ಪ್ರತೀ ವರ್ಷ ಸೆ.10 ರಂದು ವಿಶ್ವದ ಎಲ್ಲಕಡೆ ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತದೆ. ಮಾನಸಿಕ ಸಮಸ್ಯೆಗಳು, ಖಿನ್ನತೆ ಅಥವಾ ಆತ್ಮಹತ್ಯೆಯ ಆಲೋಚನೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ತಪ್ಪಲ್ಲ ಎಂಬ ವಾತಾವರಣ ಸೃಷ್ಠಿಸುವುದು ಈ ಕಾರ್ಯಕ್ರಮ ಉದ್ದೇಶ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ ಹೆಚ್. ಹೇಳಿದರು.

ಉಡುಪಿ : ಪ್ರತೀ ವರ್ಷ ಸೆ.10 ರಂದು ವಿಶ್ವದ ಎಲ್ಲಕಡೆ ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತದೆ. ಮಾನಸಿಕ ಸಮಸ್ಯೆಗಳು, ಖಿನ್ನತೆ ಅಥವಾ ಆತ್ಮಹತ್ಯೆಯ ಆಲೋಚನೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ತಪ್ಪಲ್ಲ ಎಂಬ ವಾತಾವರಣ ಸೃಷ್ಠಿಸುವುದು ಈ ಕಾರ್ಯಕ್ರಮ ಉದ್ದೇಶ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ ಹೆಚ್. ಹೇಳಿದರು.

ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಸೈಂಟ್ ಸಿಸಿಲಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಸಹಾಯ ಮೇರಿ ಮಾತನಾಡಿ, ಯಾರಾದರೂ ಮಾನಸಿಕ ಒತ್ತಡ, ನಿರಾಸೆ, ಸಂಕಷ್ಟದಲ್ಲಿರುವಾಗ ಅವರನ್ನು ನಿರ್ಲಕ್ಷಿಸದೇ ಅವರ ಮಾತನ್ನು ಆಲಿಸುವುದು ಬಹಳ ಮುಖ್ಯ. ಆಲಿಸೋಣ, ಅರ್ಥ ಮಾಡಿಕೊಳ್ಳೋಣ ಬೆಂಬಲಿಸೋಣ, ಜೀವ ರಕ್ಷಿಸೋಣ ಎಂದರು.ನಡವಳಿಕೆ ಗುರುತಿಸಿ: ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ.ಶಶಾಂಕ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿ, ಆತ್ಮಹತ್ಯೆಯ ಆಲೋಚನೆಗಳು ಒಬ್ಬ ವ್ಯಕ್ತಿಯಲ್ಲಿ ಏಕಾಏಕಿ ಹುಟ್ಟಿಕೊಳ್ಳುವುದಿಲ್ಲ. ಬಹುತೇಕ ಸಂದರ್ಭದಲ್ಲಿ ಆ ವ್ಯಕ್ತಿಯ ನಡವಳಿಕೆ ಮತ್ತು ದೈನಂದಿನ ಅಭ್ಯಾಸಗಳಲ್ಲಿ ಸೂಕ್ಷ್ಮ ಮುನ್ಸೂಚನೆ ಕಂಡು ಬಂದರೆ ಇವುಗಳನ್ನು ಸಕಾಲದಲ್ಲಿ ಗುರುತಿಸಿ ಸ್ಪಂದಿಸುವುದರಿಂದ ಅಮೂಲ್ಯ ಜೀವವನ್ನು

ಉಳಿಸಬಹುದು. ದೈಹಿಕ ಆರೋಗ್ಯದ ರಕ್ಷಣೆಯಷ್ಟೇ ಮಾನಸಿಕ ಆರೋಗ್ಯದ ರಕ್ಷಣೆ ಕೂಡ ಮುಖ್ಯ. ಕೇಂದ್ರ ಸರ್ಕಾರದ ಉಚಿತ ಮತ್ತು 24*7 ಲಭ್ಯವಿರುವ ಟೆಲಿಮಾನಸ್ ಸಹಾಯವಾಣಿ ಸಂಖ್ಯೆ 14416 ಗೆ ಕರೆ ಮಾಡಲು ಅವರಿಗೆ ಮಾಹಿತಿ ನೀಡುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮೇಲ್ವೀಚಾರಣಾಧಿಕಾರಿ ಹೆಚ್.ನಾಯ್ಕ್ರ್, ಶ್ರೂಶೂಷಾಧಿಕಾರಿ ದೀಕ್ಷಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪ್ರವೀಣ, ಅಧ್ಯಾಪಕ ವೃಂದದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಉಪಸ್ಥಿತರಿದ್ದರು. ವಸಂತಿ ಸ್ವಾಗತಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್ ಸೈಕಾಲಾಜಿಸ್ಟ್ ಜೆನ್ನಿಫರ್ ಕ್ಯಾಥರಿನ್ ವಂದಿಸಿದರು.