ನಕಲಿ ಗುತ್ತಿಗೆ ಪೌರ ಕಾರ್ಮಿಕರ ಹೆಸರಲ್ಲಿ ಹಣ ವಂಚನೆ ಪತ್ತೆಗೆ ತಾಂತ್ರಿಕ ತಂಡ ರಚನೆ

| Published : Sep 12 2024, 01:51 AM IST

ನಕಲಿ ಗುತ್ತಿಗೆ ಪೌರ ಕಾರ್ಮಿಕರ ಹೆಸರಲ್ಲಿ ಹಣ ವಂಚನೆ ಪತ್ತೆಗೆ ತಾಂತ್ರಿಕ ತಂಡ ರಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಪೌರಕಾರ್ಮಿಕರ ಇಎಸ್ಐ ಮತ್ತು ಪಿಎಫ್ ಹಣ ಹಾಗೂ ನಕಲಿ ಗುತ್ತಿಗೆ ಪೌರ ಕಾರ್ಮಿಕರ ಹೆಸರಿನಲ್ಲಿ ಕೋಟ್ಯಾಂತರ ರು. ವಂಚನೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಸಹಕರಿಸಲು ಬಿಬಿಎಂಪಿಯ ಆರೋಗ್ಯ ಹಾಗೂ ನೈರ್ಮಲೀಕರಣ ವಿಭಾಗದ ವಿಶೇಷ ಆಯುಕ್ತ ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಇಎಸ್ಐ ಮತ್ತು ಪಿಎಫ್ ಹಣ ಹಾಗೂ ನಕಲಿ ಗುತ್ತಿಗೆ ಪೌರ ಕಾರ್ಮಿಕರ ಹೆಸರಿನಲ್ಲಿ ಕೋಟ್ಯಾಂತರ ರು. ವಂಚನೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳಿಗೆ ಸಹಕರಿಸಲು ಬಿಬಿಎಂಪಿಯ 6 ಅಧಿಕಾರಿಗಳ ತಾಂತ್ರಿಕ ತಂಡ ರಚಿಸಿ ಬಿಬಿಎಂಪಿಯ ಆರೋಗ್ಯ ಹಾಗೂ ನೈರ್ಮಲೀಕರಣ ವಿಭಾಗದ ವಿಶೇಷ ಆಯುಕ್ತ ಆದೇಶಿಸಿದ್ದಾರೆ.

ಗುತ್ತಿಗೆ ಪೌರಕಾರ್ಮಿಕರಿಗೆ ಇಎಸ್‌ಐ ಮತ್ತು ಪಿಎಫ್‌ ಹಣದ 384 ಕೋಟಿ ರು. ಹಾಗೂ ನಕಲಿ ಪೌರಕಾರ್ಮಿಕರ ವೇತನದ ಹೆಸರಿನಲ್ಲಿ 550 ಕೋಟಿ ರು, ವಂಚನೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಇದೀಗ ತನಿಖೆ ಆರಂಭಿಸಿದೆ. ತನಿಖಾಧಿಕಾರಿಗೆ ಬಿಬಿಎಂಪಿಯ ಅಗತ್ಯ ದಾಖಲೆಗಳನ್ನು ನೀಡಲು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿದೆ. ಈ ತಂಡದಲ್ಲಿ ಆರೋಗ್ಯ, ಎಂಜಿನಿಯರಿಂಗ್‌, ಹಣಕಾಸು ವಿಭಾಗದ ಅಧಿಕಾರಿಗಳಾದ ಉದಯ್ ಚೌಗುಲೆ, ಅಬ್ದುರಾಜ್, ಎಂ.ಶಿವಶಂಕರ್, ಕದರಣ್ಣ ಹಾಗೂ ಕಾಶಿನಾಥ್ ಸದಸ್ಯರಾಗಿ ನೇಮಿಸಲಾಗಿದೆ.