ನಿರೀಕ್ಷೆಗೂ ಮೀರಿ ಹೆಸರು ಬೆಳೆ ಬಿತ್ತನೆ

| Published : Jun 12 2024, 12:39 AM IST

ಸಾರಾಂಶ

ತಾಲೂಕಿನಾದ್ಯಂತ ನಿರೀಕ್ಷೆಗೂ ಮೀರಿ ಈ ವರ್ಷ ಹೆಸರು ಬೆಳೆ ಬಿತ್ತನೆ ಆಗಿದೆ. ಉತ್ತಮ ಮುಂಗಾರು ಮಳೆ ಸುರಿದ ಹಿನ್ನೆಲೆ ರೈತರು ಹೆಸರು ಬೆಳೆ ಬಿತ್ತನೆ ಮಾಡಿದ್ದಾರೆ.

ತಾಲೂಕಿನಲ್ಲಿ ಗುರಿಗಿಂತ ದುಪ್ಪಟ್ಟು ಪ್ರದೇಶದಲ್ಲಿ ಬಿತ್ತನೆ । ಕಳೆದ ಸಾರಿ ಉತ್ತಮ ಬೆಲೆ ಹಿನ್ನೆಲೆ ರೈತ ವರ್ಗದಲ್ಲಿ ಆಶಾಭಾವನೆಅಮರೇಶ್ವರಸ್ವಾಮಿ ಕಂದಗಲ್ಲಮಠ

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನಾದ್ಯಂತ ನಿರೀಕ್ಷೆಗೂ ಮೀರಿ ಈ ವರ್ಷ ಹೆಸರು ಬೆಳೆ ಬಿತ್ತನೆ ಆಗಿದೆ. ಉತ್ತಮ ಮುಂಗಾರು ಮಳೆ ಸುರಿದ ಹಿನ್ನೆಲೆ ರೈತರು ಹೆಸರು ಬೆಳೆ ಬಿತ್ತನೆ ಮಾಡಿದ್ದಾರೆ.

ರೋಹಿಣಿ ಮಳೆ ಆರಂಭದಿಂದ ಹೆಸರು ಬೆಳೆ ಬಿತ್ತನೆಯನ್ನು ರೈತರು ಮಾಡಿದ್ದಾರೆ. ಕೇವಲ ಒಂದು ಎಕರೆ ಬಿತ್ತುವವರು ಈ ವರ್ಷ ಮೂರು ಪಟ್ಟು ಹೆಸರು ಬಿತ್ತನೆ ಮಾಡಿದ್ದಾರೆ. ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿಗೆ ಬಿತ್ತನೆ ಆಗಿದೆ. ಕೃಷಿ ಇಲಾಖೆ ಪ್ರಕಾರ ಕುಕನೂರು ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಆಗಬೇಕಾದ ಒಟ್ಟು 18 ಸಾವಿರ ಹೆಕ್ಟೇರ್ ಭೂಮಿಯಲ್ಲಿ 2341 ಹೆಕ್ಟೇರ್ ಹೆಸರು ಬೆಳೆ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಅಂದಾಜು ಪ್ರಕಾರ ಸದ್ಯ ಐದು ಸಾವಿರ ಹೆಕ್ಟೇರ್‌ಗೂ ಹೆಚ್ಚು ಹೆಸರು ಬೆಳೆ ಬಿತ್ತನೆ ಆಗಿದೆ.

ಅಲ್ಪಾವಧಿ ಬೆಳೆ:ಹೆಸರು ಬೆಳೆ ಎರಡುವರೆ ತಿಂಗಳಲ್ಲಿ ಫಸಲು ಬಂದು ಬಿಡುತ್ತದೆ. ಅಲ್ಲದೆ ಇಳುವರಿಗೂ ಸಹ ರೈತರು ಕೂಲಿ ಆಳುಗಳನ್ನು ಹಚ್ಚಿ ಬೆಳೆ ಕಟಾವು ಮಾಡಬೇಕು ಎಂದಿಲ್ಲ. ಹೆಸರು ಬುಡ್ಡಿ ಬಿಡಿಸಲು ಆಳುಗಳ ಅವಶ್ಯಕತೆ ಸದ್ಯಕ್ಕಿಲ್ಲ. ಅನ್ಯ ರಾಜ್ಯಗಳಿಂದ ಹೆಸರು ಬೆಳೆ ಬಂದ ವೇಳೆಗೆ ಕಟಾವು ಮೀಷನ್‌ಗಳು ಬರುತ್ತಿದ್ದು, ತಾಸೋತ್ತಿನಲ್ಲಿ ಐದಾರು ಎಕರೆ ಕಟಾವು ಆಗಿ ಬಿಡುತ್ತದೆ. ಹಾಗಾಗಿ ಈ ಸಲ ರೈತರು ಅಲ್ಪಾವಧಿ ಬೆಳೆಯಾದ ಹೆಸರು ಬೆಳೆ ಬಿತ್ತನೆಗೆ ಹೆಚ್ಚಿನ ಪ್ರಮಾಣದಲ್ಲಿ ಮುಂದಾಗಿದ್ದಾರೆ.ಕಳೆದ ಬಾರಿ ಉತ್ತಮ ಬೆಲೆ:

ಕಳೆದ ವರ್ಷ ಹೆಸರು ಬೆಳೆಗೆ ಉತ್ತಮ ಬೆಲೆ ಬಂದಿತ್ತು. ಕ್ವಿಂಟಲ್ ಹೆಸರಿಗೆ ₹10 ಸಾವಿರದಿಂದ 12 ಸಾವಿರದವರೆಗೂ ಮಾರಾಟ ಆಗಿತ್ತು. ಹಾಗಾಗಿ ರೈತರು ಉತ್ತಮ ಬೆಲೆ ಸಿಗಬಹುದು ಎಂದು ಆಶಾಭಾವನೆಯೊಂದಿಗೆ ಈ ಸಲವೂ ಅಧಿಕ ಪ್ರಮಾಣದಲ್ಲಿ ಹೆಸರು ಬೆಳೆ ಬಿತ್ತನೆ ಮಾಡಿದ್ದಾರೆ.

ಈ ಸಲ ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆ ಬಿತ್ತನೆ ಮಾಡಿದ್ದಾರೆ. ಹೆಸರು ಅಲ್ಪಾವಧಿ ಬೆಳೆ ಆಗಿರುವುದರಿಂದ ಹಾಗೂ ಉತ್ತಮ ಮಳೆ ಸುರಿದಿದ್ದರಿಂದ ಹೆಚ್ಚಾಗಿ ಎಲ್ಲರೂ ಹೆಸರು ಬಿತ್ತನೆಗೆ ಮುಂದಾಗಿದ್ದಾರೆ. ಕುಕನೂರು ತಾಲೂಕಿನಲ್ಲಿ ಅಂದಾಜು ಐದು ಸಾವಿರ ಹೆಕ್ಟೇರಿಗೂ ಅಧಿಕ ಬಿತ್ತನೆ ಆಗಿದೆ ಎಂದು ಅಂದಾಜಿಸಲಾಗಿದೆ ಎಂದು ಕುಕನೂರನ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಸವರಾಜ ತೇರಿನ ತಿಳಿಸಿದ್ದಾರೆ.