ಸಾರಾಂಶ
ಚಿತ್ರದುರ್ಗ: ಈ ನಮ್ ಪೊಲೀಸರಿಗೆ ಏಕೆ ಇಷ್ಟೊಂದು ಹೊಟ್ಟೆ ಬಂದಿದೆ. ಹೊಟ್ಟೆ ಇಟ್ಕಂಡು ಅದ್ಹೇಗೆ ಡ್ಯೂಟಿ ಮಾಡ್ತಾರೆ, ಆರೋಗ್ಯ ಹೇಗೆ ಕಾಪಾಡಿ ಕೊಳ್ತಾರೆ, ನನ್ನಹಾಗೆ ಯಾಕೆ ಸ್ಟಿಫ್ ಆಗಿಲ್ಲ. ಈ ಹೊಟ್ಟೆ ಇಳಿಸೋಕೆ ಏನಾದ್ರೂ ಪ್ಲಾನ್ ಮಾಡಬೇಕಲ್ಲವಾ? ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಕೈಕೆಳಗಿನ ಸಿಬ್ಬಂದಿ ದೇಹದ ಆಕೃತಿ ನೋಡಿದ ತಕ್ಷಣ ಇಂತಹದ್ದೊಂದು ಪ್ರಶ್ನೆ ಸಹಜವಾಗಿ ಎದುರಾಗುತ್ತದೆ. ಆದರೆ ಚಿತ್ರದುರ್ಗದ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಬೇರೆಯವರಿಗಿಂತ ತುಸು ಭಿನ್ನ. ಪೊಲೀಸರ ಬೊಜ್ಜು ಇಳಿಸುವ ಆಲೋಚನೆಗಳ ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದು, ಮಂಗಳವಾರ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಸ್ಪಷ್ಟ ಸ್ವರೂಪ ಕೊಟ್ಟಿದ್ದಾರೆ.
ಕೆಲಸದ ಒತ್ತಡ, ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು ಹಾಗೂ ವ್ಯಾಯಾಮದ ಕೊರತೆಯಿಂದ ಪೊಲೀಸರ ಆರೋಗ್ಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದರಿಂದ ಬಹಳ ಜನರಲ್ಲಿ ತೂಕ ಹೆಚ್ಚಾಗುವುದು, ಸಕ್ಕರೆ ಕಾಯಿಲೆ ಸೇರಿದಂತೆ ಜೀವನ ಅಭ್ಯಾಸಕ್ಕೆ ಸಂಬಂಧಿಸಿದ ಹಲವು ರೋಗಗಳು ಬರುತ್ತವೆ. ಬಹಳಷ್ಟು ಪೊಲೀಸರಲ್ಲಿ ಬೊಜ್ಜಿನ ಸಮಸ್ಯೆ ಕಂಡುಬರುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ವಿನೂತನ ಪ್ರಯತ್ನ ಕೈಗೊಳ್ಳಲಾಗಿದೆ ಎಂಬುದು ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಉವಾಚ.
ಇದಕ್ಕಾಗಿ ಇಸ್ರೇಲ್ ಮೂಲದ ಹೈಗೇರ್ ಕಂಪನಿ ಸಹಯೋಗದಲ್ಲಿ ಪೊಲೀಸರ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ವ್ಯಾಯಮ ಪರಿಕರಗಳನ್ನು ತರಿಸಿ ವಿತರಿಸಿದ್ದಾರೆ.
ಈ ವೇಳೆ ಮಾತನಾಡಿದ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ಇಸ್ರೇಲ್ ಮೂಲದ ಹೈಗೇರ್ ಕಂಪನಿಯ ಸಹಯೋಗದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಪೊಲೀಸರಿಗೆ ವ್ಯಾಯಾಮದ ಪರಿಕರ ನೀಡಲಾಗುತ್ತಿದೆ. ಹೈಗೇರ್ ಒಂದು ಬಹುರಾಷ್ಟ್ರೀಯ ಕಂಪನಿಯಾಗಿದ್ದು, ದೈಹಿಕ ಸದೃಢತೆ ಕಾಪಾಡಿಕೊಳ್ಳುವ ಪರಿಕರಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಇಸ್ರೇಲ್ ಪೊಲೀಸರಿಗೆ ಕಂಪನಿ ವ್ಯಾಯಾಮ ಪರಿಕರ ನೀಡಿ ಯಶಸ್ವಿಯಾಗಿದೆ. ನೆರೆಯ ತೆಲಂಗಾಣ ಪೊಲೀಸರೊಂದಿಗೂ ಹೈಗೇರ್ ಕಂಪನಿ ಪೊಲೀಸರ ಬೊಜ್ಜು ನಿವಾರಣೆಗೆ ಕೈಜೋಡಿಸಿದೆ ಎಂದರು.
ಏನಿದು ಸ್ಮಾರ್ಟ್ ತಂತ್ರಜ್ಞಾನ: ಹೈಗೇರ್ ಕಂಪನಿಯ ಎಲಾಸ್ಟಿಕ್ ಬೆಲ್ಟ್ ದೈಹಿಕ ವ್ಯಾಯಾಮಕ್ಕೆ ಪ್ರೇರಕವಾಗಿರುವ ಪರಿಕರ. ಇದಕ್ಕೆ ಬ್ಲೂಟೂತ್ ಅಳವಡಿಸಲಾಗಿದ್ದು, ಸ್ಮಾರ್ಟ್ ಫೋನ್ ಸಂಪರ್ಕದಲ್ಲಿ ಇರುತ್ತದೆ. ಇದರೊಂದಿಗೆ ಕೈಗೆ ಧರಿಸಲು ಸ್ಮಾರ್ಟ್‌ವಾಚ್ ಸಹಿತ ನೀಡಲಾಗಿದೆ. ಸ್ಮಾರ್ಟ್ ವಾಚ್ ದೈನಂದಿನ ನಡಿಗೆ, ಹೃದಯ ಬಡಿತ, ಕ್ಯಾಲೋರಿಗಳ ವ್ಯಯದ ಬಗ್ಗೆ ಮಾಹಿತಿ ನೀಡುತ್ತದೆ. ಸ್ಮಾರ್ಟ್ ಪೋನ್‌ನಲ್ಲಿ ಹೈಗೇರ್ ತಂತ್ರಾಶ ಅಳವಡಿಸಿಕೊಂಡರೆ ವ್ಯಕ್ತಿಯ ದೈನದಿಂನ ಚಟುವಟಿಕೆಗಳ ಸಕಲ ಮಾಹಿತಿ ಶೇಖರಣೆಯಾಗಲಿದೆ. ಜಿಮ್ ಹಾಗೂ ದೈಹಿಕ ವ್ಯಾಯಾಮಗಳನ್ನು ಮಾಡಲು ಹೊರಗಡೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಅಥವಾ ಕೆಲಸದ ಸ್ಥಳಗಳಲ್ಲಿಯೇ ಎಲಾಸ್ಟಿಕ್ ಬೆಲ್ಟ್ಅನ್ನು ಮರ, ಕಂಬ, ಕಿಟಕಿಗಳಿಗೆ ನೇತು ವ್ಯಾಯಾಮ ಮಾಡಬಹುದು. ಸುಮಾರು 410ಕ್ಕೂ ವಿವಿಧ ವ್ಯಾಯಾಮಗಳಿಗೆ ಎಲಾಸ್ಟಿಕ್ ಬೆಲ್ಟ್ ಅನುಕೂಲವಾಗಿದೆ.
ಜಿಲ್ಲೆಯ ಪೊಲೀಸರ ವೈದ್ಯಕೀಯ ತಪಾಸಣೆ ಒಳಪಡಿಸಿದ ನಂತರ 134 ಪೊಲೀಸರ ದೈಹಿಕ ತೂಕ ಸೂಚ್ಯಂಕ ಪ್ರಮಾಣ 29ಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ.
ಇವರೆಲ್ಲ ಬೊಜ್ಜಿನ ಸಮಸ್ಯೆಗೆ ಒಳಗಾಗಿದಾರೆ. ಬೊಜ್ಜು ಇರುವ ಪೊಲೀಸ್ ಸಿಬ್ಬಂದಿಗೆ ಈಗಾಗಲೇ ಹೃದಯ ತಜ್ಞರು, ಫಿಜಿಯೋ ಥೆರಪಿಸ್ಟ್ ಸೇರಿದಂತೆ ಅಗತ್ಯ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಅವರ ಆಹಾರ ಕ್ರಮ, ದೈಹಿಕ ಸಾಮರ್ಥ್ಯ ಅರಿತು, ವ್ಯಾಯಾಮದ ಗುರಿ ನಿಗದಿ ಮಾಡಲಾಗಿದೆ. ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ಪರಿಕರಗಳನ್ನು 120 ಪೊಲೀಸರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇವರಿಗೆ ವ್ಯಾಯಮ ಪರಿಕರಗಳನ್ನು ಉಪಯೋಗಿಸುವ ಕುರಿತು ಮಾಹಿತಿ ನೀಡಲಾಗುವುದು. ತಂತ್ರಾಶದಲ್ಲಿ ವ್ಯಾಯಾಮ ಮಾಡುವ ಕ್ರಮಗಳ ವಿಡಿಯೋಗಳು ಇವೆ. ಇದರಿಂದ ವೈಯಕ್ತಿಕ ತರಬೇತುದಾರರ ಅವಶ್ಯಕತೆ ಇರುವುದಿಲ್ಲ.
ಪ್ರತಿದಿನ ಪೊಲೀಸ್ ಸಿಬ್ಬಂದಿ ಮಾಡುವ ವ್ಯಾಯಮಗಳ ಮಾಹಿತಿ ತಂತ್ರಾಶದಲ್ಲಿ ದಾಖಲು ಆಗಲಿದೆ. ಇದು ನೇರವಾಗಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಲುಪಲಿದೆ. ಬೊಜ್ಜು ಇರುವ ಪೊಲೀಸರಲ್ಲಿ 3 ತಿಂಗಳ ಅವಧಿಯಲ್ಲಿ ಉಂಟಾಗುವ ಬದಲಾವಣೆ ಹಾಗೂ ಫಲಶೃತಿ ಮೌಲ್ಯಮಾಪನ ಮಾಡಲಾಗುವದು. ಇದರೊಂದಿಗೆ ಪರಿಕರ ನೀಡದೆ ಇರುವ ಬೊಜ್ಜು ಹೊಂದಿರುವ ಪೊಲೀಸ್ ಸಿಬ್ಬಂದಿಯ ಆರೋಗ್ಯ ಸಹ ಮೌಲ್ಯಮಾಪನ ಮಾಡಿ, ತಾಳೆ ನೋಡಲಾಗುವುದು. ಪರಿಣಾಮಕಾರಿ ಎನಿಸಿದರೆ, ಮುಂದಿನ ದಿನಮಾನಗಳಲ್ಲಿ ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಉಳಿದ ಪೊಲೀಸರಿಗೂ ವ್ಯಾಯಾಮ ಪರಿಕರವನ್ನು ವಿತರಣೆ ಮಾಡುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಹೈಗೇರ್ ಕಂಪನಿ ಜನರ ಜೀವನದಲ್ಲಿ ಬದಲಾವಣೆ ತರುವುದರಲ್ಲಿ ಸಹಾಯ ಮಾಡುತ್ತಿದೆ. ಪೊಲೀಸರು ಸಹ ಸಮಾಜ ಸ್ವಾಸ್ಥ್ಯ ಕಾಪಾಡುತ್ತಾರೆ. ಇನ್ನೊಬ್ಬರಿಗೆ ನೆರವು ನೀಡುತ್ತಾರೆ. ಇಂತಹ ಪೊಲೀಸರ ಆರೋಗ್ಯದ ಕಾಳಜಿಯೂ ಮುಖ್ಯವಾದದು. ಈ ನಿಟ್ಟಿನಲ್ಲಿ ಚಿತ್ರದುರ್ಗ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸ್ಮಾರ್ಟ್ ತಂತ್ರಾಶ ಆಧಾರಿತ ದೈಹಿಕ ವ್ಯಾಯಾಮ ಪರಿಕರಗಳನ್ನು ಪೊಲೀಸ್ ಸಿಬ್ಬಂದಿ ನೀಡಲಾಗಿದೆ ಎಂದು ಹೈಗೇರ್ ಕಂಪನಿ ಎಲಿ ಪಾಂಪ್‌ಲಿಂಗರ್ ಈ ಸಂದರ್ಭದಲ್ಲಿ ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))