ಧಾರವಾಡ:
ರೈತರ ತೀವ್ರ ಹೋರಾಟಕ್ಕೆ ಮಣಿದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಸ್ಥಳಾಂತರ ನಿರ್ಧಾರವನ್ನು ಸರ್ಕಾರ ಕೈ ಬಿಟ್ಟಿದೆ.ಇಲ್ಲಿಯ ಹುಬ್ಬಳ್ಳಿ ರಸ್ತೆಯಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರ ಸರ್ಕಾರ ಆದೇಶ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಕಳೆದ ನಾಲ್ಕೈದು ದಿನಗಳಿಂದ ರೈತರು ಕಚೇರಿ ಎದುರು ಅಹೋರಾತ್ರಿ ಹೋರಾಟ ಮಾಡಿದ್ದರು. ಈ ಭಾಗದ ರೈತರಿಗೆ ಈ ಕಚೇರಿ ಅನುಕೂಲವಾಗಿದ್ದು, ಸ್ಥಳಾಂತರ ಬೇಡವೆಂದು ಸರ್ಕಾರಕ್ಕೆ ಮನವಿ ಸಹ ಸಲ್ಲಿಸಲಾಗಿತ್ತು. ಈ ಮಧ್ಯೆ ರಜೆ ದಿನ ಭಾನುವಾರ ಕಚೇರಿ ಸ್ಥಳಾಂತರಕ್ಕೆ ಅಧಿಕಾರಿಗಳು ತಯಾರಿ ನಡೆಸಿದ್ದರಿಂದ ಆಕ್ರೋಶರಾದ ರೈತರು ಪ್ರತಿಭಟನೆ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಎರಡು ದಿನ ತಾತ್ಕಾಲಿಕವಾಗಿ ಸ್ಥಳಾಂತರ ಪ್ರಕ್ರಿಯೆ ನಿಲ್ಲಿಸಿದ್ದರು.
ಇದೀಗ ರೈತರ ಹೋರಾಟಕ್ಕೆ ಮಣಿದು ಕಚೇರಿಯನ್ನು ಧಾರವಾಡಲ್ಲಿಯೇ ಉಳಿಸಿಕೊಳ್ಳುವುದಾಗಿ ಕರ್ನಾಟಕ ಕೈಗಾರಿಕಾ ಪ್ರೇದಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಆದೇಶದಿಂದಾಗಿ ರೈತ ಮುಖಂಡರಾದ ಶ್ರೀಶೈಲ ಕಮತರ, ವೀರಯ್ಯ ಚಿಕ್ಕಮಠ ಹಾಗೂ ಇತರೆ ಹೋರಾಟಗಾರರು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಸಚಿವ ಪಾಟೀಲಗೆ ಜೋಶಿ ಧನ್ಯವಾದಧಾರವಾಡದ ಕೆಐಎಡಿಬಿ ವಲಯ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಉದ್ದೇಶಸಿದ್ದ ನಿರ್ಧಾರವನ್ನು ಹಿಂಪಡೆಯುವಂತೆ ಕೋರಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದರು. ಅದಕ್ಕೆ ಸ್ಪಂದಿಸಿರುವ ಸಚಿವರು, ರಾಜ್ಯ ಸರ್ಕಾರದ ನಿರ್ಧಾರ ಹಿಂಪಡೆದು ಧಾರವಾಡದಲ್ಲೇ ಕಚೇರಿ ಉಳಿಯುವಂತೆ ಮಾಡಿದ್ದಾರೆ. ಇದಕ್ಕಾಗಿ ಜೋಶಿ ಅವರು ಪಾಟೀಲರಿಗೆ ಧನ್ಯವಾದ ತಿಳಿಸಿದ್ದಾರೆ. ಬೆಂಗಳೂರು ಬಿಟ್ಟರೆ ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಹುಬ್ಬಳ್ಳಿಯೇ ಸೂಕ್ತವೆಂದು ಮನವರಿಕೆ ಮಾಡಿ, ಕೆಐಎಡಿಬಿ ಕಚೇರಿಯನ್ನು ಇಲ್ಲಿಯೇ ಮುಂದುವರಿಸುವಂತೆ ಪತ್ರ ಬರೆದು ಹಾಗೂ ಫೋನ್ ಮೂಲಕ ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿ ಧಾರವಾಡದಲ್ಲೇ ಕಚೇರಿ ಮುಂದುವರಿಸಿ ಆದೇಶ ಹೊರಡಿಸಿರುವುದು ಸಂತಸಕರ. ಉತ್ತರ ಕರ್ನಾಟಕದಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸದೇ ಅವಶ್ಯಕತೆ ಇದ್ದಲ್ಲಿ ಹೊಸ ಕಚೇರಿ ಪ್ರಾರಂಭಿಸಬೇಕೆಂದು ಜೋಶಿ ಕೋರಿದ್ದಾರೆ.