ಸಾರಾಂಶ
ಮತದಾರರ ಪಟ್ಟಿಯಿಂದ ಅರ್ಹ ವ್ಯಕ್ತಿಯನ್ನು ಕೈ ಬಿಡದಂತೆ ಮತ್ತು ಅನರ್ಹ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಬರಬಾರದೆಂದು ಉದ್ದೇಶದಿಂದ ಪ್ರತಿವರ್ಷದಂತೆ ಈ ವರ್ಷವೂ ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯನ್ನು ನಡೆಸಲಾಗುತ್ತಿದೆ ಎಂದು ತಹಸೀಲ್ದಾರ್ ಮೋಹನ್‌ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಮತದಾರರ ಪಟ್ಟಿಯಿಂದ ಅರ್ಹ ವ್ಯಕ್ತಿಯನ್ನು ಕೈ ಬಿಡದಂತೆ ಮತ್ತು ಅನರ್ಹ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಬರಬಾರದೆಂದು ಉದ್ದೇಶದಿಂದ ಪ್ರತಿವರ್ಷದಂತೆ ಈ ವರ್ಷವೂ ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯನ್ನು ನಡೆಸಲಾಗುತ್ತಿದೆ ಎಂದು ತಹಸೀಲ್ದಾರ್ ಮೋಹನ್‌ಕುಮಾರ್ ತಿಳಿಸಿದರು. ನಗರದ ತಾಲೂಕು ಕಚೇರಿಯಲ್ಲಿ ಈ ಸಂಬಂಧ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಮೂಲ್ಯವಾಗಿದ್ದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ಬಿಟ್ಟುಬಿಡುವಿಕೆಗಳ ಕಾರಣದಿಂದಾಗಿ ಗಮನಾರ್ಹ ಬದಲಾವಣೆಯು ಚುನಾವಣಾ ಆಯೋಗಕ್ಕೆ ಬಂದಿರುವ ಕಾರಣ ಹಾಗೂ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ನಡೆಸಲು ಮತದಾರರ ಪಟ್ಟಿಗಳ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಮತದಾರರ ಪಟ್ಟಿಗಳನ್ನು ಸಿದ್ದಪಡಿಸಲಾಗುತ್ತಿದೆ. ನಮ್ಮ ಬಿಎಲ್‌ಒಗಳು ಪ್ರತಿ ಮನೆಗಳಿಗೆ ಹೋಗಿ ಎಸ್‌ಐಆರ್ ಫಾರಂಗಳನ್ನು ನೀಡಲಿದ್ದು ಆ ಮನೆಯ ಮುಖ್ಯಸ್ಥರು ಅದನ್ನು ಭರ್ತಿ ಮಾಡಬೇಕು. ಅಂದರೆ ವಿಳಾಸ, ಮೊಬೈಲ್ ನಂ, ಹೀಗೆ ಬದಲಾವಣೆಯಾಗಿದ್ದರೆ ಅದನ್ನು ಭರ್ತಿ ಮಾಡಿದ ಹತ್ತು ದಿನಗಳ ನಂತರ ಮತ್ತೆ ಫಾರಂ ವಾಪಸ್ ಪಡೆದು ಪರಿಷ್ಕರಣೆ ಮಾಡುತ್ತೇವೆ. ಇದರ ಮುಖ್ಯ ಉದ್ದೇಶ ಅನರ್ಹ ವ್ಯಕ್ತಿಗಳನ್ನು ಕೈಬಿಟ್ಟು ಅರ್ಹರು ಮತದಾನ ಮಾಡುವಂತಾಗಬೇಕೆಂಬುದಾಗಿದೆ. ಆರೋಗ್ಯದಾಯಕ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಅಭಿಯಾನ ನಡೆಸಲಾಗುತ್ತಿದ್ದು ಎಲ್ಲರು ಸಹಕರಿಸುವಂತೆ ತಿಳಿಸಿದರು. ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ಹೊಸ ಮತದಾರರ ಪಟ್ಟಿಗಳನ್ನು ಸಿದ್ದಪಡಿಸುವುದಕ್ಕಾಗಿ ಹಾಗೂ ಅನರ್ಹರನ್ನು ಕೈಬಿಡುವುದಕ್ಕಾಗಿ ಈ ವಿಶೇಷ ಪರಿಷ್ಕರಣೆಯನ್ನು ಚುನಾವಣಾ ಆಯೋಗ ನಡೆಸುತ್ತಿದ್ದು ಅದರಂತೆ ನಮ್ಮ ತಾಲೂಕಿನಲ್ಲಿಯೂ ಈ ಅಭಿಯಾನ ನಡೆಯಲಿದೆ. ನಗರಸಭಾ ವ್ಯಾಪ್ತಿಯಲ್ಲಿ ೪೨ ಬಿಎಲ್‌ಒಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಜನವರಿ ೨೦೨೫ರ ಅಂಕಿ ಅಂಶದ ಪ್ರಕಾರ ನಗರದಲ್ಲಿ ೧ಲಕ್ಷದ ೮೭ಸಾವಿರದ ೫೯ ಜನಸಂಖ್ಯೆಯಿದ್ದು ಅದರಲ್ಲಿ ಮಹಿಳೆಯರು ೯೬.೬೭೬, ಪುರುಷರು ೯೦.೩೮೦ ಇದ್ದಾರೆ ಎಂದ ಅವರು ಮುಂದೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಬರಲಿದ್ದು ೧-೧೧-೨೦೨೨ಕ್ಕೆ ಮುಂಚಿತವಾಗಿ ಪದವಿ ಮುಗಿದ ಪದವಿಧರರು ಮಾತ್ರ ಮತದಾನಕ್ಕೆ ಅರ್ಹರಾಗಿದ್ದು ಅವರು ಮತದಾನದ ಗುರುತಿನ ಚೀಟಿ, ಬಿಎ ಪದವಿ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಮತದಾರರು ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗೆ ಸಹಕರಿಸುವಂತೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರೇಡ್-೨ ತಹಸೀಲ್ದಾರ್ ಜಗನ್ನಾಥ್, ರಾಜಕೀಯ ಪಕ್ಷಗಳ ಮುಖಂಡರಾದ ಬಿಸಲೇಹಳ್ಳಿ ಜಗದೀಶ್, ಎಂ.ಎನ್. ಕಾಂತರಾಜು, ಎಂ.ಎಸ್. ಶಿವಸ್ವಾಮಿ, ಟಿ.ಎನ್. ಪ್ರಕಾಶ್ ಮತ್ತಿತರರಿದ್ದರು.