ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ)ನಲ್ಲಿ ಸ್ಪಾರ್ಕ್ ಬೆಂಬಲದೊಂದಿಗೆ ‘ಆಕ್ಯುಲರ್ ಮೈಕ್ರೋಬಯೋಮ್ ಸಂಶೋಧನೆಯನ್ನು ಕಣ್ಣಿನ ಕಾಯಿಲೆಗಳಿಗೆ ನಿಖರವಾದ ಔಷಧ ವಿತರಣೆಗೆ ಅನ್ವಯಿಕೆ’ ಅಂತಾರಾಷ್ಟ್ರೀಯ ನಿರಂತರ ಮುಂದುವರಿದ ಶಿಕ್ಷಣ (ಸಿಎಂಇ) ಪ್ರಾಯೋಗಿಕ ಕಾರ್ಯಾಗಾರ ಆಯೋಜಿಸಲಾಗಿತ್ತು.

ಮಣಿಪಾಲ: ಇಲ್ಲಿನ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ)ನಲ್ಲಿ ಸ್ಪಾರ್ಕ್ ಬೆಂಬಲದೊಂದಿಗೆ ‘ಆಕ್ಯುಲರ್ ಮೈಕ್ರೋಬಯೋಮ್ ಸಂಶೋಧನೆಯನ್ನು ಕಣ್ಣಿನ ಕಾಯಿಲೆಗಳಿಗೆ ನಿಖರವಾದ ಔಷಧ ವಿತರಣೆಗೆ ಅನ್ವಯಿಕೆ’ ಎಂಬ ಒಂದು ದಿನದ ಅಂತಾರಾಷ್ಟ್ರೀಯ ನಿರಂತರ ಮುಂದುವರಿದ ಶಿಕ್ಷಣ (ಸಿಎಂಇ) ಪ್ರಾಯೋಗಿಕ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಹೆಸರಾಂತ ವೈದ್ಯರು, ಸಂಶೋಧಕರು, ಅಧ್ಯಾಪಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ 125 ಪ್ರತಿನಿಧಿಗಳು ಭಾಗವಹಿಸಿದ್ದರು. ಮಾಹೆಯ ನಿರ್ದೇಶಕ (ಸಂಶೋಧನೆ) ಡಾ. ಎಂ. ಶಾಮಪ್ರಸಾದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಭಾರತದ ಶೈಕ್ಷಣಿಕ ಮತ್ತು ಅನುವಾದ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಅಂತಾರಾಷ್ಟ್ರೀಯ ಸಂಶೋಧನಾ ಸಹಭಾಗಿತ್ವದ ಮಹತ್ವವನ್ನು ಒತ್ತಿ ಹೇಳಿದರು.ಮುಖ್ಯ ಅತಿಥಿಯಾಗಿ ಸಿಡ್ನಿಯ ನ್ಯೂಸೌತ್ ವೇಲ್ಸ್ ವಿವಿಯ ಆಕ್ಯುಲರ್ ಮೈಕ್ರೋಬಯಾಲಜಿ ಮತ್ತು ವಿಷನ್ ಸೈನ್ಸ್ ಪ್ರಾಧ್ಯಾಪಕ ಮತ್ತು ಸ್ಪಾರ್ಕ್ ಅನುದಾನದ ಅಂತಾರಾಷ್ಟ್ರೀಯ ಪ್ರಧಾನಾಧಿಕಾರಿ ಪ್ರೊಫೆಸರ್ ಡಾ. ಮಾರ್ಕ್ ವಿಲ್ಕಾಕ್ಸ್ ಭಾಗವಹಿಸಿದ್ದರು.

ನವದೆಹಲಿಯ ಡಾ. ಶ್ರಾಫ್ಸ್ ಚಾರಿಟಿ ಕಣ್ಣಿನ ಆಸ್ಪತ್ರೆಯ ಕಾರ್ನಿಯಾ ಸಲಹೆಗಾರ್ತಿ ಡಾ. ಮನೀಷಾ ಆಚಾರ್ಯ ಅವರು ಸ್ಪಾರ್ಕ್ ಉಪಕ್ರಮದ ಅಡಿಯಲ್ಲಿ ನಿರಂತರ ಸಹಯೋಗದ ಸಂಶೋಧನಾ ಪ್ರಬಂಧವನ್ನು ಬಿಡುಗಡೆ ಮಾಡಿದರು.ಕೆಎಂಸಿಯ ಮಣಿಪಾಲದ ಅಸೋಸಿಯೇಟ್ ಡೀನ್ ಡಾ. ವಿನೋದ್ ನಾಯಕ್ ಅವರು ಸ್ವಾಗತಿಸಿದರು. ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಸುಲತಾ ವಿ. ಭಂಡಾರಿ ಅವರು ಕಾರ್ಯಕ್ರಮದ ಅವಲೋಕನವನ್ನು ನೀಡಿದರು. ಕೆಎಂಸಿ ಮಣಿಪಾಲದ ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಎಸ್. ಕಾಮತ್ ವಂದಿಸಿದರು. ಮೇಘನಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.