ಸತ್ಯವಾಗಿ ನುಡಿದು ಅಂತರಂಗದಲ್ಲಿ ಸ್ವಚ್ಛವಾಗಿರಿ: ಮಹಾಂತ ಶಿವಾಚಾರ್ಯರು

| Published : Oct 14 2024, 01:18 AM IST

ಸಾರಾಂಶ

ದೇವರು ಮಾನವನಲ್ಲಿ ಸಾಕ್ಷಾತ್ಕಾರನಾಗಬೇಕಾದರೆ ಮನುಷ್ಯ ಜೀವನದಲ್ಲಿ ಸತ್ಯವನ್ನೇ ನುಡಿಯಬೇಕು, ಸತ್ಯವಾಗಿಯೇ ನಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕಾರಟಗಿ

ದೇವರು ಮಾನವನಲ್ಲಿ ಸಾಕ್ಷಾತ್ಕಾರನಾಗಬೇಕಾದರೆ ಮನುಷ್ಯ ಜೀವನದಲ್ಲಿ ಸತ್ಯವನ್ನೇ ನುಡಿಯಬೇಕು, ಸತ್ಯವಾಗಿಯೇ ನಡೆದುಕೊಳ್ಳಬೇಕು. ಬಾಹ್ಯ ಆಡಂಬರದ ಸ್ವಚ್ಛತೆ ಕಾಪಾಡುವುದು ಮುಖ್ಯವಲ್ಲ. ಅಂತರಂಗದಲ್ಲೂ ಸ್ವಚ್ಛವಾಗಿರಬೇಕು ಎಂದು ಎಮ್ಮಿಗನೂರು ಮಹಾಂತನಮಠದ ವಾಮದೇವ ಮಹಾಂತ ಶಿವಾಚಾರ್ಯರು ಹೇಳಿದರು.

ತಾಲೂಕಿನ ಬೆನ್ನೂರು ಗ್ರಾಮದ ಗ್ರಾಮದೇವತೆ ಶ್ರೀಮಾರೆಮ್ಮ ದೇವಿ ನೂತನ ದೇವಸ್ಥಾನ ಹಾಗೂ ದೇವಿಯ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇವತಾರಾಧನೆಯನ್ನು ನಿರಾಕಾರ ಹಾಗೂ ಸಾಕಾರ ರೂಪದಲ್ಲಿ ಪೂಜೆ ಮಾಡುತ್ತೇವೆ. ಆದರೆ, ಭಗವಂತ ನಿರಾಕಾರದಲ್ಲೂ, ಸಾಕಾರ ಮೂರ್ತಿಯಲ್ಲೂ ಎರಡರಲ್ಲೂ ನೆಲೆಸಿದ್ದಾನೆ. ದ್ವೇಷ, ಹೊಟ್ಟೆ ಕಿಚ್ಚು, ಮತ್ಸರ ಭಾವನೆಗಳನ್ನು ಅಳೆಸಬೇಕು. ಅಂದಾಗಲೇ ದೇವಸ್ಥಾನ ಮತ್ತು ದೇಹಸ್ಥಾನ ಎರಡು ಒಂದಾಗಲೂ ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಜೀವನದ ಹಾದಿಯಲ್ಲಿ ಎಷ್ಟೇ ಕಷ್ಟಗಳು ಬಂದರೂ ಕೂಡಾ ಸತ್ಯವನ್ನೇ ನುಡಿಯುತ್ತಾ, ಸತ್ಯವಾಗಿ ನಡೆಯುತ್ತಾ ದೇವರನ್ನು ಆರಾಧಿಸಬೇಕು ಆಗಲೇ ಮಾನವ ಜನ್ಮ ಶ್ರೇಷ್ಠವಾಗುತ್ತದೆ ಎಂದರು.

ಶುಕ್ರವಾರ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಗ್ರಾಮದೇವತೆ ಮಾರೆಮ್ಮ ದೇವಿಗೆ ರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಾರ್ಚನೆ, ಸಿಂಹಲಗ್ನದ ಶುಭ ಮುಹೂರ್ತದಲ್ಲಿ ಗ್ರಾಮದೇವತೆ ಮಾರೆಮ್ಮ ದೇವಿಯ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಳಸಾರೋಹಣ ಹಾಗೂ ಪೂರ್ಣಾಹುತಿ, ಮಹಾ ಮಂಗಳಾರತಿ ಕಾರ್ಯಕ್ರಮ ಸಾಂಗವಾಗಿ ನೆರವೇರಿಸಲಾಯಿತು.

ಗ್ರಾಮಕ್ಕೆ ಆಗಮಿಸಿದ ಗ್ರಾಮದೇವತೆ ಮೂರ್ತಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ೫ ದಿನ ಮಾರೆಮ್ಮ ದೇವಿ ಮೂರ್ತಿಯನ್ನು ಜಲಧಿವಾಸ, ಕ್ಷೀರಾಧಿವಾಸ, ಧಾನ್ಯಧಿವಾಸ, ಪುಷ್ಪಧಿವಾಸ ಹಾಗೂ ಶಯನಧಿವಾಸ ಮಾಡುತ್ತಾ ವಿಶೇಷ ಪೂಜೆ ಕೈಂಕರ್ಯ ನೆರವೇರಿಸಲಾಯಿತು. ಶುಕ್ರವಾರ ಬೆಳಗ್ಗೆ ಗೋಧೂಳಿ ಲಗ್ನದಲ್ಲಿ ಗಂಗಾ, ಗಣೇಶ, ನವಗ್ರಹ, ಅಷ್ಟಾಧಿಪಾಲಕರು, ನವದುರ್ಗಾ ದೇವತೆಗಳ ಪೂಜೆ ಹಾಗೂ ಸಕಲ ಪರಿವಾರ ದೇವತೆಗಳ ಪೂಜೆ ಮತ್ತು ಶ್ರೀ ಚಂಡಿಹೋಮ ಮಾಡಿ ದೇವಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಈ ವೇಳೆ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು. ಈ ವೇಳೆ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ಪ್ರಸಾದ ವ್ಯವಸ್ಥೆಮಾಡಲಾಗಿತ್ತು.