ಮುಂಗಾರು ಮಳೆ ಸಮೃದ್ಧಿಯಾಗಿ ಸುರಿದು ರೈತಾಪಿ ವರ್ಗದ ಬದುಕು ಹಸನಾಗಲಿ, ಗ್ರಾಮಗಳಲ್ಲಿ ಸುಭಿಕ್ಷತೆ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಕಟ್ಟಾಯ ಗ್ರಾಮದ ಬೆಟ್ಟದ ಮೇಲಿರುವ ಐತಿಹಾಸಿಕ ಬೆನ್ನಪ್ಪ ಗಣಪತಿ ದೇವಾಲಯದಲ್ಲಿ ಸೋಮವಾರ ವಿಶೇಷ ಉಪಹಾರ ಪೂಜೆ, ಅಭಿಷೇಕ, ಮಹಾಮಂಗಳಾರತಿ ಹಾಗೂ ಧಾರ್ಮಿಕ ವಿಧಿವಿಧಾನಗಳು ಭಕ್ತಿ, ಶ್ರದ್ಧೆಯಿಂದ ನೆರವೇರಿದವು. ಭಕ್ತರು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ, ಸಂಪ್ರದಾಯದಂತೆ ಕೆಂಡ ಹಾಯುವ ಆಚರಣೆಯಲ್ಲಿ ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ಹಾಸನ
ಮುಂಗಾರು ಮಳೆ ಸಮೃದ್ಧಿಯಾಗಿ ಸುರಿದು ರೈತಾಪಿ ವರ್ಗದ ಬದುಕು ಹಸನಾಗಲಿ, ಗ್ರಾಮಗಳಲ್ಲಿ ಸುಭಿಕ್ಷತೆ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಕಟ್ಟಾಯ ಗ್ರಾಮದ ಬೆಟ್ಟದ ಮೇಲಿರುವ ಐತಿಹಾಸಿಕ ಬೆನ್ನಪ್ಪ ಗಣಪತಿ ದೇವಾಲಯದಲ್ಲಿ ಸೋಮವಾರ ವಿಶೇಷ ಉಪಹಾರ ಪೂಜೆ, ಅಭಿಷೇಕ, ಮಹಾಮಂಗಳಾರತಿ ಹಾಗೂ ಧಾರ್ಮಿಕ ವಿಧಿವಿಧಾನಗಳು ಭಕ್ತಿ, ಶ್ರದ್ಧೆಯಿಂದ ನೆರವೇರಿದವು.ಗ್ರಾಮೀಣ ಭಾಗದಲ್ಲಿ ಪೀಳಿಗೆಯಿಂದ ಪೀಳಿಗೆ ನಡೆದುಕೊಂಡು ಬರುತ್ತಿರುವ ಈ ವಿಶಿಷ್ಟ ಆಚರಣೆಯು ಈ ಬಾರಿಯೂ ಅದ್ಧೂರಿಯಾಗಿ ಜರುಗಿತು. ಬರಗಾಲದ ಮುನ್ಸೂಚನೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಭಕ್ತರು ಒಟ್ಟಾಗಿ ಸೇರಿ ಮಳೆಯಾಗಮನಕ್ಕಾಗಿ ದೇವರ ಮೊರೆ ಹೋಗುವ ಸಂಪ್ರದಾಯವನ್ನು ಮುಂದುವರಿಸಿದರು. ಬೆಳಿಗ್ಗೆಯಿಂದಲೇ ದೇವಾಲಯದ ಆವರಣದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣವಾಗಿತ್ತು. ದೇವಾಲಯವನ್ನು ತಳಿರು ತೋರಣಗಳು, ಹೂವಿನ ಅಲಂಕಾರ ಮತ್ತು ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕರಾದ ರಮೇಶ್ ಅವರ ನೇತೃತ್ವದಲ್ಲಿ ಬೆನಪ್ಪ ದೇವರಿಗೆ ಅಭಿಷೇಕ, ವಿಶೇಷ ಪೂಜೆ, ಅರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಸಂಪ್ರದಾಯದಂತೆ ಕಟ್ಟಾಯ, ಮೂಡಲಕೊಪ್ಪಲು, ಗಾಣಿಗರಕೊಪ್ಪಲು ಹಾಗೂ ಕಲ್ಲಾರೆಕೊಪ್ಪಲು ಗ್ರಾಮಗಳ ಭಕ್ತರು ತಮ್ಮ ಮನೆಗಳಲ್ಲಿ ಮೊಸರನ್ನ, ಚಿತ್ರಾನ್ನ, ಕೇಸರಿಬಾತ್ ಸೇರಿದಂತೆ ವಿವಿಧ ರೀತಿಯ ಉಪಹಾರ ಮತ್ತು ಪ್ರಸಾದಗಳನ್ನು ಸಿದ್ಧಪಡಿಸಿಕೊಂಡು ತಲೆ ಮೇಲೆ ಹೊತ್ತುಕೊಂಡು ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆಯಲ್ಲಿ ದೇವಾಲಯದತ್ತ ತೆರಳಿದರು. ಸುಮಾರು ಎರಡರಿಂದ ಮೂರು ಕಿಲೋಮೀಟರ್ ದೂರದ ಬೆಟ್ಟದ ಹಾದಿಯನ್ನು ಭಕ್ತರು ಬರಿಗಾಲಿನಲ್ಲಿ ಕ್ರಮಿಸಿದ್ದು ವಿಶೇಷವಾಗಿತ್ತು. ದೇವಾಲಯದ ಆವರಣ ತಲುಪಿದ ಬಳಿಕ ಭಕ್ತರು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ, ಸಂಪ್ರದಾಯದಂತೆ ಕೆಂಡ ಹಾಯುವ ಆಚರಣೆಯಲ್ಲಿ ಪಾಲ್ಗೊಂಡರು. ದೇವರ ಮೇಲಿನ ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿ ಕೆಂಡವನ್ನು ದಾಟಿ ಮೂರು ಸುತ್ತು ಪ್ರದಕ್ಷಿಣೆ ಹಾಕುವ ಈ ಆಚರಣೆ ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿದ್ದು, ಸ್ಥಳೀಯರ ಪಾಲಿಗೆ ಅತ್ಯಂತ ಪವಿತ್ರ ಸಂಪ್ರದಾಯವಾಗಿದೆ.ನಂತರ ಭಕ್ತರು ತಂದಿದ್ದ ಪ್ರಸಾದವನ್ನು ದೇವಾಲಯದ ಮುಂಭಾಗದಲ್ಲಿ ಬಿಳಿ ಪಂಚೆಯ ಮೇಲೆ ಎಡೆಯ ರೂಪದಲ್ಲಿ ಜೋಡಿಸಿ ದೇವರಿಗೆ ಸಮರ್ಪಿಸಿದರು. ಅರ್ಚಕರು ವಿಶೇಷ ಪೂಜೆ ನೆರವೇರಿಸಿ ನೈವೇದ್ಯ ಸಲ್ಲಿಸಿದ ಬಳಿಕ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು. ಮೊದಲು ಗಂಗಾಮತಸ್ಥರಿಗೆ ಹಾಗೂ ವಾದ್ಯಗೋಷ್ಠಿಯ ಕಲಾವಿದರಿಗೆ ಪ್ರಸಾದ ವಿತರಿಸಿ, ಬಳಿಕ ಎಲ್ಲಾ ಭಕ್ತರು ಒಟ್ಟಾಗಿ ಪ್ರಸಾದ ಸ್ವೀಕರಿಸಿದರು. ಗ್ರಾಮಸ್ಥರ ಪ್ರಕಾರ, ಮಳೆ ಬರದೆ ರೈತರು ಸಂಕಷ್ಟಕ್ಕೆ ಸಿಲುಕುವ ಸಂದರ್ಭಗಳಲ್ಲಿ ಬೆನಪ್ಪ ದೇವರ ಮೊರೆ ಹೋಗುವ ಈ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಕೆಂಡ ಹಾಯ್ದು ಪ್ರಾರ್ಥನೆ ಸಲ್ಲಿಸಿದರೆ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.ಕಾರ್ಯಕ್ರಮದಲ್ಲಿ ನಾಲ್ಕು ಗ್ರಾಮಗಳ ಹಿರಿಯರು, ಮುಖಂಡರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು. ಸಾಂಪ್ರದಾಯಿಕ ಆಚರಣೆಗಳು, ಧಾರ್ಮಿಕ ನಂಬಿಕೆಗಳು ಹಾಗೂ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು. ಬೆನಪ್ಪ ದೇವರ ಸನ್ನಿಧಿಯಲ್ಲಿ ನಡೆದ ಈ ವಿಶೇಷ ಉಪಹಾರ ಪೂಜೆ ಗ್ರಾಮೀಣ ಸೌಹಾರ್ದತೆ, ಭಕ್ತಿಭಾವ ಮತ್ತು ಸಂಪ್ರದಾಯಗಳ ಸಂಗಮವಾಗಿ ಗಮನ ಸೆಳೆದಿದ್ದು, ಉತ್ತಮ ಮಳೆಯಾಗಿ ರಾಜ್ಯ ಸುಭಿಕ್ಷವಾಗಲಿ ಎಂದು ಭಕ್ತರು ಪ್ರಾರ್ಥಿಸಿದರು.