ವ್ಯವಹಾರಿಕ, ಶೈಕ್ಷಣಿಕ, ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ಸಿಗದಿದ್ದರೆ ಸಾರ್ವಭೌಮತ್ವ ಅಸಾಧ್ಯ: ಪ್ರೊ.ಮಂಜುನಾಥ್‌

| Published : Nov 22 2025, 01:15 AM IST

ವ್ಯವಹಾರಿಕ, ಶೈಕ್ಷಣಿಕ, ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ಸಿಗದಿದ್ದರೆ ಸಾರ್ವಭೌಮತ್ವ ಅಸಾಧ್ಯ: ಪ್ರೊ.ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಕನ್ನಡ ಮಾಧ್ಯಮದ ಶಾಲೆಯನ್ನು ನಡೆಸುವುದು ಕಷ್ಟಸಾಧ್ಯವಾಗಿದೆ. ಗೋಕಾಕ್‌ ಚಳವಳಿಯ ಕಾಲಕ್ಕೆ ಆರಂಭವಾದ ನೃಪತುಂಗ ಕನ್ನಡ ಮಾಧ್ಯಮ ಶಾಲೆಯನ್ನು ನಡೆಸಲು ಆಗುತ್ತಿರುವ ತೊಂದರೆಯನ್ನು ಅವರು ವಿವರಿಸಿದರು. ಕನ್ನಡವನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.

ಕನ್ನಡಪ್ರಭ ವಾರ್ತೆ ಮೈಸೂರು

ವ್ಯವಹಾರಿಕ, ಶೈಕ್ಷಣಿಕ ಹಾಗೂ ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ಸಿಗದಿದ್ದರೆ ನಮ್ಮ ಮಾತೃಭಾಷೆಗೆ ಸಾರ್ವಭೌಮತ್ವ ಅಸಾಧ್ಯ ಎಂದು ಜ್ಞಾನವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎಂ.ಮಂಜುನಾಥ್‌ ಹೇಳಿದರು.

ಟಿ.ನರಸೀಪುರ ರಸ್ತೆಯ ದೊಡ್ಡಆಲದಮರದ ಬಳಿ ಇರುವ ಮೈಸೂರು ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಅಂಡ್‌ ಮ್ಯಾನೇಜ್‌ಮೆಂಟ್‌ನಲ್ಲಿ [ಮೈಸೆಮ್‌] ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದರೆ ಕನ್ನಡದ ಮೇಲಿನ ಅಭಿಮಾನದ ಕೊರತೆ ಕಾಣಿಸುತ್ತಿದೆ. ಈ ರೀತಿಯಾಗಬಾರದು. ಮಾತೃಭಾಷೆಯಿಂದ ಮಾತ್ರ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ ಎಂದರು.

ಉಪನಿಷತ್, ರಾಮಾಯಣ, ಮಹಾಭಾರತದ ಕಾಲದಿಂದಲೂ ಕನ್ನಡ ಭಾಷೆಯ ಪ್ರಸ್ತಾಪವಿದೆ. ಹನ್ನೇರಡೆಯ ಶತಮಾನದ ನಂತರ ಇನ್ನೂ ಹೆಚ್ಚು ಪ್ರವರ್ಧಮಾನಕ್ಕೆ ಬಂದಿತು ಎಂದು ಅವರು ಹೇಳಿದರು.

ಪ್ರಸ್ತುತ ಕನ್ನಡ ಮಾಧ್ಯಮದ ಶಾಲೆಯನ್ನು ನಡೆಸುವುದು ಕಷ್ಟಸಾಧ್ಯವಾಗಿದೆ. ಗೋಕಾಕ್‌ ಚಳವಳಿಯ ಕಾಲಕ್ಕೆ ಆರಂಭವಾದ ನೃಪತುಂಗ ಕನ್ನಡ ಮಾಧ್ಯಮ ಶಾಲೆಯನ್ನು ನಡೆಸಲು ಆಗುತ್ತಿರುವ ತೊಂದರೆಯನ್ನು ಅವರು ವಿವರಿಸಿದರು. ಕನ್ನಡವನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರು.

ಕನ್ನಡ ರಾಜ್ಯೋತ್ಸವ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಪ್ರಸ್ತುತ ಕನ್ನಡ ರಾಜ್ಯೋತ್ಸವವನ್ನು ನಮ್ಮ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿರುವ ಕನ್ನಡ ಸಂಘಸಂಸ್ಥೆಗಳ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಲ್ಲಿ ಉದ್ಯೋಗ ಹಿಡಿದಿರುವ ಯುವಜನರು ಕೂಡ ಅತ್ಯಂತ ಸಡಗರದಿಂದ ಆಚರಿಸುತ್ತಿದ್ದಾರೆ. ಆ ಮೂಲಕ ಕನ್ನಡದ ಕಂಪನ್ನು ಇಡೀ ವಿಶ್ವದಲ್ಲಿಯೇ ಪಸರಿಸುತ್ತಿದ್ದಾರೆ. ಇದಕ್ಕೆ ಪ್ರಮುಖವಾಗಿ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಶಿಕ್ಷಣ ಪಡೆದಿರುವ ಯುವಜನರು ಕಾರಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರೊ.ಶಿವಪ್ಪ ಮಾತನಾಡಿ, ತಾವು ಎಂಎ ಓದುತ್ತಿರುವಾಗ ಹಿಂದಿ ಭಾಷೆ ಏರಿಕೆ ವಿರೋಧಿಸಿ ಪ್ರತಿಭಟಿಸಿದಾಗ ಪೊಲೀಸರು ಬಂಧಿಸಿದ್ದರು ಎಂದು ಸ್ಮರಿಸಿಕೊಂಡರು.

ಸಂಸ್ಥೆಯ ಪಾರುಪತ್ತೇಗಾರ್‌ರಾದ ಜಿಲ್ಲಾ ಪರಿಷತ್‌ ಮಾಜಿ ಅಧ್ಯಕ್ಷ ಕೆ.ಎನ್‌. ಪುಟ್ಟಬುದ್ದಿ, ಖಜಾಂಚಿ ಪೂರ್ಣಿಮಾ ಬಿ. ಕಿರಣ್‌, ಪ್ರಾಂಶುಪಾಲ ಡಾ.ಟಿ.ಎಸ್‌. ಮಂಜುನಾಥ್‌ ಇದ್ದರು ಪ್ರಶೋಭೆ ಗೌತಮಿ ಪ್ರಾರ್ಥಿಸಿದರು. ನಿಸರ್ಗ ಸ್ವಾಗತಿಸಿದರು. ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. 9 ಸಿಜಿಪಿಎಗಿಂತ ಹೆಚ್ಚು ಅಂಕಪಡೆದಿರುವ 34 ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯು ವಿದ್ಯಾರ್ಥಿ ವೇತನ ವಿತರಿಸಿದರು. ವಿದ್ಯಾರ್ಥಿಗಳನ್ನು ಕನ್ನಡಗೀತೆಗಳನ್ನು ಹಾಡಿದರು. ಕನ್ನಡದ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಡಿಯೋವನ್ನು ಕೂಡ ಪ್ರದರ್ಶಿಸಲಾಯಿತು.

ಕಂಪ್ಯೂಟರ್‌ ಲ್ಯಾಬ್‌ಗೆ ವಿಜ್ಞಾನಿಗಳ ಹೆಸರು

ಮೈಸೆಮ್‌ ಕಾಲೇಜಿನಲ್ಲಿ ಖ್ಯಾತ ವಿಜ್ಞಾನಿ ಪ್ರೊ.ಸಿಎನ್‌ಆರ್‌ ರಾವ್‌ ಹಾಗೂ ಖ್ಯಾತ ಗಣಿತಜ್ಞೆ ಪ್ರೊ.ಶಕಂತಲಾದೇವಿ ಅವರ ಹೆಸರಿನ ಕಂಪ್ಯೂಟರ್‌ ಲ್ಯಾಬ್‌ಗಳನ್ನು ಉದ್ಘಾಟಿಸಲಾಯಿತು. ಇಲ್ಲಿ ಅತ್ಯಾಧುನಿಕವಾದ 95 ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ.