ಕುಮಟಾ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಉ.ಕ. ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಲ್ಲಿ ಕೈಗೊಂಡ ಕಾಮಗಾರಿಗಳನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿ, ಕಾಚಿಗುಡ ರೈಲು ವಿಸ್ತರಣೆಗೆ ಹಸಿರು ನಿಶಾನೆ ತೋರಿದರು.

ಕುಮಟಾ: ಕೊಂಕಣ ರೈಲ್ವೆ ಮಾರ್ಗದಲ್ಲಿ ₹೫೦೦೦ ಕೋಟಿಗಳಿಗೂ ಹೆಚ್ಚು ಮೊತ್ತದ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಮಂಜೂರಿ ಹಂತದಲ್ಲಿದ್ದು, ಮುಂದಿನ ೫ ವರ್ಷಗಳಲ್ಲಿ ಎಲ್ಲ ಯೋಜನೆಗಳು ಕಾರ್ಯಗತಗೊಳ್ಳುವ ವಿಶ್ವಾಸವಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇಲ್ಲಿನ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಉ.ಕ. ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಲ್ಲಿ ಕೈಗೊಂಡ ಕಾಮಗಾರಿಗಳನ್ನು ಉದ್ಘಾಟಿಸಿ ಕಾಚಿಗುಡ ರೈಲು ವಿಸ್ತರಣೆಗೆ ಹಸಿರು ನಿಶಾನೆ ತೋರಿ ಮಾತನಾಡಿದರು. ಜನರ ಬೇಡಿಕೆಯಂತೆ ಕಾಚಿಗುಡ ರೈಲನ್ನು ಕುಮಟಾ ನಿಲ್ದಾಣದ ವರೆಗೆ ವಿಸ್ತರಿಸಲಾಗಿದೆ. ಇದರಿಂದ ಕರಾವಳಿಯ ತಾಲೂಕುಗಳು ಮಾತ್ರವಲ್ಲದೇ ಶಿರಸಿ-ಸಿದ್ದಾಪುರ ತಾಲೂಕಿನ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ₹೨.೪ ಕೋಟಿ ವೆಚ್ಚದಲ್ಲಿ ಇಲ್ಲಿ ಎರಡನೇ ಪ್ಲಾಟ್‌ಫಾರ್ಮ್ ನಿರ್ಮಿಸಲಾಗಿದೆ. ಇದಕ್ಕೆ ಮುಂದಿನ ದಿನದಲ್ಲಿ ಶೆಲ್ಟರ್ ವ್ಯವಸ್ಥೆ ಮಾಡಲಾಗುವುದು. ₹೧.೧೮ ಕೋಟಿಗಳಲ್ಲಿ ಗೋಕರ್ಣ ನಿಲ್ದಾಣದಲ್ಲಿ ಫ್ಲಾಟ್ ಫಾರ್ಮ್ ಎತ್ತರಿಸಲಾಗಿದೆ. ಭಟ್ಕಳ ನಿಲ್ದಾಣದಲ್ಲಿ ₹೫೭.೩೩ ಲಕ್ಷಗಳಲ್ಲಿ ಮತ್ತು ಮುರ್ಡೇಶ್ವರ ನಿಲ್ದಾಣದಲ್ಲಿ ₹೧೦.೨೩ ಲಕ್ಷ ವೆಚ್ಚದಲ್ಲಿ ಶೌಚಗೃಹ ಮುಂತಾದವುಗಳನ್ನು ನಿರ್ಮಿಸಿ ಉದ್ಘಾಟಿಸಿದ್ದೇವೆ ಎಂದರು.

ಹಳಕಾರ ಕ್ರಾಸ್‌ನಲ್ಲಿ ಸಿಗ್ನಲ್ ಲೈಟ್ ಹಾಕಿದ್ದೇವೆ. ಇಲ್ಲಿನ ನಿಲ್ದಾಣದ ಹೊರಗೆ ರಿಕ್ಷಾ ನಿಲ್ದಾಣ ಕಟ್ಟಿಕೊಡಲಿದ್ದೇವೆ. ಹೆಗಡೆ ಕ್ರಾಸ್‌ನಲ್ಲಿ ಮೇಲ್ಸೇತುವೆ ಆಗಬೇಕಾಗಿದ್ದು, ಶೇ. ೫೦ ಅನುದಾನ ರಾಜ್ಯ ಸರ್ಕಾರ ನೀಡಿದರೆ ನಿಗಮದಿಂದ ಉಳಿದ ಹಣಕಾಸು ಒದಗಿಸಿ ಕಾಮಗಾರಿ ಕೂಡಲೇ ಮಾಡಬಹುದಾಗಿದೆ. ಆದರೆ ಕೊಂಕಣ ರೈಲ್ವೆಯ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ನಿಗಮದೊಂದಿಗೆ ಮಹಾರಾಷ್ಟ್ರ, ಗೋವಾ ರಾಜ್ಯಗಳು ನೂರಾರು ಕೋಟಿಯಷ್ಟು ಹಣಕಾಸು ಸಹಯೋಗ ನೀಡಿವೆ. ಆದರೆ ನಮ್ಮ ಕರ್ನಾಟಕದ ಸರ್ಕಾರದ ಕೊಡುಗೆ ಏನೇನೂ ಇಲ್ಲ ಎನ್ನುವಷ್ಟು ತೀರಾ ಕಡಿಮೆ. ಆದರೂ ಜಿಲ್ಲೆಯ ಶಾಸಕರೊಂದಿಗೆ ಸೇರಿ ರಾಜ್ಯ ಸರ್ಕಾರದಿಂದ ಹಣಕಾಸು ಒದಗಿಸುವ ಪ್ರಯತ್ನದೊಂದಿಗೆ ಕೊಂಕಣ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಮಾಡುತ್ತೇವೆ ಎಂದರು. ಕಳೆದ ೨ ವರ್ಷಗಳಿಂದ ಕೊಂಕಣ ರೈಲ್ವೆ ಚುಕ್ಕಾಣಿ ಹಿಡಿದಿರುವ ಸಂತೋಷಕುಮಾರ್ ಝಾ ಕೊಂಕಣ ರೈಲ್ವೆಯನ್ನು ಲಾಭದಾಯಕವಾಗಿಸಿದ್ದಾರೆ ಎಂದು ಪ್ರಶಂಸಿಸಿದರು.

ಕೊಂಕಣ ರೈಲ್ವೆಗಾಗಿ ಭೂಮಿ ಕಳೆದುಕೊಂಡವರ ೮೦೦ ಪ್ರಕರಣಗಳು ಇನ್ನೂ ಬಗೆಹರಿಯದೇ ಇತ್ತು. ಅವುಗಳಲ್ಲಿ ೭೦೦ಕ್ಕೂ ಹೆಚ್ಚು ಪ್ರಕರಣಗಳನ್ನು ಇಲ್ಲಿನ ಭೂಸ್ವಾಧೀನಾಧಿಕಾರಿ ಪಿ. ಶ್ರವಣಕುಮಾರ ಸಹಕಾರದೊಂದಿಗೆ ಬಗೆಹರಿಸಿದ್ದೇವೆ ಎಂದರು. ಹಾಗೆಯೇ ಅಂಕೋಲಾ-ಹುಬ್ಬಳ್ಳಿ ರೈಲುಮಾರ್ಗ ನಾವು ಮಾಡಿಯೇ ಮಾಡುತ್ತೇವೆ. ಏಕೆಂದರೆ ಮಾಜಿ ಪ್ರಧಾನಿ ವಾಜಪೇಯಿ ಅವರು ಅಡಿಗಲ್ಲನ್ನಿಟ್ಟ ಯೋಜನೆಯಾಗಿರುವುದರಿಂದ ಪ್ರಧಾನಿ ಮೋದಿ ಅವರಿಗೆ ಭಾವನಾತ್ಮಕ ಸಂಬಂಧವನ್ನೂ ಹೊಂದಿದೆ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇಲ್ಲಿಗೆ ರೈಲು ಸೇವೆಗಾಗಿ ನಾವೆಲ್ಲಾ ಹಲವಾರು ಹೋರಾಟ ಮಾಡಿದ್ದೇವೆ. ಬಳಿಕ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ, ಸಚಿವ ಜಾರ್ಜ ಫರ್ನಾಂಡಿಸ್ ಮುಂತಾದ ಕಾಲಘಟ್ಟದಲ್ಲಿ ನಮ್ಮ ಜಿಲ್ಲೆ ರೈಲ್ವೆ ಕಾಣುವಂತಾಯಿತು. ಕಾಚಿಗುಡ ರೈಲಿಗೆ ಹೊನ್ನಾವರ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು. ರೈಲುಗಳಲ್ಲಿ ನಿಲ್ದಾಣ ಮುನ್ಸೂಚನಾ ಪ್ರದರ್ಶನ ಹಾಗೂ ಶೌಚಗ್ರಹಗಳಿಗೆ ಸ್ಲೈಡಿಂಗ್‌ ಬಾಗಿಲು ಅಳವಡಿಸುವಂತೆ ವಿನಂತಿಸಿದರು.

ಕೊಂಕಣ ರೈಲ್ವೆಯ ಸಿಎಂಡಿ ಸಂತೋಷಕುಮಾರ್ ಝಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಐತಿಹಾಸಿಕ ದಿನವಾಗಿದ್ದು, ಭಾರತೀಯ ರೈಲ್ವೆಯಲ್ಲಿ ಕೊಂಕಣ ರೈಲ್ವೆ ಶೇ. ೧೫ ಶೇರ್ ಹೊಂದಿದೆ. ೨೬೩ ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಕರ್ನಾಟಕಕ್ಕೆ ಮಂಜೂರಿಯಾದ ₹೧೪ ಕೋಟಿಗಳಲ್ಲಿ ಸುಮಾರು ₹೧೦ ಕೋಟಿ ಕಾಮಗಾರಿ ಮುಕ್ತಾಯವಾಗಿದೆ. ಮುಂದಿನ ೩ ವರ್ಷದಲ್ಲಿ ₹೧೦೫ ಕೋಟಿ ಮಂಜೂರಾತಿಯ ಪೈಕಿ ಕರ್ನಾಟಕ ವ್ಯಾಪ್ತಿಯಲ್ಲಿ ₹೨೭ ಕೋಟಿ ವೆಚ್ಚದ ಕಾಮಗಾರಿ ನಡೆಸಲಾಗುವುದು. ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಟ್ರ್ಯಾಕ್‌ಗಳನ್ನು ಅಮೂಲಾಗ್ರವಾಗಿ ನವೀಕರಿಸಲಾಗುತ್ತಿದೆ. ೨೩೬ ಕಿಮೀ ಟ್ರ್ಯಾಕ್‌ ಡಬಲಿಂಗ್ ಕಾರ್ಯವೂ ಪ್ರಗತಿಯಲ್ಲಿದೆ. ₹೪೭೦೪ ಕೋಟಿ ಮೊತ್ತದ ಪ್ರಸ್ತಾವನೆಗೆ ೩ನೇ ಹಣಕಾಸು ಸಹಯೋಗದ ನಿರೀಕ್ಷೆ ಇದೆ ಎಂದರು.

ಸಮಾರಂಭದಲ್ಲಿ ಜಿಲ್ಲೆಯ ರೈಲ್ವೆ ಸೇವಾ ಸಮಿತಿ ಹಾಗೂ ರಾಜಸ್ಥಾನಿ ರೈಲ್ವೆ ಸೇವಾ ಸಮಿತಿಯಿಂದ ಸಂಸದ, ಶಾಸಕ ಹಾಗೂ ರೈಲ್ವೆ ಸಿಎಂಡಿ ಅವರನ್ನು ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ್, ಕೊಂಕಣ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಆಶಾ ಶೆಟ್ಟಿ ಇದ್ದರು. ಯೋಗೇಶ ಕೊಡ್ಕಣಿ ಕಾರ್ಯಕ್ರಮ ನಿರ್ವಹಿಸಿದರು.