ಸಾರಾಂಶ
ಕಾಂಗ್ರೆಸ್ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳಲ್ಲಿ ಅಗ್ರ ಪಾಲನ್ನು ಮಹಿಳಾ ಸಮುದಾಯಕ್ಕೆ ನೀಡಿದ್ದು
ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳೆಯರನ್ನು ಪಕ್ಷ ಸಂಘಟನೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಮುಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶೈಲಾ ನೀತಾ ಡಿಸೋಜಾ ತಿಳಿಸಿದರು.ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಬೂತ್ ಅಭಿಯಾನ, ಹೊಸ ಸದಸ್ಯತ್ವ ಅಭಿಯಾನ, ಮಹಿಳಾ ಗ್ಯಾರಂಟಿ ಅಭಿಯಾನ, ಹೊಸ ಪದಾಧಿಕಾರಿಗಳಿಗೆ ಅವಕಾಶ, ಸಕ್ರಿಯವಲ್ಲದ ಪದಾಧಿಕಾರಿಗಳಿಗೆ ಬದಲಿ ವ್ಯವಸ್ಥೆ ಹೀಗೆ ಇನ್ನಷ್ಟು ಹೊಸ ಆಲೋಚನೆಗಳ ಮೂಲಕ ಜಿಲ್ಲೆಯಲ್ಲಿ ಮಹಿಳಾ ಕಾಂಗ್ರೆಸ್ ಅನ್ನು ಇನ್ನಷ್ಟು ಸನ್ನದ್ಧಗೊಳಿಸಬೇಕು ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳಲ್ಲಿ ಅಗ್ರ ಪಾಲನ್ನು ಮಹಿಳಾ ಸಮುದಾಯಕ್ಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಮಹಿಳಾ ಮೀಸಲಾತಿಯನ್ನು ಶೇ.50 ಹೆಚ್ಚಿಸುವ ಹೊಣೆಗಾರಿಕೆ ನಮ್ಮ ಪಕ್ಷದ ಮೇಲಿದೆ ಎಂದು ಹೇಳಿದರು.ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಹುಪಾಲು ಮಹಿಳೆಯರ ಪಾತ್ರವೇ ಹೆಚ್ಚಿದ್ದು, ಕಾಂಗ್ರೆಸ್ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಪಕ್ಷದ ಒಳಗಿದ್ದುಕೊಂಡು ಪಕ್ಷದ್ರೋಹಿ ಚಟುವಟಿಕೆಗಳನ್ನು ನಾವು ಎಂದೂ ಸಹಿಸುವುದಿಲ್ಲ ಹಾಗೂ ಅಂತವರ ವಿರುದ್ಧ ಶಿಸ್ತು ಕ್ರಮಕ್ಕೆ ಹಿಂಜರಿಯುವುದಿಲ್ಲ ಎಂದು ಅವರು ಎಚ್ಚರಿಸಿದರು.ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಲತಾ ಸಿದ್ದಶೆಟ್ಟಿ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಮಹಿಳಾ ಕಾಂಗ್ರೆಸ್ ಸಂಘಟನೆಗೆ ಹೆಚ್ಚಿನ ಒತ್ತು ಕೊಟ್ಟಿದ್ದು, ಅತಿ ಹೆಚ್ಚಿನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮುಂದೆ ಕೂಡ ಪ್ರಾಮಾಣಿಕವಾಗಿ ಪಕ್ಷದ ಸಂಘಟನೆನ ಮುಂದುವರಿಸಲು ಎಲ್ಲಾ ಮಹಿಳಾ ಪದಾಧಿಕಾರಿಗಳ ಸಹಕಾರ ಬಯಸುತ್ತೇನೆ ಎಂದರು.ಮಹಿಳಾ ಪದಾಧಿಕಾರಿಗಳಾದ ಸುಧಾ ಮಹದೇವಯ್ಯ, ಶೋಭಾ, ಸುಶೀಲಾ ನಂಜಪ್ಪ, ಪುಷ್ಪಾ, ವಿಜಯಲಕ್ಷ್ಮಿ, ಮನೋನ್ಮಣಿ, ತನುಜಾ ಮಹೇಶ್ , ಕೋಮಲಾ, ಮಂಜುಳಾ, ಜಯಲಕ್ಷ್ಮಿ, ಮಹಾದೇವಮ್ಮ, ಮಾಯಮ್ಮ, ಅಂಜು ಫಾತಿಮಾ ಮೊದಲಾದವರು ಇದ್ದರು.