ಸಾರಾಂಶ
ಅಧಿಕಾರದ ಹಂಚಿಕೆ ಒಪ್ಪಂದದ ವಿಚಾರ ನಮ್ಮ ಗಮನಕ್ಕೆ ತಂದು ಮಾಡಿದ್ದರೆ ಇಷ್ಟೆಲ್ಲಾ ಗೊಂದಲಗಳು ಆಗುತ್ತಿರಲಿಲ್ಲ
ಕನ್ನಡಪ್ರಭ ವಾರ್ತೆ ಮೈಸೂರು
ಮುಖ್ಯಮಂತ್ರಿ ಬದಲಾವಣೆ ವಿಚಾರದ ಗೊಂದಲಗಳು ಈಗ ಬಗೆಹರಿದಂತೆ ಕಾಣುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದ ಹಂಚಿಕೆ ಒಪ್ಪಂದದ ವಿಚಾರ ನಮ್ಮ ಗಮನಕ್ಕೆ ತಂದು ಮಾಡಿದ್ದರೆ ಇಷ್ಟೆಲ್ಲಾ ಗೊಂದಲಗಳು ಆಗುತ್ತಿರಲಿಲ್ಲ. ಒಪ್ಪಂದ ಏನು ಆಗಿದೆ, ಏನು ಆಗಿಲ್ಲ ಎಂಬುದು ನಮಗೆ ಗೊತ್ತಿಲ್ಲ. ಅವರವರೇ ಚರ್ಚೆಗಳನ್ನು ಮಾಡಿ ನಿರ್ಧಾರ ಮಾಡಿಕೊಂಡಿದ್ದರು. ಹೀಗಾಗಿ, ಈ ಗೊಂದಲಗಳು ಸೃಷ್ಟಿಯಾದವು. ಈಗ ಗೊಂದಲಗಳು ಬಗೆಹರಿದಂತೆ ಕಾಣುತ್ತಿದೆ. ಈ ವಿಚಾರದಲ್ಲಿ ಅಭಿಪ್ರಾಯ ಹೇಳಲು ಹಿರಿಯರು ಕಿರಿಯರು ಎಂಬುದು ಇರುವುದಿಲ್ಲ ಎಂದರು.
5 ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಅವರು ಹಿಂದೆಯೂ ಹೇಳಿದ್ದರು, ಈಗಲೂ ಅದನ್ನೇ ಹೇಳಿದ್ದಾರೆ. ಮತ್ತೊಬ್ಬರಿಗೆ ಅವಕಾಶ ಇದೆಯೋ ಇಲ್ಲವೋ ಎಂಬುದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಅವರು ಹೇಳಿದರು.ದೇವರಲ್ಲಿ ನಾಡಿಗೆ ಹಾಗೂ ನನಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಇನ್ನೂ ಎರಡೂವರೆ ವರ್ಷ ಉತ್ತಮ ಆಡಳಿತ ಕೊಡುವುದು ನಮ್ಮ ಮುಂದೆ ಇದೆ. ದೇವರ ಸನ್ನಿಧಿಯಲ್ಲಿ ನಿಂತು ಹೆಚ್ಚು ರಾಜಕೀಯ ಮಾತನಾಡುವುದಿಲ್ಲ. ನಮ್ಮಲ್ಲೇ ಮೊದಲು ಎಂಬಂತೆ ಮಾಧ್ಯಮದವರಿಗೆ ಎಲ್ಲಾ ಬೆಳವಣಿಗೆ ಗೊತ್ತಾಗುತ್ತದೆ ಎಂದು ಅವರು ಹೇಳಿದರು.