ಶಾಲೆ ತೊರೆದ ಮಕ್ಕಳ ಭವಿಷಕ್ಕೆ ಬೆಳಕಾಗಲು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ನಾಯ್ಕ್ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಫೀಲ್ಡಿಗಿಳಿದಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಾಲೆ ತೊರೆದ ಮಕ್ಕಳ ಭವಿಷಕ್ಕೆ ಬೆಳಕಾಗಲು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ನಾಯ್ಕ್ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಫೀಲ್ಡಿಗಿಳಿದಿದೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಬೃಹತ್ ಕಾರ್ಯಕ್ರಮದ ಯಶಸ್ವಿಗಾಗಿ ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿವಮೊಗ್ಗ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿವೆ.ದಿಢೀರ್ ಭೇಟಿ; ಪೋಷಕರ ಮನವೊಲಿಕೆ: ಈ ಕಾರ್ಯಾಚರಣೆಗೂ ಮುನ್ನವೇ ಶಿಕ್ಷಣ ಇಲಾಖೆಯು ಶಾಲೆ ತೊರೆದ ಮಕ್ಕಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿತ್ತು. ಯಾವ್ಯಾವ ಗ್ರಾಮಗಳಲ್ಲಿ ಮಕ್ಕಳಿದ್ದಾರೆ, ಅವರು ಶಾಲೆ ಬಿಟ್ಟು ಪ್ರಸ್ತುತ ಏನು ಮಾಡುತ್ತಿದ್ದಾರೆ ಎಂಬ ಪೂರ್ಣ ಮಾಹಿತಿಯನ್ನು ಕಲೆಹಾಕಲಾಗಿತ್ತು.
ಈ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳ ತಂಡವು ಮಕ್ಕಳ ಮನೆ ಹಾಗೂ ಅವರಿರುವ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿತು. ಈ ವೇಳೆ ಮಕ್ಕಳು ಮತ್ತು ಅವರ ಪೋಷಕರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಅಧಿಕಾರಿಗಳು, ಉಚಿತ ಶಿಕ್ಷಣದ ಮಹತ್ವ ಹಾಗೂ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.ಕಡ್ಡಾಯ ಶಿಕ್ಷಣ ಮತ್ತು ಕಾಯ್ದೆಗಳ ಅರಿವು ಸಮಾಲೋಚನೆಯ ವೇಳೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಬಾಲ ಕಾರ್ಮಿಕ ನಿಷೇಧ ಕಾಯ್ದೆಗಳ ಕುರಿತು ಪೋಷಕರಿಗೆ ಅರಿವು ಮೂಡಿಸಲಾಯಿತು. ಉನ್ನತ ಅಧಿಕಾರಿಗಳೇ ನೇರವಾಗಿ ಮನೆ ಬಾಗಿಲಿಗೆ ಬಂದು ತಿಳಿಹೇಳಿದ ರೀತಿಯಿಂದ ಪ್ರಭಾವಿತರಾದ ಹಲವು ಪೋಷಕರು, ತಮ್ಮ ಮಕ್ಕಳನ್ನು ತಕ್ಷಣವೇ ಮರಳಿ ಶಾಲೆಗೆ ಸೇರಿಸಲು ಸಮ್ಮತಿ ಸೂಚಿಸಿದರು.