ಬಿತ್ತನೆ ಬೀಜ ಕೊರತೆಯಾಗದಿರಲಿ

| Published : Jun 24 2024, 01:35 AM IST

ಸಾರಾಂಶ

ಬಿತ್ತನೆ ಬೀಜದ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ

ಕೂಡ್ಲಿಗಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ಆಡಳಿತಾಧಿಕಾರಿ ಹಾಗೂ ಬಳ್ಳಾರಿ ಡಿಸಿಎಫ್ ಜೆ.ಜೆ.ರವಿ ಅಧ್ಯಕ್ಷತೆಯಲ್ಲಿ ಶನಿವಾರ ಸಾಮಾನ್ಯ ಸಭೆ ನಡೆದಿದ್ದು, ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.

ತಾಪಂ ಆಡಳಿತಾಧಿಕಾರಿ ಜೆ.ಜೆ.ರವಿ ರೈತರಿಗೆ ಸಂಬಂಧಿಸಿದ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಕುರಿತು ಸಹಾಯಕ ಕೃಷಿ ನಿರ್ದೇಶಕ ಎಂ.ಟಿ. ಸುನಿಲ್ ಅವರನ್ನು ಕೇಳಿದರು. ಅದಕ್ಕೆ ಉತ್ತರಿಸಿದ ಸುನಿಲಕುಮಾರ್, ಮುಂಗಾರಿಗೂ ಮುನ್ನ ಸೇರಿ ಈವರೆಗೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಈಗಾಗಲೇ ಜೋಳ, ತೊಗರಿ ಸೇರಿ ನಾನಾ ಬೀಜಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ತಾಲೂಕಿನ ಕಾನಹೊಸಹಳ್ಳಿ, ಗುಡೇಕೋಟೆ, ಕೂಡ್ಲಿಗಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಶೇಂಗಾ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರಿಗೆ ಬಿತ್ತನೆ ಬೀಜದ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಸಗೊಬ್ಬರ ಮಾರಾಟಗಾರರು ಹೆಚ್ಚಿನ ಬೆಲೆಗೆ ಬೀಜ, ಗೊಬ್ಬರ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕರಿಗೆ ತಾಪಂ ಆಡಳಿತಾಧಿಕಾರಿ ಸೂಚಿಸಿದರು.

ತೋಟಗಾರಿಕೆ ಬೆಳೆಗಳು ಹಾಗೂ ಮಳೆಯಿಂದ ಹಾನಿಯಾದ ಬೆಳೆಗಳ ಕುರಿತು ವರದಿ ನೀಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗೆ ತಿಳಿಸಿದರು. ತಾಲೂಕಿನ ಸರ್ಕಾರಿ ಶಾಲೆಯ ಕೊಠಡಿಗಳ ಸ್ಥಿತಿಗತಿ ಕುರಿತು ಬಿಇಒ ಪದ್ಮನಾಭ ಕರಣಂ ಮಾಹಿತಿ ನೀಡಿದರು.

ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಅರೆಬರೆಯಾಗಿದೆ ಎಂದು ಕೆಲ ಪಿಡಿಒಗಳು ತಾಪಂ ಆಡಳಿತಾಧಿಕಾರಿ ಗಮನಸೆಳೆದರು. ಆಗ, ಗ್ರಾಮೀಣ ಕುಡಿವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಪ್ರಸನ್ನ ಮಾತನಾಡಿ, ಜೆಜೆಎಂ ಕಾಮಗಾರಿ ಪೂರ್ಣಗೊಂಡ ನಂತರ ಸ್ಥಳ ಪರಿಶೀಲನೆ ಮಾಡುವುದರ ಜತೆಗೆ ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಿದ ನಂತರವೇ ಗ್ರಾಪಂಗೆ ಹಸ್ತಾಂತರ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಅರೆಬರೆ ಕಾಮಗಾರಿ ಮಾಡಿ ಹಸ್ತಾಂತರ ಮಾಡಿಕೊಳ್ಳಲು ಯಾರಾದರೂ ಗ್ರಾಪಂಗೆ ಸೂಚಿಸಿದರೆ ಇಲಾಖೆಗೆ ಮಾಹಿತಿ ನೀಡಿ ಎಂದು ತಿಳಿಸಿದರು.

ತಾಪಂ ಇಒ ವೈ.ರವಿಕುಮಾರ್ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಕಾರ್ಮಿಕರಿಗೆ ಉದ್ಯೋಗ ನೀಡಲಾಗಿದೆ. ಈಗಾಗಲೇ ಕಾಮಗಾರಿ ಮಾಡಿರುವ ಜಮೀನುಗಳ ಬದುಗಳು ಸೇರಿ ಚೆಕ್‌ಡ್ಯಾಂಗಳಲ್ಲಿ ಮಳೆ ನೀರು ತುಂಬಿರುವುದು ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ರೇಷ್ಮೆ, ಬಿಸಿಎಂ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಜೆಸ್ಕಾಂ, ಆರೋಗ್ಯ ಸೇರಿ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒಗಳು, ತಾಪಂ ಸಿಬ್ಬಂದಿ ಇದ್ದರು.