ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಕೈಗೊಳ್ಳುವ ಸಂಬಂಧ ಭಾರತ ಚುನಾವಣಾ ಆಯೋಗ ನೀಡಿರುವ ಸುತ್ತೋಲೆ, ನಿರ್ದೇಶನಗಳು ಮತ್ತು ಪಿಪಿಟಿಗಳನ್ನು ಆಧಾರಿಸಿ ಬಿಎಲ್‍ಒ ಮತ್ತು ಬಿಎಲ್‍ಒ ಮೇಲ್ವಿಚಾರಕರಿಗೆ ಸೂಕ್ತ ತರಬೇತಿ ನೀಡಿ ಮನೆ ಮನೆ ಸಮೀಕ್ಷೆಗೆ ಸಜ್ಜುಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಕೈಗೊಳ್ಳುವ ಸಂಬಂಧ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ 2026 ಅನ್ನು ಕೈಗೊಳ್ಳುವ ಸಂಬಂಧ 2002ರ ಮತದಾರರ ಪಟ್ಟಿಗೂ ಹಾಗೂ 2025ರ ಮತದಾರರ ಪಟ್ಟಿಗೂ ತಾಳೆ ಮಾಡಿ ಮತದಾರರ ಅಂಕಿ ಅಂಶಗಳನ್ನು ನಿಗಧಿತ ನಮೂನೆಯಲ್ಲಿ ಸಹಿ ಮಾಡಿ ದೃಢೀಕರಿಸಿ ಸಲ್ಲಿಸಬೇಕು ಎಂದು ಹೇಳಿದರು.ತಮ್ಮ ವ್ಯಾಪ್ತಿಯ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಬಿಎಲ್‍ಎ ಗಳನ್ನು ನೇಮಕ ಮಾಡುವಂತೆ ತಿಳಿಸುವುದು ಹಾಗೂ ಪಟ್ಟಿಯನ್ನು ಪಡೆದು ಸಲ್ಲಿಸಬೇಕು ಎಂದು ತಿಳಿಸಿದರು.
*ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ:ಹಿಂದುಳಿದ ವರ್ಗಗಳ ಇಲಾಖೆಯಿಂದ ಸರಬರಾಜಾಗಿರುವ ಕುಟುಂಬ ಅನುಸೂಚಿತ ನಮೂನೆಗಳನ್ನು ಈಗಾಗಲೇ ತಾಲೂಕು ಆರೋಗ್ಯಾಧಿಕಾರಿಗಳ ಮುಖಾಂತರ ಆಶಾ ಕಾರ್ಯಕರ್ತೆಯರಿಗೆ ತಲುಪಿಸಿದ್ದು, ಇವರು ಮನೆಮನೆಗೆ ನಮೂನೆಗಳನ್ನು ವಿತರಿಸಿರುವ ಬಗ್ಗೆ ಮೇಲ್ವಿಚಾರಣೆ ಮಾಡಲು ತಿಳಿಸಲಾಯಿತು. ಮನೆ ಮನೆ ಸಮೀಕ್ಷೆ ಕಾರ್ಯ ಕೈಗೊಳ್ಳಲು ಗಣತಿದಾರರನ್ನು ನೇಮಕ ಮಾಡುವುದು, ಸಮೀಕ್ಷೆಗೆ ನೇಮಕವಾದ ಎಲ್ಲ ಗಣತಿದಾರರಿಗೆ ಮಾಸ್ಟರ್ ಟ್ರೈನರ್‌ಗಳಿಂದ ಅಗತ್ಯ ತರಬೇತಿ ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಉಪ ವಿಭಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ಹಾಗೂ ಜಿಲ್ಲೆಯ ಎಲ್ಲ ತಹಸೀಲ್ದಾರ್‌ಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಇದ್ದರು.