ಸಾರಾಂಶ
೨೦೨೪-೨೫ನೇ ಸಾಲಿಗೆ ರೈತರಿಗೆ ಸೌಲಭ್ಯ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣತಾಲೂಕಿನಲ್ಲಿ ಜೂನ್ ಮೊದಲ ವಾರ ಉತ್ತಮ ಮಳೆಯಾಗಿದ್ದು, ಮುಂಗಾರು ಬೆಳೆಗಳ ಬಿತ್ತನಗೆಗಾಗಿ ಭೂಮಿ ಸಿದ್ಧತೆಗೆ ಮುಂದಾಗಿರುವ ರೈತರು ಕೃಷಿ ಇಲಾಖೆಯಲ್ಲಿ ದೊರೆಯುವ ಎಲ್ಲ ರೀತಿಯ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಪಡೆದು ಉತ್ತಮ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ಎಂ.ಎಸ್.ಜನಾರ್ಧನ್ ತಿಳಿಸಿದರು.
ಕೃಷಿ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿಗೆ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ತಮ್ಮ ಕಚೇರಿಯಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿ, ‘ಚನ್ನರಾಯಪಟ್ಟಣ ತಾಲೂಕಿನಲ್ಲಿ ಪೂರ್ವ ಮುಂಗಾರು ಏಪ್ರಿಲ್ ಮಾಹೆಯಿಂದ ಆರಂಭವಾದರೂ, ಏಪ್ರಿಲ್ ತಿಂಗಳಲ್ಲಿ ಬಿದ್ದ ಮಳೆ ವಾಡಿಕೆ ಮಳೆಗೆ ಕೊರತೆ ಆಗಿತ್ತು, ಮೇ ಕೊನೆ ವಾರ, ಜುಲೈ ಮೊದಲ ವಾರದಲ್ಲಿ ಬಿದ್ದ ಉತ್ತಮ ಮಳೆ ಮತ್ತು ಮಳೆ ಬಿಡುವ ನೀಡಿರುವ ಹಿನ್ನೆಲೆ ಭೂಮಿ ಸಿದ್ಧತೆಗೆ ಮುಂದಾಗಿರುವ ರೈತರು ಕೃಷಿ ಇಲಾಖೆಯ ಎಲ್ಲಾ ೬ ಹೋಬಳಿ ಕೇಂದ್ರಗಳಲ್ಲಿಯೂ ಅವಶ್ಯವಿರುವ ಬಿತ್ತನೆ ಬೀಜಗಳ ದಾಸ್ತಾನಿದ್ದು ರಿಯಾಯಿತಿ ದರದಲ್ಲಿ ಸಿಗುವ ಬಿತ್ತನೆ ಬೀಜಗಳನ್ನು ಪಡೆದು ಬಿತ್ತನೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.‘ಇದುವರೆಗೂ ತಾಲೂಕಿನಲ್ಲಿ ೪೨ ಸಾವಿರ ಹೆಕ್ಟೇರ್ ಸಾಗುವಳಿ ಪ್ರದೇಶದ ಪೈಕಿ ಮುಂಗಾರು ಹಂಗಾಮಿನಲ್ಲಿ ೧೦೧೫ ಹೆಕ್ಟರ್ ಪ್ರದೇಶದಲ್ಲಿ ಆಲಸಂದೆ, ೭೮೫ ಹೆಕ್ಟರ್ ಪ್ರದೇಶದಲ್ಲಿ ಮುಸುಕಿನ ಜೋಳ, ೫೦ ಹೆಕ್ಟರ್ ಪ್ರದೇಶದಲ್ಲಿ ರೈತರು ಜೋಳ, ೯೬ ಹೆಸರು, ೧೮ ಹೆಕ್ಟರ್ ಪ್ರದೇಶದಲ್ಲಿ ಉದ್ದು ಬೆಳೆ ಬಿತ್ತನೆಯಾಗುವ ಮೂಲಕ ಶೇ.೫ರಷ್ಟು ಬಿತ್ತನೆಯಾಗಿದೆ. ಇನ್ನೂ ಇದೀಗ ಮೊದಲ ಹಂತದಲ್ಲಿ ೧೦೦.೧೩ ಕ್ವಿಂಟಾಲ್ ಮುಸುಕಿನ ಜೋಳ, ೧೩೧.೧೫ ಕ್ವಿಂಟಾಲ್ ರಾಗಿ, ೫೨ ಕ್ವಿಂಟಾಲ್ ಆಲಸಂದೆ, ೨೫ ಕ್ವಿಂಟಾಲ್ ಭತ್ತ ಸೇರಿ ಒಟ್ಟಾರೆ ೩೦೮.೨ ಕ್ವಿಂಟಾಲ್ ಬಿತ್ತನೆ ಬೀಜ ತಾಲೂಕಿನ ೪೨ ದಾಸ್ತಾನಿದೆ. ಬೇಡಿಕೆ ಅನುಗುಣವಾಗಿ ಸಾವಿರ ಹೆಕ್ಟೇರ್ ರೈತರಿಗೆ ಬಿತ್ತನೆ ಬೀಜ ಲಭ್ಯವಿದೆ. ತಾಲೂಕಿನ ಪಿಎಸಿಸಿಎಸ್ ಕೇಂದ್ರ ಮತ್ತು ಖಾಸಗಿ ಮಾರಾಟಗಾರರ ಬಳಿ ಸೇರಿ ೨೫೯೧ ಎಂ.ಟಿ. ರಸಗೊಬ್ಬರ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.
ರೈತರು ತಾವು ಬಿತ್ತಿದ ಪೂರ್ವ ಮುಂಗಾರು, ಮುಂಗಾರು ಹಂಗಾಮಿನ ಬೆಳೆ ಮಾಹಿತಿಯನ್ನು ರೈತರು ಸ್ವತಃ ತಾವೇ ಸಮೀಕ್ಷೆ ಆ್ಯಪ್ ಮುಖೇನ ಅಪ್ಲೋಡ್ ಮಾಡಬೇಕು, ಇದರೊಂದಿಗೆ ಪಿಆರ್ ಆ್ಯಪ್ ಮುಖಾಂತರವೂ ಬೆಳೆದ ಬೆಳೆಯನ್ನು ಸರಿಯಾದ ರೀತಿಯಲ್ಲಿ ಆಪ್‌ಲೋಡ್ ಮಾಡಬೇಕು, ಇದರಿಂದ ಬೆಳೆ ವಿಮೆ ಸೇರಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ವಿವರಿಸಿದರು.