ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಈದ್ ಮಿಲಾದ್ ಹಬ್ಬದ ದಿನ ರಾಗಿಗುಡ್ಡದಲ್ಲಿ ನಡೆದಿದ್ದ ಗಲಭೆ ಕಹಿನೆನಪು ಮರೆಯಾಗಿ, ಅಲ್ಲಿ ಶಾಂತಿ- ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಗಣರಾಜ್ಯೋತ್ಸವ ಅಂಗವಾಗಿ ರಿಪಬ್ಲಿಕ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಎಸ್‌ಪಿ ಅವರು ಉದ್ಘಾಟನೆ ನೆರವೇರಿಸಿದರು.
ಮೂರು ತಿಂಗಳ ಹಿಂದೆ ರಾಗಿಗುಡ್ಡದಲ್ಲಿ ಸಣ್ಣ ವಿಚಾರಕ್ಕೆ ದೊಡ್ಡ ಗಲಭೆಯೇ ನಡೆದುಹೋಗಿತ್ತು. ಗಲಭೆ ವೇಳೆ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿತ್ತು. 20 ದಿನಗಳ ಕಾಲ ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಬಳಿಕ ಸಾರ್ವಜನಿಕರೊಟ್ಟಿಗೆ ಪೊಲೀಸ್ ಇಲಾಖೆ ಹಲವು ಸಭೆ ನಡೆಸಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು, ಶಾಂತಿ ಕಾಪಾಡುವ ಉದ್ದೇಶದಿಂದ ರಾಗಿಗುಡ್ಡದ ನಿವಾಸಿಗಳಿಗಾಗಿಯೇ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ. ಹಿಂದು, ಮುಸ್ಲಿಂ ಸೇರಿದಂತೆ ಪೊಲೀಸ್ ಸಿಬ್ಬಂದಿ, ಮಾಧ್ಯಮದವರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ.ಪ್ರತಿ ತಂಡಕ್ಕೆ ಇಲಾಖಾ ವತಿಯಿಂದಲೇ ತಂಡದ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, 4 ಜನ ಹಿಂದೂ ಯುವಕರು, 4 ಮುಸ್ಲಿಂ, ಓರ್ವ ಕ್ರಿಶ್ಚಿಯನ್, 2 ಪೊಲೀಸ್, ಓರ್ವ ಪತ್ರಕರ್ತ ಒಳಗೊಂಡ 11 ಜನರ ತಂಡ ರಚಿಸಲಾಗಿದೆ. 8 ತಂಡಗಳು ಭಾಗವಹಿಸಿದ್ದು, ಪ್ರತಿ ತಂಡಕ್ಕೆ 5 ಓವರ್ ನಿಗದಿಪಡಿಸಲಾಗಿತ್ತು.
ರಾಗಿಗುಡ್ಡದ ಕ್ರಿಕೆಟ್ ಮೈದಾನದಲ್ಲಿ ಬುಧವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಶಾಂತಿ ಸಂಕೇತ ಆಗಿರುವ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಉದ್ಘಾಟಿಸಿದರು.ಮಿಥುನ್‌ಕುಮಾರ್ ಮಾತನಾಡಿ, ಈಗಾಗಲೇ 150 ಕ್ರೀಡಾಸಕ್ತರು ನೋಂದಣಿ ಮಾಡಿಕೊಂಡಿದ್ದಾರೆ. ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಸಹ ಮಾಡಲಾಗಿದೆ. ಜ.25ರಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾವಳಿಗಳು ನಡೆಯಲಿದ್ದು, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್‍ಕುಮಾರ್ ಭೂಮರೆಡ್ಡಿ, ಎ.ಜಿ.ಕಾರ್ಯಪ್ಪ, ಉಪಾಧೀಕ್ಷಕ ಸುರೇಶ್, ಪೊಲೀಸ್ ಅಧಿಕಾರಿಗಳಾದ ರವಿ ಪಾಟೀಲ್, ಕುಮಾರ್, ಸಿ.ಆರ್. ಕೊಪ್ಪನ್, ಟಿ.ಹರ್ಷ ಮತ್ತಿತರರು ಇದ್ದರು.- - -ಬಾಕ್ಸ್ ಶಾಂತಿ, ಸುವ್ಯವಸ್ಥೆಗೆ ಇಲಾಖೆ ಪ್ರಯತ್ನವಿದು
ರಾಗಿಗುಡ್ಡದಲ್ಲಿ ಕಳೆದ ಮೂರು ತಿಂಗಳ ಹಿಂದೆ ಸಣ್ಣ ವಿಚಾರಕ್ಕೆ ದೊಡ್ಡ ಗಲಭೆ ನಡೆದಿತ್ತು. ಗಲಭೆ ಬಳಿಕ ಇಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಇಲ್ಲಿನ ವಾತಾವರಣ ಸಹಜ ಸ್ಥಿತಿಗೆ ತರಬೇಕು ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಸಾಕಷ್ಟು ಪ್ರಯತ್ನ ಮಾಡಿದ್ದೇವೆ ಎಂದು ಜಿಲ್ಲಾ ಎಸ್‌ಪಿ ಹೇಳಿದರು.ಮೊದಲು ಇಲ್ಲಿಯ ಪ್ರತಿ ಮನೆಯಿಂದ ಒಬ್ಬ ಸದಸ್ಯರನ್ನು ಆಯ್ಕೆ ಮಾಡಿಕೊಂಡು ಶಾಂತಿ ಪಡೆಯನ್ನು ಮಾಡಿದ್ದೆವು. ಇದರಿಂದ ಇಲ್ಲಿನ ಸಮಸ್ಯೆಗಳು ನಮ್ಮ ಗಮನಕ್ಕೆ ಬರುವಂತೆ ತಂಡ ರಚಿಸಲಾಗಿದೆ. ಅಲ್ಲದೇ, ಶಾಲೆಗಳಲ್ಲಿ ಸಾಕಷ್ಟು ಸಭೆಗಳನ್ನು ಮಾಡಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಾರ್ವಜನಿಕರ ಸಭೆ ಮಾಡಲಾಗಿದೆ. ಇಲ್ಲಿನ ಸಮಸ್ಯೆಗಳನ್ನು ಆಲಿಸಿದ್ದೇವೆ. ಆ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನವನ್ನು ಮಾಡಿದ್ದೇವೆ. ಮುಂದುವರಿದ ಭಾಗವಾಗಿ ಈಗ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ನಾಳೆ ಪಂದ್ಯಾವಳಿ ಸಮಾರೋಪ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಬಗ್ಗೆ ಯೋಚಿಸಿದ್ದೇವೆ. ರಾಗಿಗುಡ್ಡದಲ್ಲಿ ಶಾಂತಿ ಕಾಪಾಡುವ ನಮ್ಮ ಪ್ರಯತ್ನಕ್ಕೆ ಇಲ್ಲಿನ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಎಸ್‌ಪಿ ಮಿಥುನ್‌ಕುಮಾರ್ ತಿಳಿಸಿದರು.
- - - -24ಎಸ್‌ಎಂಜಿಕೆಪಿ06:ರಾಗಿಗುಡ್ಡದ ಕ್ರಿಕೆಟ್ ಮೈದಾನದಲ್ಲಿ ಬುಧವಾರ ಜಿಲ್ಲಾ ಎಸ್‌ಪಿ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಪಂದ್ಯಾವಳಿ ಉದ್ಘಾಟಿಸಿದರು.