ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಕೋಡೈತಿರುನಾಳ್ ಉತ್ಸವದ ಅಂಗವಾಗಿ ಪ್ರತಿರಾತ್ರಿ ಮಹಾವಿಷ್ಣು ಚೆಲುವನಾರಾಯಣಸ್ವಾಮಿಗೆ ಸೋಮವಾರ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರದೊಂಡನೆ ಉತ್ಸವ ನೆರವೇರಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಕೋಡೈತಿರುನಾಳ್ ಉತ್ಸವದ ಅಂಗವಾಗಿ ಪ್ರತಿರಾತ್ರಿ ಮಹಾವಿಷ್ಣು ಚೆಲುವನಾರಾಯಣಸ್ವಾಮಿಗೆ ಸೋಮವಾರ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರದೊಂಡನೆ ಉತ್ಸವ ನೆರವೇರಿತು.

ವೈರಮುಡಿ ಬ್ರಹ್ಮೋತ್ಸವ ಮುಗಿಯುತ್ತಿದ್ದಂತೆ ಆರಂಭವಾಗುವ ಕೋಡೈ ತಿರುನಾಳ್ ಮಹೋತ್ಸವ 15 ದಿನಗಳಕಾಲ ಏಪ್ರಿಲ್ 17ರ ರಾತ್ರಿ ಅಮಾವಾಸ್ಯೆವರೆಗೆ ನಡೆಯಲಿದೆ. ಪ್ರತಿ ರಾತ್ರಿ ದೇವಾಲಯದ ಒಳಭಾಗದ ಪ್ರಾಕಾರದಲ್ಲಿ ನಡೆಯುತ್ತಿದೆ.

ಹಿಂಭಾಗದ ಅಮ್ಮನವರ ಸನ್ನಿಧಿಯ ಬಳಿ ಮಂತ್ರಪಾರಾಯಣ, ರಾಮಾಯಣ, ವಿಶೇಷ ಪಾರಂಪರಿಕ ಸಂಸ್ಕೃತ ಕವನಗಳ, ಬಹುಪರಾಕಿನೊಂದಿಗೆ, ಸಣ್ಣ ಹಿಮ್ಮೇಳದಸುತ್ತಿನಲ್ಲಿ ಚೆಲುವನಾರಾಯಣಸ್ವಾಮಿ ಆರಾಧಿಸಲ್ಪಡುವುದೇ ಕೊಡೈತಿರುನಾಳ್‌ ವಿಶೇಷವಾಗಿದೆ.

ಪ್ರತಿದಿನ ಭಗವಂತನಿಗೆ ಒಬ್ಬೊಬ್ಬರು ಕೈಂಕರ್ಯಪರರು ಸೇವೆ ಮಾಡುತ್ತಾ ಬಂದಿದ್ದು, ಕೊಸಂಬರಿ, ಪಾನಕ, ಪ್ರಸಾದ ನೀಡಲಾಗುತ್ತದೆ. ಏಕಾದಶಿ ದಿನವಾದ ಸೋಮವಾರ ರಾತ್ರಿ ಯತಿರಾಜದಾಸರ್ ಗುರುಪೀಠದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ವಿಶೇಷವಾದ ಕೊಸಂಬರಿ, ಪಾನಕ ಸೇವೆ ಸಲ್ಲಿಸಿ ನೂರಾರು ಭಕ್ತರಿಗೆ ವಿತರಿಸಲಾಯಿತು.

ಏ.17 ರಾತ್ರಿ 7ಕ್ಕೆ ವೈಮಾಳಿಗೆ ಕೋಡೈತಿರುನಾಳ್ ವೈಭವ:

ಅಮಾವಾಸ್ಯೆಯಂದು ಕೊಡೈತಿರುನಾಳ್ ವಿಶೇಷವಾಗಿ ನಡೆಯುತ್ತಾ ಬಂದಿದೆ. ಚಿನ್ನದ ಆದಿಶೇಷನೊಂದಿಗೆ ಕಾಲು ನೀಡಿ ಕುಳಿತ ಶೈಲಿಯಲ್ಲಿ ಅಲಂಕೃತನಾಗುವ ಚೆಲುವನಾರಾಯಣನ ಸೊಬಗನ್ನು ನೇರ ದರ್ಶನದಿಂದ ಮಾತ್ರ ಕಣ್ತುಂಬಿಕೊಳ್ಳಬೇಕು. ಇಡೀ ಉತ್ಸವ ಮಹಡಿಯಮೇಲೆ ನೆರವೇರುತ್ತದೆ. ಕೊನೆಯಲ್ಲಿ ಉತ್ಸವ ಸರ್ಪನಡಿಗೆಯಲ್ಲೇ ಸಾಗುವುದು ವಿಶೇಷವಾಗಿದೆ. ಚೆಲುವನಾರಾಯಣಸ್ವಾಮಿ ದೇವಾಲಯದ ಮಹಡಿಗೆ ಪ್ರವೇಶಿಸಲು ಮತ್ತು ಚೆಲ್ವತಿರುನಾರಾಯಣಸ್ವಾಮಿಯ ವಿಮಾನಗೋಪುರ , ಗಂಡುಬೇರುಂಡ ಸ್ವರೂಪಿ ರಾಜಗೋಪುರ ಪ್ರದಕ್ಷಿಣೆ ಮಾಡಲು ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಅವಕಾಶವಿದೆ.

ಏ.17ರ ರಾತ್ರಿ ರಾಮಾನುಜಾಚಾರ್ಯರಿಗೆ ನಡೆಯುತ್ತಿರುವ 1009ನೇ ತಿರುನಕ್ಷತ್ರ ಮಹೋತ್ಸವದ 5ನೇ ದಿನದ ನಿಮಿತ್ತ ರಾತ್ರಿ ಪುಪ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವ ನಡೆಯಲಿದೆ.