ಸಾರಾಂಶ
ವಿದ್ಯಾರ್ಥಿ ಸಮೂಹ ಹಾಗೂ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವತ್ತ ವಿಜ್ಞಾನ ಶಿಕ್ಷಕರು ಶ್ರಮಿಸುವ ಅಗತ್ಯವಿದೆ ಎಂದು ಹರಿಹರ ತಾಲೂಕು ವಿಜ್ಞಾನ ಶಿಕ್ಷಕರ ವೇದಿಕೆ ಅಧ್ಯಕ್ಷ ಮಂಜುನಾಥ ಜೋಗಪ್ಪನವರ ಹರಿಹರದಲ್ಲಿ ಹೇಳಿದ್ದಾರೆ.
- ವಿಜ್ಞಾನ ವಿಚಾರಗೋಷ್ಠಿ-ನಾಟಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಂಜುನಾಥ ಸಲಹೆ - - - ಕನ್ನಡಪ್ರಭ ವಾರ್ತೆ ಹರಿಹರ
ವಿದ್ಯಾರ್ಥಿ ಸಮೂಹ ಹಾಗೂ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವತ್ತ ವಿಜ್ಞಾನ ಶಿಕ್ಷಕರು ಶ್ರಮಿಸುವ ಅಗತ್ಯವಿದೆ ಎಂದು ಹರಿಹರ ತಾಲೂಕು ವಿಜ್ಞಾನ ಶಿಕ್ಷಕರ ವೇದಿಕೆ ಅಧ್ಯಕ್ಷ ಮಂಜುನಾಥ ಜೋಗಪ್ಪನವರ ಹೇಳಿದರು.ಹರಿಹರ ತಾಲೂಕು ವಿಜ್ಞಾನ ಶಿಕ್ಷಕರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಶ್ರಯದಲ್ಲಿ ನಗರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕುಮಟ್ಟದ ವಿಜ್ಞಾನ ವಿಚಾರಗೋಷ್ಠಿ ಮತ್ತು ನಾಟಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಠ್ಯದ ಬೋಧನೆ ಜೊತೆಗೆ ಸಮಾಜದಲ್ಲಿ ಮನೆ ಮಾಡಿರುವ ಮೌಢ್ಯ, ಅಂಧಾನುಕರಣೆಗಳನ್ನು ಬಯಲು ಮಾಡಬೇಕು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಅವರ ಕುಟುಂಬದ ಸದಸ್ಯರನ್ನು ಮೌಢ್ಯಮುಕ್ತಗೊಳಿಸಬೇಕು. ಆ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಗುರುತರ ಜವಾಬ್ದಾರಿ ವಿಜ್ಞಾನ ಶಿಕ್ಷಕರ ಮೇಲಿದೆ. ಸರ್ಕಾರವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮತ್ತು ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ಏರ್ಪಡಿಸಿದೆ. ಸರ್ಕಾರದ ಗುರಿಯನ್ನು ಜಾರಿ ಮಾಡುವತ್ತ ನಮ್ಮ ಚಿತ್ತ ಇರಲಿ ಎಂದರು.ವೇದಿಕೆಯ ಕಾರ್ಯದರ್ಶಿ ಜಹಾನ್ ಆರ್ ಬೇಗಂ ಮಾತನಾಡಿ, ಬಹುಪಾಲು ವಿದ್ಯಾರ್ಥಿಗಳು ವಿಜ್ಞಾನವನ್ನು ಪ್ರೀತಿಸುವಂತೆ ಮಾಡುವ ಜವಾಬ್ದಾರಿ ವಿಜ್ಞಾನ ಶಿಕ್ಷಕರ ಮೇಲಿದೆ. ಮನುಷ್ಯನ ಬದುಕನ್ನು ಸುಲಭಗೊಳಿಸುವ ಜಗತ್ತಿಗೆ ಹೊಸ ಆಲೋಚನೆ ದಿಕ್ಕನ್ನು ತೋರುವ ಶಕ್ತಿ ವಿಜ್ಞಾನಕ್ಕಿದೆ. ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಬದುಕಿನಲ್ಲಿ ನೆಲೆ ಕಂಡುಕೊಳ್ಳುವುದು ಸುಲಭ ಎಂದು ಹೇಳಿದರು.
ಮುಖ್ಯಶಿಕ್ಷಕ ಬಿ.ಬಿ. ರೇವಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹರಿಹರ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ್, ಇಲಾಖೆಯ ಸಿಇಒ ಮಂಜುನಾಥ, ವಿಜ್ಞಾನ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿ ಶ್ರೀಧರ ಮಯ್ಯ, ತಾಲೂಕಿನ ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜ್ಞಾನ ನಾಟಕದಲ್ಲಿ ಡೆಂಘೀಜ್ವರದ ಅರಿವಿನ ಬಗ್ಗೆ ಪ್ರದರ್ಶನ ಜನಮನ ಸೆಳೆಯಿತು.ವಿಜೇತರು:
ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಗುತ್ತೂರು ಸರ್ಕಾರಿ ಪ್ರೌಢಶಾಲೆಯ ಜಿ.ಕೆ. ರಾಘಶ್ರೀ ಪ್ರಥಮ, ಡಿಆರ್‌ಎಂ ಸರ್ಕಾರಿ ಪ್ರೌಢಶಾಲೆಯ ವರ್ಷ ದ್ವಿತೀಯ, ಅಂಬೇಡ್ಕರ್ ಪ್ರೌಢಶಾಲೆಯ ಪ್ರಜ್ಞಾ ತೃತೀಯ ಸ್ಥಾನ ಪಡೆದರು. ಮಾನವ ಕುಲದ ಪ್ರಯೋಜನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ವಿಜ್ಞಾನ ನಾಟಕ ಪ್ರದರ್ಶನ ನೀಡಿದ ತಾಲೂಕಿನ ಭಾನುವಳ್ಳಿಯ ಶ್ರೀಮತಿ ಗೌರಮ್ಮ ಜೆ. ರಾಮಪ್ಪ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡಕ್ಕೆ ಬಹುಮಾನ ವಿತರಿಸಲಾಯಿತು.- - - -3ಎಚ್‍ಆರ್‍ಆರ್1:
ಹರಿಹರ ತಾಲೂಕು ವಿಜ್ಞಾನ ಶಿಕ್ಷಕರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಂಯುಕ್ತ ಆಶ್ರಯದಲ್ಲಿ ಹರಿಹರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕುಮಟ್ಟದ ವಿಜ್ಞಾನ ವಿಚಾರಗೋಷ್ಠಿ ಮತ್ತು ನಾಟಕ ಸ್ಪರ್ಧೆಯನ್ನು ಮುಖ್ಯಶಿಕ್ಷಕ ಬಿ.ಬಿ.ರೇವಣನಾಯ್ಕ್ ಉದ್ಘಾಟಿಸಿದರು.