ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀವೈಷ್ಣವ ಕ್ಷೇತ್ರವಾದ ಮೇಲುಕೋಟೆ ಚೆಲುವನಾರಾಯಣನ ದಿವ್ಯ ಸನ್ನಿಧಿಯಲ್ಲಿ 1009ನೇ ತಿರುನಕ್ಷತ್ರ ಮಹೋತ್ಸವದ 8ನೇ ದಿನದ ಉತ್ಸವದ ಅಂಗವಾಗಿ ರಾಮಾನುಜಾಚಾರ್ಯರಿಗೆ ಅಭಿಷೇಕ ನೆರವೇರಿತು.

ವೇದಘೋಷ ಮಂಗಳವಾದ್ಯ ರಾಮಾನುಜಕೀಯದೊಂದಿಗೆ ನಡೆದ ಅಭಿಷೇಕದಲ್ಲಿ ಭಾಗವಹಿಸಿದ್ದರು. ರಾಮಾನುಜರಿಗೆ ಹಾಲುಜೇನು ಮೊಸರು ಮುಂತಾದ ಮಂಗಳ ದ್ರವ್ಯಗಳೊಂದಿಗೆ ಅಭಿಷೇಕದ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.

ವಿದ್ವಾನ್ ರಾಮಪ್ರಿಯ ವಿದ್ವಾನ್ ಆನಂದಾಳ್ವಾರ್ ಆಗಮೋಕ್ತವಾಗಿ ವಿಧಿವಿಧಾನಗಳನ್ನು ನೆರವೇರಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ರಾಮಾನುಜಾಚಾರ್ಯರಿಗೆ ಗಜವಾಹನೋತ್ಸವ ನೆರವೇರಿತು.‌

ಇಂದು ಮಹಾರಥೋತ್ಸವ:


ರಾಮಾನುಜಾಚಾರ್ಯರಿಗೆ ಮಂಗಳವಾರ ಮಹಾ ರಥೋತ್ಸವ ನೆರವೇರಲಿದೆ. ಬೆಳಗ್ಗೆ 7 ಗಂಟೆಗೆ ಯಾತ್ರಾ ದಾನವಾದ ನಂತರ ರಥ ಮಂಟಪಕ್ಕೆ ಉತ್ಸವ ನಡೆಯಲಿದೆ. ರಥಮ ಮಂಟಪಕ್ಕೆ ಮೂರು ಪ್ರದಕ್ಷಿಣೆ ನೆರವೇರಿಸಿದ ನಂತರ ರಥಾರೋಹಣ ಕಾರ್ಯಕ್ರಮ ನಡೆಯಲಿದೆ 9:00 ನಂತರ ರಾಮಾನುಜರ ಮಹಾರಥ ರಥದ ಬೀದಿಯಲ್ಲಿ ವೈಭವವಾಗಿ ಸಂಚರಿಸಲಿದೆ.

ಐತಿಹಾಸಿಕ ಬಿಕ್ಷಾ ಕೈಂಕರ್ಯ:

ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ ವಾಸ್ತವ್ಯದಲ್ಲಿದ್ದಾಗ ನಾಲ್ಕು ಮಂದಿ ಪಟ್ಟ ಶಿಷ್ಯರ ಮನೆಯಲ್ಲಿ ಮಾತ್ರ ಬಿಕ್ಷೆ ಸ್ವೀಕರಿಸುತ್ತಿದ್ದರು ಎಂಬ ಐತಿಹಾಸಿಕ ಘಟನೆಯ ಪ್ರತೀಕವಾಗಿ ರಾಮಾನುಜರ ತಿರುನಕ್ಷತ್ರ ಮಹೋತ್ಸವದಲ್ಲಿ ಸ್ಥಾನಾಚಾರ್ಯರ ಬಿಕ್ಷಾಕೈಂಕರ್ಯ ಸೇವೆ ನಡೆಯುತ್ತದೆ. ರಾಮಾನುಜಾಚಾರ್ಯರ ರಥೋತ್ಸವದ ರಾತ್ರಿ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಮತ್ತು ಸಹೋದರರು ಬಿಕ್ಷಾಕೈಂಕರ್ಯ ಸೇವೆ ನಡೆಸಿಕೊಡಲಿದ್ದಾರೆ.

ತಿರುನಕ್ಷತ್ರ ಮಹೋತ್ಸವದ 7ನೇ ಉತ್ಸವದ ದಿನವಾದ ಭಾನುವಾರ ರಾತ್ರಿ ಪ್ರಥಮ ಸ್ಥಾನಿಕರಾದ ಕರಗಂ ರಾಮಪ್ರಿಯ ಮತ್ತು ಕರಗಂ ರಂಗಪ್ರಿಯ 8ನೇ ಉತ್ಸವದ ದಿನವಾದ ಸೋಮವಾರ ರಾತ್ರಿ ಮೂರನೇ ಸ್ಥಾನೀಕರಾದ ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್ ‌ಬಿಕ್ಷಾ ಕೈಂಕರ್ಯ ಸೇವೆ ನೆರವೇರಿಸಿದರು.