ಸದ್ಯ ಕೇಂದ್ರ ಸರ್ಕಾರವು ದೇಶದ 11 ರಾಜ್ಯಗಳಲ್ಲಿ ಇದರ ಮ್ಯಾಪಿಂಗ್‌ ಕಾರ್ಯ ಆರಂಭಿಸಿದ್ದು, ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ತಮಿಳುನಾಡಿನ 8 ಕೋಟಿ ಮತದಾರರ ಪೈಕಿ 98 ಲಕ್ಷ‌ ಜನರ ಮ್ಯಾಪಿಂಗ್ ಆಗಿಲ್ಲ. ರಾಜ್ಯದಲ್ಲೂ ಮ್ಯಾಪಿಂಗ್‌ ಕಾರ್ಯಕ್ಕೆ ಸದ್ದಿಲ್ಲದೆ ಚಾಲನೆ ದೊರೆತಿದ್ದು, ಇನ್ನೂ 3 ತಿಂಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಹ ಆರಂಭ ಆಗಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್ಐಆರ್) ಸಂವಿಧಾನ ವಿರೋಧಿ ನಡೆ ಎಂದು ಹೋರಾಟಗಾರ ಶಿವಸುಂದರ್ ಆರೋಪಿಸಿದರು.

ನಗರದ ಜೆಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಅಹಿಂದ ಚಳವಳಿ ಸಂಘಟನೆಯು ಶನಿವಾರ ಆಯೋಜಿಸಿದ್ದ

ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಜಾಗೃತಿ ಸಭೆಯಲ್ಲಿ ಅವರು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುಸಿತ- ಚುನಾವಣಾ ಆಯೋಗದ ದುರುಪಯೋಗ, ಮನರೇಗಾ ಉದ್ಯೋಗ ಖಾತ್ರಿ ಯೋಜನೆ ಕಳವಳಗಳು ಕುರಿತು ಮಾತನಾಡಿದರು.

ಎಸ್‌ಐಆರ್ ಎಂದರೆ ಕೇವಲ‌ ಮತಪಟ್ಟಿಯ ತೀವ್ರ ಪರಿಷ್ಕರಣೆ ಮಾತ್ರವಲ್ಲ, ಅಷ್ಟೇ ಆಗಿದ್ದರೆ ಇದಕ್ಕೆ ಯಾರ ವಿರೋಧವೂ ಇರುತ್ತಿರಲಿಲ್ಲ. ಸರ್ಕಾರವೇ ಯಾರು ಮತ ಹಾಕಬೇಕು ಎಂಬುದನ್ನು ಆಯ್ಕೆ ಮಾಡುವ ವಿಕೃತ, ಫ್ಯಾಸಿಸ್ಟ್ ಪ್ರಕ್ರಿಯೆಯಾಗಿದೆ ಎಂದು ದೂರಿದರು.

ಸದ್ಯ ಕೇಂದ್ರ ಸರ್ಕಾರವು ದೇಶದ 11 ರಾಜ್ಯಗಳಲ್ಲಿ ಇದರ ಮ್ಯಾಪಿಂಗ್‌ ಕಾರ್ಯ ಆರಂಭಿಸಿದ್ದು, ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ತಮಿಳುನಾಡಿನ 8 ಕೋಟಿ ಮತದಾರರ ಪೈಕಿ 98 ಲಕ್ಷ‌ ಜನರ ಮ್ಯಾಪಿಂಗ್ ಆಗಿಲ್ಲ. ರಾಜ್ಯದಲ್ಲೂ ಮ್ಯಾಪಿಂಗ್‌ ಕಾರ್ಯಕ್ಕೆ ಸದ್ದಿಲ್ಲದೆ ಚಾಲನೆ ದೊರೆತಿದ್ದು, ಇನ್ನೂ 3 ತಿಂಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಹ ಆರಂಭ ಆಗಲಿದೆ. ನಾವು ಈ ದೇಶದವರು ಎಂದು ನಾವೇ ಸಾಬೀತುಪಡಿಸಿಕೊಳ್ಳಬೇಕಾಗುತ್ತದೆ. 3 ಹಂತಗಳಲ್ಲಿ ಪರಿಶೀಲನೆಗೆ ಅವಕಾಶ ನೀಡಿದ್ದು, ಎಲ್ಲವೂ ಗೊಂದಲಮಯವಾಗಿವೆ ಎಂದರು.

ಅಹಿಂದ ಚಳವಳಿ ರಾಜ್ಯ ಮುಖ್ಯ ಸಂಚಾಲಕ ಎಸ್. ಮೂರ್ತಿ ಮಾತನಾಡಿ, ಸಂವಿಧಾನ ಅನುಷ್ಠಾನಕ್ಕೆ ಬಂದ ದಿನ‌ ದೆಹಲಿಯಲ್ಲಿ ಕೆಲವರು ಸಂವಿಧಾನದ ಪ್ರತಿ ಸುಟ್ಟರು. ಮನುಸ್ಮೃತಿ ಸಂವಿಧಾನವಾಗಬೇಕಿತ್ತು ಎಂದಿದ್ದರು. ಇಂದು ಅವರೇ ಈ ದೇಶವನ್ನು ಆಳುತ್ತಿದ್ದಾರೆ. ಬಹುಸಂಖ್ಯಾತರಾದ, ಸ್ವಾತಂತ್ರ್ಯಕ್ಕಾಗಿ ಪ್ರಾಣ ಸಮರ್ಪಿಸಿದ‌ ವರ್ಗದ ನಾವು ಕೆಲವರ ದೃಷ್ಟಿಯಲ್ಲಿ ದೇಶದ್ರೋಹಿಗಳಂತೆ ಕಾಣುತ್ತಿದ್ದೇವೆ ಎಂದರು.

ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಮುಖಂಡರಾದ ವಿಜಯಕುಮಾರಿ ಅರಸ್, ವೆಂಕಟೇಶ ಗೌಡ, ಅಲ್ಪಾನ್ಸ್ ಕೆನಡಿ, ಬಿ. ಶಿವಣ್ಣ, ಶ್ರೀನಿವಾಸ, ನಟರಾಜ್‌ ಮಹರ್ಷಿ, ಎಸ್. ಪ್ರತಿಮಾ, ದೇವರಾಜ ಪಾಳೇಗಾರ, ತಾಯೂರು ಪ್ರಕಾಶ್‌, ಶ್ರೀಸಾಯಿ ಸತೀಶ್‌, ಸುರೇಂದ್ರ, ತಾಜ್ ಪಾಷ ಮೊದಲಾದವರು ಇದ್ದರು.

ದಸರಾ ವೆಚ್ಚ ಬಹಿರಂಗಗೊಳಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಮೈಸೂರು

ಕಳೆದ ವರ್ಷದ ನಡೆದ ಮೈಸೂರು ದಸರಾ ಮಹೋತ್ಸವದ ವೆಚ್ಚವನ್ನು ಬಹಿರಂಗಪಡಿಸದಿರುವ ಜಿಲ್ಲಾಡಳಿತ ಹಾಗು ರಾಜ್ಯ ಸರಕಾರದ ಕ್ರಮ ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಬಿಜೆಪಿ ಮುಖಂಡ ಡಾ. ಸುಶ್ರುತ ಗೌಡ ಆರೋಪಿಸಿದ್ದಾರೆ.

ಸುಮಾರು 50 ಕೋಟಿಗೂ ಅಧಿಕ ಸಾರ್ವಜನಿಕರ ತೆರಿಗೆ ಹಣವನ್ನು ಖರ್ಚು ಮಾಡಿ ದಸರಾ ಆಚರಿಸಲಾಗಿದೆ. ಜನ ಸಾಮಾನ್ಯರ ಸಂಶಯವೆಂದರೆ ಈ ಮೊತ್ತದಲ್ಲಿ ಸಾಕಷ್ಟು ಅವ್ಯವಹಾರವಾಗಿದೆ. ಇದನ್ನು ನಿವಾರಿಸಲು ತಕ್ಷಣ ಜಿಲ್ಲಾಡಳಿತ ದಸರಾ ಖರ್ಚು ವೆಚ್ಚ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ದಸರಾಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಮೊತ್ತ, ಟಿಕೆಟ್ ಮಾರಾಟ, ಪ್ರಯೋಜಕತ್ವದಲ್ಲಿ ದೊರೆತ ಮೊತ್ತ, ಖರ್ಚಾದ ಹಣದ ಬಗ್ಗೆ ಯಾವುದೇ ಮಾಹಿತಿಯನ್ನು ಈವರೆಗೆ ಸಂಬಂಧಿಸಿದ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ. ದಸರಾದಲ್ಲಿ ಹಣ ದೋಚುವುದೇ ಕೆಲವರಿಗೆ ಲಾಭದಾಯಕ ಉದ್ಯಮವಾಗಿದೆ. ಇದನ್ನು ತಡೆಗಟ್ಟಬೇಕಾದರೆ ಖರ್ಚು ವೆಚ್ಚಗಳಲ್ಲಿ ಪಾರದರ್ಶಕತೆ ಅಗತ್ಯ. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಈ ಪಾರದರ್ಶಕತೆ ಮಾಯವಾಗಿದೆ ಎಂದು ಅವರು ದೂರಿದ್ದಾರೆ.