ಬ್ಯಾಡಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾವೇರಿ ವಿವಿ ವ್ಯಾಪ್ತಿಯ ಪುರುಷರ ಹಾಗೂ ಮಹಿಳೆಯರ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಯನ್ನು ಹಾವೇರಿ ವಿವಿ ಉಪಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಉದ್ಘಾಟಿಸಿದರು.

ಬ್ಯಾಡಗಿ: ಶಾಸಕರು ಹಾಗೂ ಸಂಸದರ ನೆರವಿನಿಂದ ಬ್ಯಾಡಗಿ ಪಟ್ಟಣದಲ್ಲಿ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ಕಬಡ್ಡಿ ಪಂದ್ಯಾವಳಿ ನಡೆಸಲು ನಿರ್ಧರಿಸಿರುವುದಾಗಿ ಹಾವೇರಿ ವಿವಿ ಉಪಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾವೇರಿ ವಿವಿ ವ್ಯಾಪ್ತಿಯ ಪುರುಷರ ಹಾಗೂ ಮಹಿಳೆಯರ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಹಾವೇರಿ ವಿಶ್ವವಿದ್ಯಾಲಯ ಆರಂಭವಾದ ಬಳಿಕ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ದೊರೆಯುತ್ತಿದೆ. ಉದಯೋನ್ಮುಖ ಕ್ರೀಡಾಪಟುಗಳನ್ನು ಕ್ರೀಡಾಕ್ಷೇತ್ರದ ಮುಖ್ಯವಾಹಿನಿಗೆ ತರುವ ಕೆಲಸ ಹಾವೇರಿ ವಿವಿಯಿಂದ ನಡೆಯುತ್ತಿದೆ ಎಂದರು.

ವಿವಿ ಆವರಣದಲ್ಲಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್: ಹಾವೇರಿ ವಿವಿ ಆವರಣದಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಕ್ರೀಡಾ ಸಂಕೀರ್ಣ ಸಿದ್ಧಪಡಿಸುವ ಉದ್ದೇಶವಿದೆ. ತನ್ಮೂಲಕ ವಿವಿ ವ್ಯಾಪ್ತಿಯ ಕ್ರೀಡೆಗಳು ಮತ್ತು ತರಬೇತಿ ಶಿಬಿರಗಳು ಒಂದೇ ಸೂರಿನಡಿ ನಡೆಯುವುದಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದರು.

ಕ್ರೀಡಾಸ್ಫೂರ್ತಿ ಬೆಳೆಸಿರಿ: ಹಾವೇರಿ ವಿವಿ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಕಾಲೇಜುಗಳಿವೆ. ಆದ್ದರಿಂದ ಪ್ರತಿಯೊಂದು ಕಾಲೇಜಿನ ಪ್ರಾಚಾರ್ಯರು ಸಹ ಕ್ರೀಡೆಗಳಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ ಬೆಳೆಸುವ ಕೆಲಸವಾಗಬೇಕು. ಅಂದಾಗ ಮಾತ್ರ ಹಾವೇರಿ ವಿವಿ ಉದ್ದೇಶಗಳು ಸಾಕಾರಗೊಳ್ಳಲಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಡ್ಡೀಪುಡಿ ಮಾತನಾಡಿ, ಸಾರ್ವಜನಿಕರು ಹಾಗೂ ಕ್ರೀಡಾ ಸಂಸ್ಥೆಗಳ ಸಹಕಾರದೊಂದಿಗೆ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿ ಯಶಸ್ವಿಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ಪ್ರಾಚಾರ್ಯರಾದ ಮಂಜುನಾಥ ಪಾಟೀಲ, ಡಾ. ಎನ್.ಎಸ್. ಪ್ರಶಾಂತ, ಎಸ್.ಪಿ. ಗೌಡರ, ಎನ್.ಬಿ. ನಾಗಲಾಪುರ, ವೀರೇಶ ಕುಮ್ಮೂರ, ಡಿ.ಟಿ. ಪಾಟೀಲ, ಡಾ. ದೇವೆಂದ್ರಪ್ಪ, ಡಾ. ಬಸನಗೌಡ ಲಕ್ಷ್ಮೇಶ್ವರ, ಹಾವೇರಿ ಜಿಲ್ಲಾ ಅಮೇಚೂರ್‌ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ಕಬಡ್ಡಿ ಕೋಚ್ ಮಂಜುಳಾ ಭಜಂತ್ರಿ, ತೀರ್ಪುಗಾರರ ಮಂಡಳಿಯ ಮಲ್ಲಿಕಾರ್ಜುನ ಕೋಡಿಹಳ್ಳಿ, ಎ.ಟಿ. ಪೀಠದ, ಎಂ.ಕೆ. ಹೊಸ್ಮನಿ, ಕುಮಾರಸ್ವಾಮಿ ಹಿರೇಮಠ, ಬಿ.ಸಿ. ದಾಣಗಲ್, ಬಿ.ಎಸ್. ಹೊಸಪೇಟಿ, ನವೀನ, ನಾಗಾರಾಜ ಮೆಡ್ಲೇರಿ, ಡಾ. ಎಫ್.ಎಚ್. ಗಿಡ್ಡಣ್ಣನವರ ಉಪಸ್ಥಿತರಿದ್ದರು. ಎನ್.ಎಸ್. ಸಣ್ಣಗೌಡ್ರ ಸ್ವಾಗತಿಸಿದರು, ಪಿ. ಸತೀಶ ವಂದಿಸಿದರು.