ಸಾರಾಂಶ
ಹರಿದು ಬರುತ್ತಿರುವ ಭಕ್ತ ಸಾಗರ । ಮೆಟ್ಟಿಲುದ್ದಕ್ಕೂ ಜೈ ಶ್ರೀ ರಾಮ್, ಜೈ ಹನುಮಾನ್ ಘೋಷಣೆಕನ್ನಡಪ್ರಭ ವಾರ್ತೆ ಗಂಗಾವತಿ
ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ದೇಗುಲದಲ್ಲಿ ಡಿ.13 ರಂದು ಹನುಮದ್ ವ್ರತಾಚರಣೆ ನಡೆಯುತ್ತಿದ್ದು, ಆಂಜನೇಯ ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಭಕ್ತರ ಗಮನ ಸೆಳೆದಿದೆ.ಬೆಂಗಳೂರು, ಗದಗ ಮತ್ತು ಗಂಗಾವತಿ ನಗರದಿಂದ ಬಂದಿದ್ದ ವಿವಿಧ ಮಾದರಿಯ ಹೂಗಳಿಂದ ಅಲಂಕೃತಗೊಂಡಿದೆ. ಬೆಟ್ಟದ ಕೆಳಗೆ ಆಂಜನೇಯಸ್ವಾಮಿ ಪಾದುಕೆಗಳಿದ್ದು, ಇಲ್ಲಿರುವ ಮಂಟಪವನ್ನು ಹೂವುಗಳಿಂದ ಸಿಂಗರಿಸಲಾಗಿದೆ.
ದೇಗುಲದ ದ್ವಾರ ಬಾಗಿಲು ಮತ್ತು ಆವರಣ ಸುತ್ತಲು ಹೂಗಳ ಅಲಂಕಾರ ಜೊತೆಗೆ ಬಾಳೆ, ಕಂಬ ಮತ್ತು ಮಾವಿನ ತೋರಣಗಳಿಂದ ಸಿಂಗಾರಗೊಂಡಿದೆ. ಜತೆಗೆ ಭಗವಾಧ್ವಜ, ಬ್ಯಾನರ್ ರಾರಾಜಿಸುತ್ತವೆ.ಮೆಟ್ಟಿಲುದ್ದಕ್ಕೂ ಜೈ ಶ್ರೀ ರಾಮ್, ಜೈ ಹನುಮಾನ್ ಘೋಷಣೆ:
ಅಂಜನಾದ್ರಿ ಬೆಟ್ಟ ಹತ್ತುವ ಭಕ್ತರಿಂದ ಜೈ ಶ್ರೀ ರಾಮ್, ಜೈ ಹನುಮಾನ್ ಘೋಷಣೆ ಮೊಳಗಿವೆ. ಈಗಾಗಲೇ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಮಾಲಾಧಾರಿಗಳು ವಿವಿಧ ಸ್ಥಳಗಳಲ್ಲಿ ವಾಸ್ತ್ಯವ್ಯ ಮಾಡಿದ್ದು, ಬೆಳಗ್ಗೆ 4 ಗಂಟೆಯಿಂದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಮೆಟ್ಟಿಲು ಹತ್ತಿ ಮಾಲೆ ವಿಸರ್ಜನೆ ಮಾಡುತ್ತಾರೆ. ಕೆಲ ಭಕ್ತರು ಬೆಟ್ಟ ಏರಿ ಆಂಜನೇಯಸ್ವಾಮಿ ದರ್ಶನ ಪಡೆದು ಬರುತ್ತಿದ್ದಾರೆ. ಅಂಜನಾದ್ರಿಯಲ್ಲಿ ಹನುಮದ್ ವ್ರತಾಚರಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ವಿದ್ಯುತ್ ದೀಪಗಳು ಮತ್ತು ಹೂವಿನ ಅಲಂಕಾರದಿಂದ ಅಲಂಕೃತಗೊಂಡಿದೆ.ಅಂಜನಾದ್ರಿಯಲ್ಲಿ ಸಕಲ ಸಿದ್ಧತೆ: ಜನಾರ್ದನ ರೆಡ್ಡಿಅಂಜನಾದ್ರಿ ಆಂಜನೇಯಸ್ವಾಮಿ ದೇಗುಲದಲ್ಲಿ ಡಿ.13ರಂದು ಹನುಮಮಾಲೆ ವಿಸರ್ಜನೆಗೆ ಸಕಲ ಸಿದ್ದತೆ ಮಾಡಲಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ಅಂಜನಾದ್ರಿ ಬೆಟ್ಟದಲ್ಲಿ ಪಾಕಶಾಲೆ ವೀಕ್ಷಿಸಿ ಮಾತನಾಡಿದರು. ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ. ಭಕ್ತರಿಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲಾಗಿದೆ. ಸುಮಾರು 2 ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ. ಬರುವ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ಸುಗಮವಾಗಿ ಭಕ್ತರು ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದರು.ಈ ಸಂದರ್ಭ ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ, ತಹಸೀಲ್ದಾರ ವಿಶ್ವನಾಥ ಮುರುಡಿ, ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಇದ್ದರು.