ನಮ್ಮ ಜಮೀನನ್ನು ಈಗಾಗಲೇ ಗೃಹ ಮಂಡಳಿಯವರು ಕಿತ್ತುಕೊಂಡಿದ್ದಾರೆ. ನಮಗೆ ಉಳಿದಿರುವ ಜಮೀನು ಇಷ್ಟೆ. ಅದನ್ನೂ ಕಳೆದುಕೊಂಡು ಎಲ್ಲಿಗೆ ಹೋಗೋಣ. ನಮ್ಮ ಕುಟುಂಬಗಳ ಗತಿ ಏನು. ಆದ್ದರಿಂದ ತಾವು ದಯಮಾಡಿ ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಗಳು. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯನ್ನು ಮದ್ದೂರು ತಾಲೂಕಿನ ಕುದರಗುಂಡಿ ಕಾಲೋನಿ, ಮಂಡ್ಯ ತಾಲೂಕಿನ ನೊದೆಕೊಪ್ಪಲು ಹಾಗೂ ಎಲೆಚಾಕನಹಳ್ಳಿ ರೈತರು ಬಹಿಷ್ಕರಿಸಿ ಯಾವುದೇ ಕಾರಣಕ್ಕೂ ಕೈಗಾರಿಕೆಗೆ ನಮ್ಮ ಭೂಮಿಯನ್ನು ಕೊಡುವುದಿಲ್ಲ ಎಂದು ಘೋಷಿಸಿದರು.

ಜಿಲ್ಲಾ ಪಂಚಾಯ್ತಿ ಕಚೇರಿ ಮುಂದೆ ಸೇರಿದ ಗ್ರಾಮಸ್ಥರು ಮದ್ದೂರು ತಾಲೂಕಿನ ಕುದರಗುಂಡಿ ಸರ್ವೇ ನಂ. ೨೪೫ರಲ್ಲಿ ೧೦೯ ಎಕರೆ ತಾಲೂಕಿನ ನೊದೆಕೊಪ್ಪಲು ಗ್ರಾಮದ ಸರ್ವೇ ನಂ. ೨೮೪ರಲ್ಲಿ ೨೫೦ ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿಗೆ ಸ್ವಾಧೀನ ಮಾಡುವ ವಿಚಾರ ಈ ಹಿಂದೆಯೂ ೨-೩ ಸಲ ಚರ್ಚೆಯಾಗಿತ್ತು. ನೂರಕ್ಕೆ ಶೇ.೯೯ರಷ್ಟು ರೈತರು ಕೊಡುವುದಿಲ್ಲವೆಂದು ಮೈಸೂರು ಕೆಐಎಡಿಬಿ ಭೂ ಸ್ವಾಧೀನಾಧಿಕಾರಿಗಳ ಮುಂದೆ ಬರವಣಿಗೆ ಮೂಲಕ ನೀಡಿದ್ದೆವು.

ಈ ಭಾಗದ ರೈತರಿಗೆ ಏತ ನೀರಾವರಿ ಸೌಲಭ್ಯವಿರುವುದರಿಂದ ಈ ಸರ್ವೇ ನಂಬರ್‌ಗಳಲ್ಲಿ ತೆಂಗು, ಮಾವು, ಸೀಬೆ, ತರಕಾರಿ ಬೆಳೆಗಳು ಭತ್ತ, ರಾಗಿ, ಕಬ್ಬು, ಹೈನುಗಾರಿಕೆ, ರೇಷ್ಮೆ ಬೆಳೆ ಬೆಳೆದುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈಗ ಮತ್ತೆ ತಾವುಗಳು ಸಭೆ ಕರೆದು ಚರ್ಚೆಗೆ ಕರೆದಿರುವುದು ನಮಗೆ ನೋವುಂಟುಮಾಡಿದೆ. ಯಾವುದೇ ಕಾರಣಕ್ಕೂ ನಮ್ಮ ರಕ್ತ ಕೊಟ್ಟರೂ ಜಮೀನನ್ನು ಕೊಡುವುದಿಲ್ಲ. ನಮ್ಮ ಜಮೀನನ್ನು ಈಗಾಗಲೇ ಗೃಹ ಮಂಡಳಿಯವರು ಕಿತ್ತುಕೊಂಡಿದ್ದಾರೆ. ನಮಗೆ ಉಳಿದಿರುವ ಜಮೀನು ಇಷ್ಟೆ. ಅದನ್ನೂ ಕಳೆದುಕೊಂಡು ಎಲ್ಲಿಗೆ ಹೋಗೋಣ. ನಮ್ಮ ಕುಟುಂಬಗಳ ಗತಿ ಏನು. ಆದ್ದರಿಂದ ತಾವು ದಯಮಾಡಿ ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಿಸುವಂತೆ ತೂಬಿನಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್‌ಗೌಡ ಪಟೇಲ್, ರೆಡ್ಡಿ ಗೋಪಾಲ್, ಸತೀಶ್, ದಿನೇಶ್, ಸಂತೋಷ್, ರವಿ, ಪಾಪ, ಶ್ರೀನಿವಾಸ್, ಲಿಖಿತ್‌ಗೌಡ ಮತ್ತಿತರರಿದ್ದರು.

ನಾವು ಕೈಗಾರಿಕೆ ವಿರೋಧಿಗಳಲ್ಲ. ಆದರೆ, ಕೈಗಾರಿಕೆಗಾಗಿ ಫಲವತ್ತಾದ ಭೂಮಿಯನ್ನು ಕೇಳಿದರೆ ಕೊಡೋಲ್ಲ. ನೊದೆಕೊಪ್ಪಲು ಸರ್ವೇ ನಂಬರ್‌ನಲ್ಲೇ ೧೪೦ ಎಕರೆ, ಎಲೆಚಾಕನಹಳ್ಳಿ ಸರ್ವೇ ನಂ.ನಲ್ಲಿ ೮೦ ಎಕರೆ ಪಾಳು ಭೂಮಿ ಇದೆ. ಅದರ ಬಗ್ಗೆ ಬೇಕಿದ್ದರೆ ರೈತರೊಂದಿಗೆ ಚರ್ಚಿಸಿ ಭೂಮಿಯನ್ನು ಪಡೆಯಲಿ. ರಸ್ತೆ ಸಂಪರ್ಕಕ್ಕಾಗಿ ಒಂದಷ್ಟು ಭೂಮಿಯನ್ನು ಬಿಟ್ಟುಕೊಡುವುದಕ್ಕೆ ಸಿದ್ದರಿದ್ದೇವೆ.

-ಅಶೋಕ್ ಪಟೇಲ್, ಗ್ರಾಮಸ್ಥರು, ಎಲೆಚಾಕನಹಳ್ಳಿ