ಸಾರಾಂಶ
ಗಂಗಾವತಿ:
ಸಾಣಾಪುರದ ಬಳಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ನಡೆದ ಪ್ರಕರಣದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ದಿ ಸೋಮವಾರ ರಾತ್ರಿ ಹೋಂ ಸ್ಟೇ, ರೆಸಾರ್ಟ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ ದಾಖಲಾತಿಗಳ ನಿರ್ವಹಣೆ, ಮದ್ಯ, ಗಾಂಜಾ ಪೂರೈಕೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಕ್ರಮ ಚಟುವಟಿಕೆ ನಡೆಸಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಮಾಲೀಕರಿಗೆ ನೀಡಿದ್ದಾರೆ.ರೆಸಾರ್ಟ್‌ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಹಾಗೂ ವಿದೇಶಿಗರ ಬಗ್ಗೆ ಯಾವುದೇ ಮಾಹಿತಿ ನೀಡದ ಆರೋಪ ಹಿನ್ನೆಲೆ ದಾಳಿ ನಡೆಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರೆಸಾರ್ಟ್ ಹಾಗೂ ಹೋಂ ಸ್ಟೇಗಳನ್ನು ಇಂಚು ಇಂಚು ಜಾಲಾಡಿದ್ದಾರೆ. ರೆಸಾರ್ಟ್‌ಗಳಲ್ಲಿ ನಡೆಯಬಹುದಾದ ಅಕ್ರಮ ಚಟುವಟಿಕೆ, ಮಾದಕ ವಸ್ತುಗಳ ಪೂರೈಕೆ, ಸಂಗ್ರಹ ಸೇರಿದಂತೆ ಎಲ್ಲ ವಿಚಾರಗಳನ್ನು ಪರಿಶೀಲಿಸಿದ್ದಾರೆ.
ಅತ್ಯಾಚಾರ ಹಾಗೂ ಓರ್ವ ಪ್ರವಾಸಿಗನ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಸಾಣಾಪುರ, ಆನೆಗೊಂದಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ನಾಕಾಬಂದಿ ಹಾಕಿದೆ. ಪ್ರತಿಯೊಂದು ವಾಹನವನ್ನು ತಪಾಸಣೆಗೆ ಒಳಪಡಿಸುವ ಮೂಲಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.ಚೆಕ್‌ಪೋಸ್ಟ್ ನಿರ್ಮಾಣ:
ಸಾಣಾಪುರ, ವಿರುಪಾಪುರಗಡ್ಡೆ, ಆನೆಗೊಂದಿ, ಹನುಮನಹಳ್ಳಿ ಮತ್ತು ಜಂಗ್ಲಿ, ಋಷ್ಯಮುಖ ಪರ್ವತ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಬರುತ್ತಾರೆ. ಇವರ ಸಂಪೂರ್ಣ ವಿಳಾಸ ಸೇರಿದಂತೆ ಎಲ್ಲ ಮಾಹಿತಿ ಸಂಗ್ರಹಿಸಲು ಸಾಣಾಪುರದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಸಾಣಾಪುರ, ಆನೆಗೊಂದಿ ಮತ್ತು ಹನುಮನಹಳ್ಳಿ ಭಾಗದಲ್ಲಿ 20ಕ್ಕೂ ಹೆಚ್ಚು ರೆಸಾರ್ಟ್‌ಗಳಿದ್ದು, 15 ಹೋಂ ಸ್ಟೇಗಳು ಇವೆ. ಈ ಸ್ಥಳಗಳಿಗೆ ವಿದೇಶಿಯರು ಆಗಮಿಸುತ್ತಿದ್ದರಿಂದ ಪೊಲೀಸ್ ಸಿಬ್ಬಂದಿ ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆ ಸಮೇತ ಪರಿಶೀಲನೆ ನಡೆಸುತ್ತಿದ್ದಾರೆ. ಪಾಸ್‌ಪೋರ್ಟ್, ವೀಸಾ, ವಾಹನಗಳ ಸಂಖ್ಯೆ, ವಿದೇಶಿಯರ ಸಂಖ್ಯೆ, ವಾಸ್ತವ್ಯದ ಸ್ಥಳ ಸೇರಿದಂತೆ ವಿವಿಧ ಮಾಹಿತಿ ಪಡೆಯುತ್ತಿದ್ದಾರೆ.ರೆಸಾರ್ಟ್‌ಗಳಲ್ಲಿ ಪರಿಶೀಲನೆ:
ಸಾಣಾಪುರ ಸೇರಿದಂತೆ ಸುತ್ತಮುತ್ತಲಿನ ಎಲ್ಲ ರೆಸಾರ್ಟ್, ಹೋಂ ಸ್ಟೇಗಳ ಪರಿಶೀಲನೆಗೆ ಮುಂದಾಗಿರುವ ಪೊಲೀಸ್ ಇಲಾಖೆ, ಪ್ರವಾಸಿಗರ ಸಮಗ್ರ ಮಾಹಿತಿ ಕಲೆ ಹಾಕುತ್ತಿದೆ. ಪ್ರವಾಸಿಗರು ಎಲ್ಲಿಂದ ಬಂದರು, ಎಷ್ಟು ದಿನ ಇರುತ್ತಾರೆ ಸೇರಿದಂತೆ ವಿಷಯಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಮಾಹಿತಿಯನ್ನು ರಾಜ್ಯ ಪೊಲೀಸ್ ಇಲಾಖೆಗೆ ನೀಡಲು ಮುಂದಾಗಿದೆ.ಬಿಗಿ ಭದ್ರತೆ:
ಗ್ಯಾಂಗ್ ರೇಪ್ ಪ್ರಕರಣದಿಂದ ಐತಿಹಾಸಿಕ ಪ್ರದೇಶವಾಗಿರುವ ಹಂಪಿ, ಅಂಜನಾದ್ರಿ, ಆನೆಗೊಂದಿ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಮರುಕುಳಿಸಬಾರದೆಂಬ ಕಾರಣಕ್ಕೆ ಪೊಲೀಸ್ ಬಿಗಿ ಭದ್ರತೆ ಜತೆಗೆ ಪಹರೆ ನಡೆಸಿದ್ದಾರೆ. ಸಾಣಾಪುರ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ಪಡೆ ಸೇರಿದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಭದ್ರತೆಯಲ್ಲಿ ತೊಡಗಿದ್ದು ಪ್ರವಾಸಿಗರ ಚಲವಲನದ ಬಗ್ಗೆ ನಿಗಾವಹಿಸಿದ್ದಾರೆ.ಈಗ ವಿದೇಶಿಯರ ಮೇಲೆ ನಡೆದ ಗ್ಯಾಂಗ್‌ರೇಪ್ ಪ್ರಕರಣದಿಂದ ಪ್ರವಾಸಿಗರು ತಲ್ಲಣಗೊಂಡಿದ್ದು, ಮುಂಜಾಗೃತ ಕ್ರಮವಾಗಿ ಪೊಲೀಸ್ ಇಲಾಖೆ ಕಟ್ಟೆಚ್ಚರವಹಿಸಿದೆ.ಸಾಣಾಪುರ ಬಳಿ ಗ್ಯಾಂಗ್‌ರೇಪ್ ನಡೆದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ವಿದೇಶಿ ಪ್ರವಾಸಿಗರ ಚಲನವಲನ ಸೇರಿದಂತೆ ದಾಖಲೆ ಪರಿಶೀಲನೆಗಾಗಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ದಿನ ನಿತ್ಯ ರೆಸಾರ್ಟ್ ಹಾಗೂ ಹೋಂ ಸ್ಟೇಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಮಾಹಿತಿ ನೀಡಬೇಕಾಗಿದೆ ಎಂದು ಗಂಗಾವತಿ ಗ್ರಾಮೀಣ ಠಾಣೆಯ ಸೋಮಶೇಖರ ಜುಟ್ಟಲ್ ಹೇಳಿದರು.