ಗನ್‌ಮ್ಯಾನ್ ದೇವರಾಜ್‌ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಬಳ್ಳಾರಿ: ತಾಲೂಕಿನ ಮೋಕಾ ಫಾರೆಸ್ಟ್‌ ಬಳಿ ಪಡಿತರ ಅಕ್ಕಿ ಸಾಗಾಟ ವಾಹನ ತಡೆದು ₹3 ಲಕ್ಷ ವಸೂಲಿ ಮಾಡಿದ ಎಸ್ಪಿ ಗನ್‌ಮ್ಯಾನ್ ದೇವರಾಜ್ ಹಾಗೂ ಸಾಯಿರಾಮ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಗನ್‌ಮ್ಯಾನ್ ದೇವರಾಜ್‌ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿ ವಕೀಲ ಗಾದಿಲಿಂಗಪ್ಪ ತಲೆಮರೆಸಿಕೊಂಡಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಏ. 28ರಂದು ಬೆಳಗಿನ ಜಾವ 3.30ರಿಂದ 5.30ರ ಮಧ್ಯದ ಅವಧಿಯಲ್ಲಿ ಶರಭಯ್ಯ ಎಂಬವರಿಗೆ ಸೇರಿದ ಪಡಿತರ ಅಕ್ಕಿ ಸಾಗಾಟ ವಾಹನವನ್ನು ಮೋಕಾ ಫಾರೆಸ್ಟ್‌ ಬಳಿ ತಡೆದ ಎಸ್ಪಿ ಗನ್‌ಮ್ಯಾನ್‌ ದೇವರಾಜ ಸೇರಿದಂತೆ ಮೂವರು ಆರೋಪಿಗಳು, ತಾವು ಎಸ್ಪಿ ಸ್ಕ್ವಾಡ್‌ ಎಂದು ಹೇಳಿಕೊಂಡು, ₹5 ಲಕ್ಷ ನೀಡಿದಲ್ಲಿ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಎಂದು ಹೇಳಿದ್ದಾರೆ.

ಕೊನೆಗೆ ಶರಭಯ್ಯ ಅವರಿಂದ ₹3 ಲಕ್ಷ ಸುಲಿಗೆ ಮಾಡಿದ್ದಾರೆ. ಈ ಕುರಿತು ಶರಭಯ್ಯ ಮೇ 6ರಂದು ಮೋಕಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೇ 7ರಂದು ಎಸ್ಪಿ ಗನ್‌ಮ್ಯಾನ್ ದೇವರಾಜ್ ಹಾಗೂ ಸಾಯಿರಾಮ್ ಎಂಬಾತನನ್ನು ಬಂಧಿಸಿ, ಆರೋಪಿಗಳಿಂದ ಸುಲಿಗೆ ಮಾಡಿದ ಹಣ, ಕೃತ್ಯಕ್ಕೆ ಬಳಸಿದ ಕಾರ್‌ನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಗಾದಿಲಿಂಗಪ್ಪ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್‌ ಕಸ್ಟಡಿಗೆ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಬಾಕ್ಸ್:

ಐಜಿ, ಎಸ್ಪಿ ಸ್ಕ್ವಾಡ್‌ಗಳಿಲ್ಲ:

ಜಿಲ್ಲೆಯಲ್ಲಿ ಐಜಿಪಿ, ಎಸ್ಪಿ, ಡಿವೈಎಸ್ಪಿ ಅವರ ಯಾವುದೇ ಸ್ಕ್ವಾಡ್‌ಗಳನ್ನು ರಚನೆ ಮಾಡಿಲ್ಲ ಎಂದು ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಸ್ಪಷ್ಟಪಡಿಸಿದರು.ಎಸ್ಪಿ ಗನ್‌ಮ್ಯಾನ್ ಸ್ಕ್ವಾಡ್ ಹೆಸರಿನಲ್ಲಿ ಹಣ ವಸೂಲಿ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾವುದೇ ಸ್ಕ್ವಾಡ್‌ಗಳನ್ನು ರಚನೆ ಮಾಡಿಲ್ಲ. ಸ್ಕ್ವಾಡ್‌ ಹೆಸರಿನಲ್ಲಿ ಯಾರಾದರೂ ಬೆದರಿಕೆ, ಹಣ ವಸೂಲಿಗೆ ಬಂದಲ್ಲಿ ಖುದ್ದಾಗಿ ಎಸ್ಪಿ ಕಚೇರಿಯನ್ನು ಸಂಪರ್ಕಿಸಬಹುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.