ಕರ್ನಾಟಕ ರಕ್ಷಣಾ ವೇದಿಕೆ ಕಳೆದ ೪೦ ವರ್ಷಗಳಿಂದ ಕಾವೇರಿ, ಮಹದಾಯಿ, ಕೃಷ್ಣಾ ನದಿ ನೀರಿನ ಹಂಚಿಕೆ, ಬೆಳಗಾವಿ ಗಡಿ ವಿವಾದ, ರೈತರ ಸಮಸ್ಯೆ ಹಾಗೂ ಕನ್ನಡಿಗರ ಉದ್ಯೋಗ ಸೇರಿದಂತೆ ನಾಡಿನ ಪ್ರಮುಖ ವಿಚಾರಗಳ ಕುರಿತು ನಿರಂತರ ಹೋರಾಟ ನಡೆಸುತ್ತಿದೆ. ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ಸಮಸ್ಯೆ ಮುಂದಿನ ಪೀಳಿಗೆಗೂ ಮುಂದುವರಿಯದಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಮಹದಾಯಿ ಯೋಜನೆಗೂ ಪರಿಹಾರ ಕಂಡುಕೊಳ್ಳಬೇಕು. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಹಾಸನಾಂಬೆ ದೇವಿಯ ದರ್ಶನಕ್ಕೆ ಈ ಬಾರಿಯೂ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿದ್ದು, ಮುಂದಿನ ವರ್ಷಗಳಲ್ಲಿ ಭಕ್ತರ ಸಂಖ್ಯೆಗೆ ಅನುಗುಣವಾಗಿ ಈಗಿರುವ ಸ್ಥಳ ಸಾಲದಾಗಬಹುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅಭಿಪ್ರಾಯಪಟ್ಟರು.ನಗರದ ಹಾಸನಾಂಬೆ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ರಾಜ್ಯ ಸರ್ಕಾರ ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ನೇತೃತ್ವದಲ್ಲಿ ಭಕ್ತರಿಗೆ ಸುಗಮ ದರ್ಶನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರೂ ಹಾಸನಾಂಬೆ ದರ್ಶನಕ್ಕೆ ಬರಲು ಆಸಕ್ತಿ ತೋರುತ್ತಿದ್ದಾರೆ ಎಂದರು. ಸಾರ್ವಜನಿಕ ದರ್ಶನದ ಅವಧಿಯನ್ನು ಇನ್ನೂ ಕೆಲವು ದಿನಗಳ ಕಾಲ ವಿಸ್ತರಿಸಿದರೆ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ. ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರು ನೀಡುವ ಕಾಣಿಕೆಯಿಂದ ದೇವಾಲಯದ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಅವಕಾಶ ದೊರೆಯಲಿದೆ. ಮುಂದಿನ ವರ್ಷಗಳಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅದಕ್ಕೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು. ಹಾಸನಾಂಬೆ ದೇವಿಯು ನಾಡಿನ ಎಲ್ಲ ಕನ್ನಡಿಗರಿಗೆ ಆರೋಗ್ಯ, ಆಯುಷ್ಯ ಮತ್ತು ಸಮೃದ್ಧಿ ಕರುಣಿಸಲಿ. ಉತ್ತಮ ಮಳೆಯಾಗಿ ರೈತರು ಸುಖವಾಗಿರಲಿ. ಕನ್ನಡ ನಾಡಿನ ಮಕ್ಕಳಿಗೆ ಉದ್ಯೋಗ ನೀಡುವ ಸದ್ಬುದ್ಧಿಯನ್ನು ಉದ್ಯಮಿಗಳು ಹಾಗೂ ಐಟಿ ಕಂಪನಿಗಳ ಮಾಲೀಕರಿಗೆ ತಾಯಿ ಕರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಕಳೆದ ೪೦ ವರ್ಷಗಳಿಂದ ಕಾವೇರಿ, ಮಹದಾಯಿ, ಕೃಷ್ಣಾ ನದಿ ನೀರಿನ ಹಂಚಿಕೆ, ಬೆಳಗಾವಿ ಗಡಿ ವಿವಾದ, ರೈತರ ಸಮಸ್ಯೆ ಹಾಗೂ ಕನ್ನಡಿಗರ ಉದ್ಯೋಗ ಸೇರಿದಂತೆ ನಾಡಿನ ಪ್ರಮುಖ ವಿಚಾರಗಳ ಕುರಿತು ನಿರಂತರ ಹೋರಾಟ ನಡೆಸುತ್ತಿದೆ. ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ಸಮಸ್ಯೆ ಮುಂದಿನ ಪೀಳಿಗೆಗೂ ಮುಂದುವರಿಯದಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಮಹದಾಯಿ ಯೋಜನೆಗೂ ಪರಿಹಾರ ಕಂಡುಕೊಳ್ಳಬೇಕು. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಆಗ್ರಹಿಸಿ ಐಟಿ ಕಂಪನಿಗಳ ವಿರುದ್ಧ ಕರವೇ ವತಿಯಿಂದ ಬೃಹತ್ ಆಂದೋಲನ ಆರಂಭಿಸಲಾಗಿದೆ. ಇದಕ್ಕಾಗಿ ಹತ್ತು ತಂಡಗಳನ್ನು ರಚಿಸಲಾಗಿದ್ದು, ರಾಜ್ಯದ ಸುಮಾರು ಎರಡು ಸಾವಿರಕ್ಕೂ ಅಧಿಕ ಐಟಿ ಕಂಪನಿಗಳನ್ನು ಹೋರಾಟದ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಮೊದಲ ದಿನವೇ ನೂರು ಐಟಿ ಕಂಪನಿಗಳಿಗೆ ಮನವಿ ಸಲ್ಲಿಸಿ, ಆಯಾ ಕಂಪನಿಗಳಲ್ಲಿ ಎಷ್ಟು ಮಂದಿ ಉದ್ಯೋಗಿಗಳಿದ್ದಾರೆ, ಅವರಲ್ಲಿ ಕನ್ನಡಿಗರ ಪ್ರಮಾಣ ಎಷ್ಟಿದೆ ಹಾಗೂ ಕನ್ನಡಿಗರಿಗೆ ಯಾವ ಹುದ್ದೆಗಳಲ್ಲಿ ಎಷ್ಟು ಉದ್ಯೋಗಾವಕಾಶ ನೀಡಲಾಗಿದೆ ಎಂಬ ಮಾಹಿತಿ ಕೇಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಶಿವಣ್ಣ ಇತರರು ಇದ್ದರು.