟು. ಹೀಗಾಗಿ, ವಿಮಾನ ನಿಲ್ದಾಣಗಳಲ್ಲಿ ಪ್ರತಿಭಟನೆ, ಮಾತಿನ ಚಕಮಕಿ ನಿತ್ಯ ನಿರಂತರ ಎಂಬಂತಾಗಿದೆ.

ವಿಮಾನ ತಪ್ಪಿಸಿಕೊಂಡ ಪ್ರಯಾಣಿಕರು ಸಹಜವಾಗಿ ರೈಲಿನತ್ತ ತಮ್ಮ ದೃಷ್ಟಿ ನೆಡುತ್ತಿದ್ದು, ರೈಲುಗಳು ರಶ್‌ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ರೈಲ್ವೆ ಇಲಾಖೆಯೂ ವಿವಿಧ ಸ್ಥಳಗಳಿಗೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

ಅದರಂತೆ ನೈಋತ್ಯ ರೈಲ್ವೆ ವಲಯ ಬೆಂಗಳೂರಿಂದ ವಿವಿಧೆಡೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

ಬೆಂಗಳೂರು- ಪುಣೆ, ಪುಣೆ- ಬೆಂಗಳೂರು, ಬೆಂಗಳೂರು- ಚೆನ್ನೈ, ಯಶವಂತಪುರ- ನಿಜಾಮುದ್ದೀನ, ಸಂತಾಗಾಚಿ - ಯಲಹಂಕ, ವಿಶಾಖಪಟ್ಟಣಂ- ಬೆಂಗಳೂರು, ಎನಾಕುರ್ಲಂ- ಯಲಹಂಕ, ಅಜ್ಮೀರ್‌- ಬೆಂಗಳೂರು, ಯಶವಂತಪುರ- ಅಜ್ಮೀರ್‌, ಹೀಗೆ ವಿವಿಧ ಸ್ಥಳಗಳಿಗೆ 10ಕ್ಕೂ ಹೆಚ್ಚು ವಿಶೇಷ ರೈಲುಗಳು ಓಡಲಿವೆ. ಡಿ. 10-12ರ ವರೆಗೆ ವಿಶೇಷ ರೈಲುಗಳ ಓಡಾಟ ನಡೆಯಲಿದೆ. ಅಲ್ಲಿ ವರೆಗೂ ಇಂಡಿಗೋ ವಿಮಾನಯಾನದ ಸಮಸ್ಯೆ ಬಗೆಹರಿಯುವ ಸಾಧ್ಯತೆಯುಂಟು. ವಿಮಾನಗಳ ಓಡಾಟ ಸಹಜಸ್ಥಿತಿಗೆ ಬಂದ ಬಳಿಕ ರಶ್‌ ಕಡಿಮೆಯಾದರೆ ಬಂದ್‌ ಮಾಡಲಾಗುವುದು. ಇಲ್ಲದಿದ್ದಲ್ಲಿ ರಶ್‌ ಎಲ್ಲಿ ವರೆಗೂ ಇರುತ್ತದೆಯೋ ಅಲ್ಲಿ ವರೆಗೂ ವಿಶೇಷ ರೈಲುಗಳ ಓಡಾಟ ನಡೆಯಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಜತೆಗೆ ವಿಮಾನಯಾನದ ಪ್ರಯಾಣಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅಗತ್ಯಕ್ಕೆ ತಕ್ಕಂತೆ ಎಸಿ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಕೂಡ ಯೋಚಿಸಿರುವುದುಂಟು. ಅಗತ್ಯ ಬಿದ್ದರೆ ವಿಶೇಷ ರೈಲುಗಳಿಗೆ ಎಸಿ ಕೋಚ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಇಂಡಿಗೋಳು ತಡೆಯಲು ರೈಲ್ವೆ ಇಲಾಖೆ ಯತ್ನಿಸುತ್ತಿರುವುದಂತೂ ಸತ್ಯ.

ವಿಶೇಷ ರೈಲು

ಬೆಂಗಳೂರಿಂದ ಪುಣೆ, ಎನಾರ್ಕುಲಂ, ಚೆನ್ನೈ ಸೇರಿದಂತೆ ವಿವಿಧೆಡೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ರಶ್‌ ಜಾಸ್ತಿಯಾಗುತ್ತಿರುವುದರಿಂದ ವಿಶೇಷ ರೈಲು ಓಡಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ. ಮುಂಬೈ- ಹುಬ್ಬಳ್ಳಿ ವಿಮಾನ ರದ್ದು!

ಹುಬ್ಬಳ್ಳಿಗೆ ಭಾನುವಾರ 6 ವಿಮಾನಗಳು ಬರಬೇಕಿತ್ತು. ಆದರೆ ಮುಂಬೈಯಿಂದ ಬೆಳಗ್ಗೆಯೇ ಬರಬೇಕಿದ್ದ ವಿಮಾನ ರದ್ದಾಗಿದೆ. ಇನ್ನುಳಿದಂತೆ ಬೆಂಗಳೂರು, ಹೈದರಾಬಾದ್‌, ದೆಹಲಿಯಿಂದ ಬರಬೇಕಿದ್ದ 5 ವಿಮಾನಗಳು ನಾಲ್ಕೈದು ಗಂಟೆಗಳ ಕಾಲ ವಿಳಂಬವಾಗಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.