ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ-1ರಲ್ಲಿ ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ 40 ಪ್ಲಸ್ ಕಾರ್ಯಕ್ರಮದಡಿ ವಿಶೇಷ ಒತ್ತು ನೀಡಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು

ಕೊಪ್ಪಳ: ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ-1ರ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳ ಸಮೀಪಕ್ಕೆ ಬಂದು ಅನುತ್ತೀರ್ಣರಾಗಿರುವ ಮಕ್ಕಳಿಗೆ ಮತ್ತಷ್ಟು ಕಾಳಜಿ ವಹಿಸಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗೆ ವಿಶೇಷ ಒತ್ತು ನೀಡಬೇಕು ಎಂದು ಜಿಪಂ ಸಿಇಓ ವರ್ಣಿತ್ ನೇಗಿ ಹೇಳಿದರು.

ಜಿಪಂ ಸಮಿತಿ ಕೊಠಡಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ-1ರ ಫಲಿತಾಂಶ ವಿಶ್ಲೇಷಣೆ ಕುರಿತು ದತ್ತು ಶಾಲಾ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ-1ರಲ್ಲಿ ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ 40 ಪ್ಲಸ್ ಕಾರ್ಯಕ್ರಮದಡಿ ವಿಶೇಷ ಒತ್ತು ನೀಡಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳಿಗೆ ಹೆಚ್ಚಾಗಿ ಭೇಟಿ ನೀಡಿ ಅನುತ್ತೀರ್ಣರಾದ ಮಕ್ಕಳ ಬಗ್ಗೆ ವಿಷಯವಾರು ಹೆಚ್ಚು ಕಾಳಜಿ ವಹಿಸಬೇಕಿದೆ. ಈ ಬಗ್ಗೆ ಶಾಲಾ ಮುಖ್ಯಗುರುಗಳು ಮತ್ತು ಆಯಾ ವಿಷಯ ಶಿಕ್ಷಕರಿಗೆ ಅಗತ್ಯ ಕ್ರಿಯಾ ಯೋಜನೆ ರೂಪಿಸಲು ಮಾರ್ಗದರ್ಶನ ಮಾಡಬೇಕು. ಜಿಲ್ಲೆಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಹೆಚ್ಚಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಎಲ್ಲ ದತ್ತು ಶಾಲಾ ನೋಡಲ್ ಅಧಿಕಾರಿಗಳು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜ.27 ರಿಂದ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ-2 ಆರಂಭಗೊಳ್ಳಲಿದ್ದು, ಶಿಕ್ಷಣ ಇಲಾಖೆ ನೀಡಿದ ಪರೀಕ್ಷಾ ಎಸ್ಒಪಿ ಪ್ರಕಾರ ಸಮಯ ಬದಲಾವಣೆ ಅನುಸರಿಸಿ ಪರೀಕ್ಷೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಕಡ್ಡಾಯವಾಗಿ ಪರೀಕ್ಷಾ ನಿಯಮ ಪಾಲಿಸಿ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಬೇಕು. ಯಾವುದೇ ಕಾರಣಕ್ಕೂ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ಮತ್ತು ಅವುಗಳ ಗೌಪ್ಯತೆ ಕಾಪಾಡಿಕೊಂಡು ಸುಗಮವಾಗಿ ಪರೀಕ್ಷೆಗಳನ್ನು ನಡೆಸುವಂತೆ ಆಯಾ ಶಾಲೆಗಳ ಮುಖ್ಯಗುರುಗಳು ಕ್ರಮ ಕೈಗೊಳ್ಳಬೇಕು ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 32 ಜನ ನೋಡಲ್ ಅಧಿಕಾರಿಗಳಿಗೆ ತಲಾ 10 ಶಾಲೆಗಳಂತೆ ದತ್ತು ನೀಡಲಾಗಿದ್ದು, ನೋಡಲ್ ಅಧಿಕಾರಿಗಳು ಆಯಾ ಶಾಲೆಗಳಿಗೆ ಭೇಟಿ ನೀಡಿ ತಮಗೆ ದತ್ತು ನೀಡಿದ ಶಾಲೆಗಳ ಫಲಿತಾಂಶ ಶೇ.95 ಕ್ಕಿಂತ ಹೆಚ್ಚು ಬರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಡಯಟ್ ಪ್ರಾಂಶುಪಾಲ ಅನಂತಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು, ವಿಷಯ ಪರಿವೀಕ್ಷಕರು, ಬಿ.ಆರ್.ಸಿ.ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.