ಸಾರಾಂಶ
- ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕರೆ । ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ । ಮಾನವೀಯತೆಯ ಮಾರ್ಗದಲ್ಲಿ ಹಿರೇಮಠ ಸಂಸ್ಥಾನವಿದೆ
---ಕನ್ನಡಪ್ರಭ ವಾರ್ತೆ ಭಾಲ್ಕಿ
ಮಕ್ಕಳಲ್ಲಿ ಧರ್ಮ, ಸಂಸ್ಕೃತಿಯನ್ನು ಬಿತ್ತಿ, ಆಸ್ತಿಕರನ್ನಾಗಿಸುವ ಪ್ರಯತ್ನ ಮಾಡಿ ಧರ್ಮದ ಬಗ್ಗೆ ಶ್ರದ್ಧೆ ಹೊಂದಿ, ದೇವಿ ದೇವತೆಗಳು, ಮಹಾಪುರುಷರ ಬಗ್ಗೆ ಭಕ್ತಿ ಭಾವ ಹೊಂದುವ ಮೂಲಕ ಜೀವನವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಪ್ರಯತ್ನ ಮಾಡಿ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ತಿಳಿಸಿದರು.ಅವರು ಮಂಗಳವಾರ ಚನ್ನಬಸವಾಶ್ರಮದ ಪರಿಸರದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ವಚನ ಜಾತ್ರೆ- 2025 ಲಿಂ. ಡಾ. ಚನ್ನಬಸವ ಪಟ್ಟದ್ದೇವರ 26ನೇ ಸ್ಮರಣೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಚಿಕ್ಕವಯಸ್ಸಿನವರಿದ್ದಾಗಲೇ ಮಕ್ಕಳಲ್ಲಿ ಧರ್ಮ, ಸಂಸ್ಕೃತಿಯತ್ತ ಅವರನ್ನು ಸೆಳೆಯುವ ಜ್ಞಾನವನ್ನು ಕಲ್ಪಿಸಿಕೊಡಬೇಕೆ ಹೊರತು ಅರ್ಧ ವಯಸ್ಸು ಮುಗಿದ ನಂತರ ಅದರತ್ತ ಇಣುಕಿ ನೋಡುವ ಅನಿವಾರ್ಯತೆ ಬಾರದಿರಲಿ ಅದಾಗ್ಯೂ ಇಂದಿನ ಯುವ ಪೀಳಿಗೆಯನ್ನು ಧರ್ಮ ಹಾಗೂ ಸಂಸ್ಕತಿಯೊಂದಿಗೆ ಜೋಡಿಸುವ ಸಕ್ರೀಯ ಪ್ರಯತ್ನಗಳಾಗಲಿ ಎಂದು ಕರೆ ನೀಡಿದರು.ಈ ಹಿಂದಿನಿಂದಲೂ ಭಾರತೀಯ ಸಂಸ್ಕೃತಿ ಮತ್ತು ಧರ್ಮವನ್ನು ಬಲಹೀನಗೊಳಿಸುವಂಥ ಪ್ರಯತ್ನಗಳು ನಡೆದಿವೆಯಾದರೆ ತನ್ನ ಸಂಸ್ಕೃತಿ, ಸಹಿಷ್ಣುತೆ ಹಾಗೂ ಆಳವಾದ ವೈಜ್ಞಾನಿಕ ಮನೋಭಾವದಿಂದಾಗಿ ಇಂದಿಗೂ ಪ್ರಸ್ತುತ ಹಾಗೂ ಜೀವಂತವಾಗಿದೆ. ಇದಕ್ಕೆ ಪ್ರಯಾಗರಾಜ್ ಸಾಕ್ಷಿ ಎಂದು ಹೇಳಿದರು.
ನಮ್ಮ ಧರ್ಮ ಒಂದು ಜೀವನ ದರ್ಶನವಾಗಿದೆ. ಸತ್ಯ, ಅಹಿಂಸೆ, ಕರುಣೆ, ಆತ್ಮಾನುಭೂತಿ ಹಾಗೂ ಬ್ರಹ್ಮ ವಿಚಾರಗಳ ಮೇಲೆ ನಿಂತಿದೆ. ಇದರ ಅನುಪಾಲನೆ ಮಾಡುವದು ಇಂದಿಗೂ ಅವಶ್ಯಕತೆಯಿದೆ. ಪ್ರಾಚೀನ ಕಾಲದಲ್ಲಿ ಗುರುಕುಲದಲ್ಲಿ ಶಾಸ್ತ್ರ, ವೇದ ಗ್ರಂಥ ಅಧ್ಯಯನ ಜೊತೆಗೆ ಧರ್ಮ ಪಾಲನೆಯಂಥ ವಿಷಯಗಳನ್ನು ಬೋಧಿಸಲಾಗುತ್ತಿದ್ದದ್ದು ಇಂದಿನ ಅಗತ್ಯವೂ ಹೌದಾಗಿದೆ ಎಂದರು.ಡಾ. ಚನ್ನಬಸವ ಪಟ್ಟದ್ದೇವರು ಸಮಾಜೋಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅತ್ಯುತ್ತಮ ಮಾರ್ಗ ಎಂದರಿತು ಸ್ಥಾಪಿಸಿರುವ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದರು. ಮನುಷ್ಯನ ಜೀವನವನ್ನು ಸಫಲವಾಗಿಸುವಲ್ಲಿ ಶಿಕ್ಷಣ ಮತ್ವದ ಪಾತ್ರ ಅತ್ಯುತ್ತಮ ಮಾರ್ಗವಾಗಿದೆ. ಶಿಕ್ಷಣ ಪಡೆಯುವದು ಪ್ರತಿಯೊಬ್ಬನ ಹಕ್ಕು ಮತ್ತು ಅಧಿಕಾರವಾಗಿದೆ. ಹಿರೇಮಠ ಸಂಸ್ಥಾನ ಈ ನಿಟ್ಟಿನಲ್ಲಿ ಇನ್ನಷ್ಟು ಶ್ರಮವಹಿಸಲಿ ಎಂದು ರಾಜ್ಯಪಾಲ ಗೆಹ್ಲೋಟ್ ಕರೆ ನೀಡಿದರು.
---ಬಾಕ್ಸ್---ಈಶ್ವರ ಖಂಡ್ರೆ ಹೊಗಳಿದ ರಾಜ್ಯಪಾಲ ಥಾವರಚಂದ್
ರಾಜ್ಯ ಸರ್ಕಾರದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅವರು ರಾಜ್ಯದಲ್ಲಿನ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಸಾಕಷ್ಟು ಕಾರ್ಯ ಯೋಜನೆಗಳನ್ನು ಹಾಕಿಕೊಂಡು ಮುಂದೆ ಸಾಗಿ ಜನಪ್ರಿಯರಾಗಿದ್ದಾರೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಶ್ಲಾಘಿಸಿದರು.ಪರಿಸರ ಅಸಮತೋಲನ ನಿಯಂತ್ರಣಕ್ಕಾಗಿ ಅರಣ್ಯೀಕರಣ ಹೆಚ್ಚಳಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ನೀರಿದ್ದರೆ ಮಾತ್ರ ಭವಿಷ್ಯವಿದೆ ಎಂಬುವದನ್ನು ಅರಣ್ಯ ಸಚಿವ ಖಂಡ್ರೆ ಗಂಭೀರವಾಗಿಟ್ಟುಕೊಂಡು ಶ್ರಮಿಸುತ್ತಿರುವುದು ವಿಶೇಷ ಎಂದು ಅವರು ತಿಳಿಸಿದರು.
-----ಬಾಕ್ಸ್-----ಕನ್ನಡದಲ್ಲಿ ಮಾತನಾಡಿದ ರಾಜ್ಯಪಾಲ ಥಾವರಚಂದ್
ಎಲ್ಲರಿಗೂ ನಮಸ್ಕಾರ ನಾನು ನಿಮಗೆ ಎಲ್ಲರನ್ನೂ ಸ್ವಾಗತಿಸುತ್ತೇನೆ ಎಂದು ಕನ್ನಡದಲ್ಲಿ ಹೇಳುವ ಭಾಷಣ ಆರಂಭಿಸಿ ಎಲ್ಲರಿಗೂ ಧನ್ಯವಾದಗಳು, ಜೈ ಹಿಂದ್ ಜೈ ಕರ್ನಾಟಕ ಎಂದು ಹೇಳುವ ಮೂಲಕ ಭಾಷಣ ಮುಗಿಸಿ ಎಲ್ಲರೂ ಚಪ್ಪಾಳೆಯ ಸುರಿಮಳೆ ಹರಿಸುವಂತೆ ಮಾಡಿದರು.--ಫೈಲ್ 22ಬಿಡಿ7