ಸಾರಾಂಶ
ಹಳಿಯಾಳ: ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗೋಣ ಎಂದು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ತಿಳಿಸಿದರು.ಶುಕ್ರವಾರ ಇಲ್ಲಿಯ ಆಡಳಿತ ಸೌಧದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಾವು ನವೆಂಬರ್ ಕನ್ನಡಿಗರಾಗುವುದು ಬೇಡ. ಕನ್ನಡಿಗ ಎಂಬ ಹೆಮ್ಮೆಯಿಂದ ಬಾಳಿ ಕನ್ನಡಕ್ಕೆ ಪ್ರಥಮ ಗೌರವ ನೀಡುವ ಮೂಲಕ ದೇಶದ ಇತರ ಭಾಷೆಗಳನ್ನು ಅಭಿಮಾನದಿಂದ ಗೌರವಿಸೋಣ ಎಂದರು.ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಸಿಪಿಐ ಜಯಪಾಲ ಪಾಟೀಲ, ಬಿಇಒ ಪ್ರಮೋದ ಮಹಾಲೆ, ಹೆಸ್ಕಾಂ ಎಇ ರವೀಂದ್ರ ಮೆಟಗುಡ್ಡ, ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ, ಶಿಶು ಅಭಿವೃದ್ಧಿ ಅಧಿಕಾರಿ ಡಾ. ಜಯಲಕ್ಷ್ಮೀ, ಉಪ ನೋಂದಣಾಧಿಕಾರಿ ದೇವೇಂದ್ರಪ್ಪ, ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿ, ಜಯಕರ್ನಾಟಕ ಅಧ್ಯಕ್ಷ ವಿಲಾಸ ಕಣಗಲಿ ಹಾಗೂ ಕನ್ನಡಪರ ಸಂಘಟನೆಗಳ ಪ್ರಮುಖರು ಇದ್ದರು.
ಅನ್ಯ ಭಾಷೆ ವಿರೋಧಿಸದೇ ಮಾತೃಭಾಷೆ ಗೌರವಿಸಿಯಲ್ಲಾಪುರ: ಎಲ್ಲ ಭಾಷೆಗಳನ್ನು ಗೌರವಿಸೋಣ. ಆದರೆ, ಮಾತೃಭಾಷೆಯಾದ ಕನ್ನಡವನ್ನು ಹೃದಯದಲ್ಲಿಟ್ಟು ಗೌರವಿಸಬೇಕು, ಆದರಿಸಬೇಕು. ಮಾತೃಭಾಷೆಯ ಬಗ್ಗೆ ಪ್ರೀತಿ ಕೂಡಾ ಇರಲೇಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ನ. ೧ರಂದು ಪಟ್ಟಣದ ಗಾಂಧೀ ಕುಟೀರದಲ್ಲಿ ತಾಲೂಕಾಡಳಿತ, ತಾಪಂ, ಪಪಂ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಎಂಟು ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ದೊರೆತಿರುವುದು ಕನ್ನಡ ಭಾಷೆಯ ಗರಿಮೆ, ಹಿರಿಮೆ ಮತ್ತು ಆ ಭಾಷೆಯಲ್ಲಿರುವ ಶ್ರೇಷ್ಠತೆ ಕಾರಣವಾಗಿದೆ. ಆದ್ದರಿಂದ ಮಾತೃಭಾಷೆಯನ್ನು ಗೌರವಿಸಬೇಕು. ಬೇರೆ ಭಾಷೆಯನ್ನು ವಿರೋಧಿಸದೇ ಕನ್ನಡವನ್ನು ಮತ್ತಷ್ಟು ಶ್ರೀಮಂತಗೊಳಿಸೋಣ ಎಂದರು.
ತಹಸೀಲ್ದಾರ್ ಯಲ್ಲಪ್ಪ ಗೊನ್ನಣ್ಣವರ್ ಮಾತನಾಡಿ, ಕನ್ನಡ ರಾಜ್ಯೋತ್ಸವ ನಮ್ಮ ಸಂಸ್ಕೃತಿಯ, ಅಸ್ಮಿತೆಯ ಪ್ರತೀಕ. ಹರಿದು ಹಂಚಿಹೋಗಿದ್ದ ಕನ್ನಡ ಪ್ರಾಂತವನ್ನು ಒಗ್ಗೂಡಿಸಿ, ಕನ್ನಡ ಸಂಸ್ಕೃತಿಗೆ ಚೌಕಟ್ಟು ನೀಡಿದ ದಿನ ಇದಾಗಿದೆ ಎಂದರು.ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಾಪಂ ಇಒ ರಾಜೇಶ ಧನವಾಡಕರ್, ಪಿಐ ರಮೇಶ ಹಾನಾಪುರ ಮತ್ತಿತರರು ಉಪಸ್ಥಿತರಿದ್ದರು.
ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಬಿಇಒ ಎನ್.ಆರ್. ಹೆಗಡೆ ಸ್ವಾಗತಿಸಿದರು. ಶಿಕ್ಷಕ ದಿಲೀಪ ದೊಡ್ಮನಿ ಮತ್ತು ಎಂ.ಎಂ. ಬಾಗೇವಾಡಿ ನಿರ್ವಹಿಸಿದರು. ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ ವಂದಿಸಿದರು.ಇದಕ್ಕೂ ಮುನ್ನ ತಹಸೀಲ್ದಾರ್ ಕಚೇರಿ ಆವಾರದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಪಟ್ಟಣದ ವಿವಿಧೆಡೆ ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು, ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.