ಹುಬ್ಬಳ್ಳಿ:
ಸರಕು ಸಾಗಾಣಿಕೆಯಲ್ಲಿ ನೈಋತ್ಯ ರೈಲ್ವೆ ವಲಯವು ಪ್ರಸಕ್ತ ಸಾಲಿನಲ್ಲಿ ದೇಶದಲ್ಲೇ ನಂ.1 ಸ್ಥಾನ ಪಡೆದಿದ್ದು ಇತಿಹಾಸದಲ್ಲೇ ಅತಿ ಹೆಚ್ಚು 52.46 ಮಿಲಿಯನ್ ಟನ್ ಸರಕು ಸಾಗಿಸಿದೆ ಎಂದು ಎಂದು ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ (ಎಜಿಎಂ) ಪಿ. ಅನಂತ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರೈಲ್ವೆ ಯೋಜನೆಗಳಿಗೆ 3372 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಹಸ್ತಾಂತರ ಮಾಡಬೇಕಿದ್ದು ಬೆಳಗಾವಿ-ಧಾರವಾಡ ಹೊಸ ಮಾರ್ಗದ ಭೂಮಿ ಹಸ್ತಾಂತರ ಇನ್ನೂ ಆಗಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಕಳೆದ ವರ್ಷಕ್ಕಿಂತ (50.36 ಮಿಲಿಯನ್ ಟನ್) ಹೆಚ್ಚುವರಿ 6.81 ಮಿಲಿಯನ್ ಟನ್ ಸರಕು ಸಾಗಾಣಿಕೆ ಸಾಗಿಸಿದೆ. 20.97 ಮಿಲಿಯನ್ ಟನ್ ಸಾಗಣೆ ಮಾಡುವ ಮೂಲಕ ಉತ್ತರ ಕೇಂದ್ರ ವಲಯವು ಎರಡನೇ ಸ್ಥಾನ ಹೊಂದಿದೆ. ಒಟ್ಟಾರೆ ಸಾಗಣೆ ವಿಭಾಗದಲ್ಲಿ ನೈಋತ್ಯ ರೈಲ್ವೆಯು ₹ 9487.88 ಕೋಟಿ ಆದಾಯ ಗಳಿಸಿದೆ ಎಂದರು.ಕಲ್ಲಿದ್ದಲು, ಕಬ್ಬಿಣ ಅದಿರು, ಸ್ಟೀಲ್, ಖನಿಜ ತೈಲ, ಸಿಮೆಂಟ್ ಹಾಗೂ ರಾಸಾಯನಿಕ ಗೊಬ್ಬರ, ಕಂಟೇನರ್ಸ್, ಆಹಾರ ವಸ್ತುಗಳು ಸೇರಿದಂತೆ ಇತರ ಸರಕು ಸಾಗಿಸಲಾಗಿದೆ. ಕಬ್ಬಿಣ ಅದಿರು, ಕಲ್ಲಿದ್ದಲು ಹಾಗೂ ಸ್ಟೀಲ್ ಸಾಗಾಣಿಕೆಯಿಂದ ಹೆಚ್ಚು ಆದಾಯ ಹರಿದು ಬಂದಿದೆ ಎಂದು ತಿಳಿಸಿರುವ ಅವರು, ಸರಕು ಸಾಮರ್ಥ್ಯ ಹೆಚ್ಚಿಸಲು 409 ಗೂಡ್ಸ್ ಟ್ರ್ಯಾಕ್ಸ್ ಮೇಲ್ದರ್ಜೆಗೇರಿಸಲಾಗಿದೆ. ತೋರಣಗಲ್ಲು-ರಣಜಿತಪುರ ಮತ್ತು ಬಳ್ಳಾರಿ-ಚಿಕ್ಕಜಾಜೂರ ಮಾರ್ಗದಲ್ಲಿ ಡಬ್ಲಿಂಗ್‌ಗೆ ಅನುಮತಿ ದೊರೆತಿದೆ ಎಂದು ತಿಳಿಸಿದರು.
ಸಮಯ ಪಾಲನೆಯಲ್ಲಿ ಶೇ. 89.37ರಷ್ಟು ಸಾಧನೆಗೈದಿದ್ದು, 3,335 ನಿಮಿಷ ಉಳಿತಾಯ ಮಾಡಿದೆ. ಈ ಮೂಲಕ ದೇಶದಲೇ 4ನೇ ಸ್ಥಾನ ಗಳಿಸಿದ್ದೇವೆ. 11 ಹೊಸ ರೈಲು ಓಡಿಸಲಾಗುತ್ತಿದ್ದು 4 ರೈಲುಗಳನ್ನು ಎಕ್ಸ್‌ಪ್ರೆಸ್‌ನಿಂದ ಸೂಪರ್‌ಫಾಸ್ಟ್ ಎಂದು ಮೇಲ್ದರ್ಜೆಗೇರಿಸಲಾಗಿದೆ. ಕಳೆದ ವರ್ಷ ಹಬ್ಬ, ರಜೆ ಸೇರಿದಂತೆ ಸಾಂದರ್ಭಿಕ ದಿನಗಳಲ್ಲಿ 471 ವಿಶೇಷ ರೈಲುಗಳಿಂದ 11,322 ಟ್ರಿಪ್ ಓಡಿಸುವ ಮೂಲಕ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಕಲ್ಪಿಸಿದ್ದೇವೆ. ಪ್ರಯಾಣಿಕರ ಸಾಗಣೆಯಿಂದ ಒಟ್ಟಾರೆ ₹ 3468 ಕೋಟಿ ಆದಾಯ ಬಂದಿದೆ. ಪ್ರಯಾಣಿಕರ ಸಂಖ್ಯೆ 165.53 ಮಿಲಿಯನ್‌ನಿಂದ 176.93 ಮಿಲಿಯನ್‌ಗೆ ಹೆಚ್ಚಳವಾಗಿದೆ ಎಂದರು.
ಭೂಮಿ ಹಸ್ತಾಂತರವಾಗಿಲ್ಲ:
ರಾಜ್ಯದಲ್ಲಿ 10 ರೈಲು ಯೋಜನೆಗಳಿಗೆ 16945 ಎಕರೆ ಭೂಮಿ ಬೇಕಿದ್ದು, ಇದರಲ್ಲಿ 13675 ಎಕರೆ ಹಸ್ತಾಂತರವಾಗಿದೆ. ಇನ್ನೂ 3372 ಎಕರೆ ಭೂಮಿಯನ್ನು ಹಸ್ತಾಂತರ ಬಾಕಿ ಇದೆ. ಧಾರವಾಡ-ಬೆಳಗಾವಿ ಹೊಸ ಮಾರ್ಗ ಯೋಜನೆಯು ಭೂಮಿ ಹಸ್ತಾಂತರ ಬಾಕಿಯಿಂದಾಗಿ ಪ್ರಾರಂಭವಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಧಾನ ವಾಣಿಜ್ಯ ವ್ಯವಸ್ಥಾಪಕ ಎಸ್.ಪಿ. ಶಾಸೀ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಇದ್ದರು. ಡೆಮು ರೇಕ್‌ಗೆ ಬೇಡಿಕೆಗ್ರಾಮೀಣ ಜನರಿಗೆ ರೈಲು ಪ್ರಯಾಣ ಸೇವೆ ಕಲ್ಪಿಸಲು 27 ಡೆಮು ರೈಲುಗಳಿಗೆ ಬೋಗಿ ಕಳಿಸುವಂತೆ ರೈಲ್ವೆ ಮಂಡಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ವಾರ್ಷಿಕ ಕೇವಲ 3-4 ಮಾತ್ರ ಕೋಚ್ ಬರುತ್ತಿವೆ. ಹಾಗಾಗಿ ಹುಬ್ಬಳ್ಳಿ ವಿಭಾಗದಲ್ಲಿ ಲೋಕಲ್ ಟ್ರೇನ್ ಬೇಡಿಕೆ ಈಡೇರಿಸಲಾಗುತ್ತಿಲ್ಲ. ಮಂಡಳಿಯು ರೇಕ್‌ಗಳನ್ನು ಪೂರೈಸುತ್ತಿದ್ದಂತೆ ಸೇವೆ ಆರಂಭಿಸಲಾಗುವುದು ಎಂದು ಪಿ.ಅನಂತ ತಿಳಿಸಿದರು.