ಕನ್ನಡಪ್ರಭ ವಾರ್ತೆ ಮಂಡ್ಯ
ಮೈಸೂರಿನ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಭಾರದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ವಿಶೇಷ ಎಐ ತರಬೇತಿಯ ಮಹತ್ವದ ಶೈಕ್ಷಣಿಕ ಉಪ ಕ್ರಮವನ್ನು ಪರಿಚಯಿಸಲಾಗುತ್ತಿದೆ ಎಂದು ಕಾರ್ಯಾಧ್ಯಕ್ಷೆ ಡಾ.ನಂದಿನಿ ಮೂರ್ತಿ ಹೇಳಿದರು.ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಪ್ರತಿಯೊಂದು ಕ್ಷೇತ್ರದಲ್ಲೂ ವೇಗವಾಗಿ ಬೆಳವಣಿಗೆ ಆಧಿಸುತ್ತಿದೆ. ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ೨೦೨೬-೨೭ನೇ ಶೈಕ್ಷಣಿಕ ವರ್ಷದಿಂದ ಎಂಆರ್‌ಐಟಿ ತನ್ನ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಉಪಕ್ರಮ (ಸೆವೆನ್ ಸೆಮಿಸ್ಟರ್ ಬ್ರಾಂಚ್-ಸ್ಪೆಸಿಫಿಕ್ ಎಐ ವ್ಯಾಲ್ಯೂ ಏಡೆಡ್ ಲರ್ನಿಂಗ್ ಪಾತ್ ವೇ)ವನ್ನು ಪರಿಚಯಿಸುತ್ತಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮವು ವಿಟಿಯು ಪಠ್ಯಕ್ರಮಕ್ಕೆ ಹೆಚ್ಚುವರಿಯಾದ ಮೌಲ್ಯವರ್ಧಿತ ತರಬೇತಿಯಾಗಿದೆಯೇ ವಿನಃ ಇದು ವಿಟಿಯು ಪಠ್ಯಕ್ರಮವನ್ನು ಬದಲಾಯಿಸುವುದಿಲ್ಲ. ಪ್ರತಿ ಸೆಮಿಸ್ಟರ್‌ನಲ್ಲಿ ವಾರಕ್ಕೆ ೩ ಗಂಟೆಗಳ ವಿಶೇಷ ಎಐ ತರಬೇತಿ ನೀಡಲಾಗುತ್ತದೆ. ಏಳು ಸೆಮಿಸ್ಟರ್‌ಗಳಲ್ಲಿ ಒಟ್ಟು ೨೯೪ ಗಂಟೆಗಳ ತರಬೇತಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಪ್ರತಿ ವಿಭಾಗದ ವಿದ್ಯಾರ್ಥಿಗಳಿಗೆ ಅವವರ ವಿಷಯಕ್ಕೆ ಸಂಬಂಧಿಸಿದಂತೆ ಎಐ ಕೌಶಲ್ಯಗಳನ್ನು ಕಲಿಸಲಾಗುವುದು ಎಂದರು.ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ವಿದ್ಯಾರ್ಥಿಗಳು ಕೇವಲ ಎಐ ಉಪಕರಣಗಳನ್ನು ಬಳಸುವುದಲ್ಲ. ತಮ್ಮದೇ ಆದ ಪ್ರಾಜೆಕ್ಟ್‌ಗಳು, ಪೋರ್ಟ್‌ಪೋಲಿಯೋಗಳು ಮತ್ತು ಕೈಗಾರಿಕಾ ಅನುಭವದ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವಂತೆ ತರಬೇತಿ ಪಡೆಯಲಿದ್ದಾರೆ ಎಂದರು.
ಕೃತಕ ಬುದ್ಧಿಮತ್ತೆ (ಎಐ)ಯನ್ನು ಜವಾಬ್ದಾರಿಯುತ, ನೈತಿಕ ಮತ್ತು ಪಾರದರ್ಶಕವಾಗಿ ಬಳಸುವ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತದೆ. ನಮ್ಮ ಗುರಿ ಕೇವಲ ಎಐ ಕಲಿಸುವುದಲ್ಲ, ವಿದ್ಯಾರ್ಥಿಗಳು ತಮ್ಮ ಮೂಲ ಎಂಜಿನಿಯರಿಂಗ್ ಜ್ಞಾನವನ್ನು ಎಐ ಜೊತೆ ಸಂಯೋಜಿಸಿ ಭವಿಷ್ಯದ ಕೈಗಾರಿಕೆಗಳಿಗೆ ಸಿದ್ಧರಾಗುವಂತೆ ಮಾಡುವುದಾಗಿದೆ ಎಂದು ನುಡಿದರು.
ಈ ಜ್ಞಾನವನ್ನು ಕೇವಲ ಎಂಆರ್‌ಐಟಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ನೀಡುವುದಲ್ಲದೆ, ಇತರೆ ಕಾಲೇಜಿನ ವಿದ್ಯಾರ್ಥಿಗಳಿಗೂ ನೀಡಲಾಗುವುದು. ಅದಕ್ಕೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗುತ್ತದೆ ಎಂದರು.
ಎಐ ಪ್ರವೇಶದಿಂದಾಗಿ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಗುಣಮಟ್ಟ ಕಡಿಮೆಯಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ ದೇಶದೊಳಗೆ ೩೪೨ ಎಂಜಿನಿಯರಿಂಗ್ ಕಾಲೇಜುಗಳು ಮುಚ್ಚಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕಾಲೇಜುಗಳು ಬಂದ್ ಆಗಿದ್ದು, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲೂ ಕಾಲೇಜುಗಳು ಬಂದ್ ಆಗಿವೆ. ಚೆನ್ನೈನಲ್ಲಿ ೪೫ ಕಾಲೇಜುಗಳು ಮುಚ್ಚಿದ್ದರೂ, ಕರ್ನಾಟಕದಲ್ಲೂ ಹಲವು ಕಾಲೇಜುಗಳು ಬಂದ್ ಆಗಿವೆ. ಅದಕ್ಕಾಗಿ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿ ಗುಣಮಟ್ಟವನ್ನು ಹೆಚ್ಚಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂಳಿದರು.ಗೋಷ್ಠಿಯಲ್ಲಿ ಡಾ.ಅಭಿನಂದನ್, ಡಾ.ರಾಮಲಿಂಗಯ್ಯ, ಡಾ.ಗೋಕುಲ್ ಇದ್ದರು.