ನಗರಸಭೆ ವಿಶೇಷ ಸಭೆ: ಪ್ರತಿಪಕ್ಷದಿಂದ ಬಹಿಷ್ಕಾರ

| Published : Dec 05 2024, 12:33 AM IST

ಸಾರಾಂಶ

ಚಿಕ್ಕಮಗಳೂರು, ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕರೆಯಲಾಗಿದ್ದ ನಗರಸಭೆ ವಿಶೇಷ ಸಾಮಾನ್ಯ ಸಭೆಯನ್ನು ವಿರೋಧ ಪಕ್ಷದ ಸದಸ್ಯರು ಬಹಿಷ್ಕರಿಸಿ ಹೊರ ನಡೆದರು.

- ಕಾಂಗ್ರೆಸ್‌ ಸದಸ್ಯರಿಂದ ಲೂಟಿ ಲೂಟಿ ಘೋಷಣೆ । ಆಡಳಿತ-ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕರೆಯಲಾಗಿದ್ದ ನಗರಸಭೆ ವಿಶೇಷ ಸಾಮಾನ್ಯ ಸಭೆಯನ್ನು ವಿರೋಧ ಪಕ್ಷದ ಸದಸ್ಯರು ಬಹಿಷ್ಕರಿಸಿ ಹೊರ ನಡೆದರು.

ಕಾಮಗಾರಿಗೆ ಸಂಬಂಧಿಸಿದಂತೆ ನಗರಸಭೆ ಅಧ್ಯಕ್ಷರು ಸಮರ್ಪಕ ಉತ್ತರ ನೀಡಲು ಮುಂದಾಗುತ್ತಿಲ್ಲವೆಂದು ಆರೋಪಿಸಿ, ಲೂಟಿ, ಲೂಟಿ ನಗರಸಭೆಯಲ್ಲಿ ಲೂಟಿ, ಸಾರ್ವಜನಿಕರ ಹಣ ಲೂಟಿ, ಕಳಪೆ ಕಾಮಗಾರಿ ನಡೆಸುತ್ತಿರುವ ನಗರಸಭೆ ಅಧ್ಯಕ್ಷರಿಗೆ ಧಿಕ್ಕಾರ, ಲೂಟಿ ಅಧ್ಯಕ್ಷರಿಗೆ ಧಿಕ್ಕಾರ, ಅಭಿವೃದ್ಧಿಗೆ ಹಣ ನೀಡುವಲ್ಲಿ ಪಕ್ಷಪಾತ ಮಾಡುತ್ತಿರುವ ಅಧ್ಯಕ್ಷರಿಗೆ ಧಿಕ್ಕಾರ ಎಂದು ಘೋಷಣೆ ಹಾಕುತ್ತಾ ಸಭಾಂಗಣದಿಂದ ಹೊರ ನಡೆದರು.

ಸಭೆ ಆರಂಭವಾಗುತ್ತಿದ್ದಂತೆ ವಿಶೇಷ ಸಭೆ ಕರೆದ ಕಾರಣ ತಿಳಿಸಲು ಮುನೀರ್‌ ಅಹ್ಮದ್ ಅಧ್ಯಕ್ಷರನ್ನು ಪ್ರಶ್ನಿಸಿದರು. ಕೆಲವು ಕಾಮಗಾರಿಗಳಿಗೆ ಒಪ್ಪಿಗೆ ಪಡೆಯಲು ಸಭೆ ಕರೆದಿರುವುದಾಗಿ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಸಮಜಾಯಿಸಿ ನೀಡಿದರು. ಸಾಮಾನ್ಯ / ಸದಸ್ಯರ ಸಭೆಯಲ್ಲಿ ಒಪ್ಪಿಗೆ ಪಡೆಯಬಹುದಾಗಿತ್ತು. ವಿಶೇಷ ಸಭೆ ಕರೆಯುವ ಅಗತ್ಯವಿರ ಲಿಲ್ಲವೆಂದು ಹೇಳಿದ ಮುನೀರ್, ಹಣ ಮಾಡುವ ಉದ್ದೇಶವಿದ್ದಂತೆ ಕಾಣುತ್ತಿದೆ ಎಂದು ಟೀಕಿಸಿದರು.ನಗರದ ವಿವಿಧ ವಾರ್ಡ್‌ಗಳಿಗೆ ಪೈಪ್ ಅಳವಡಿಸಲು ಸಾಧ್ಯವಾಗಿಲ್ಲವೆಂದು ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೇಳಿದರು. ನಗರಸಭೆ ಅಧ್ಯಕ್ಷರು ಎಲ್ಲಾ ವಾರ್ಡ್‌ಗಳಿಗೆ ಅನುದಾನ ನೀಡುವಲ್ಲಿ ವಿಫಲವಾಗಿದ್ದಾರೆ. ವಿರೋಧ ಪಕ್ಷದವರ ವಾರ್ಡ್‌ ಕಡೆಗಣಿಸಿ, ಆಡಳಿತ ಪಕ್ಷದ ಸದಸ್ಯರ ವಾರ್ಡಿಗೆ ಅನುದಾನ ನೀಡಲಾಗಿದೆ ಎಂದು ಶದಾಬ್‌ ಆಲಂ ಖಾನ್ ಹೇಳಿದರು.ಕಾಮಗಾರಿ ಕುರಿತು ಮಾಹಿತಿ ನೀಡಲು ಅಧಿಕಾರಿ ಮುಂದಾಗುತ್ತಿದ್ದಂತೆ ಒಂದು ಪಕ್ಷದ ಪರವಾಗಿಯಲ್ಲ, ಅಧಿಕಾರಿಯಾಗಿ ಮಾತನಾಡಿ ಎಂದು ಮುನೀರ್ ಅಹ್ಮದ್ ಒತ್ತಾಯಿಸಿದರು. ಮಧ್ಯೆ ಪ್ರವೇಶಿಸಿದ ಲಕ್ಷ್ಮಣ್ , ಆಗಿರುವ ಕೆಲಸಕ್ಕೆ ಡಾಂಬರ್ ಎಳೆದು ದುಡ್ಡು ಹೊಡೆಯುವ ಹುನ್ನಾರ ನಡೆದಿದೆ ಎಂದು ದೂರಿದರು.ಹಿರೇಮಗಳೂರಿನ ಉತ್ತಮ ರಸ್ತೆಗೆ ಒಂದು ಲೇಯರ್ ಡಾಂಬರ್‌ ಎಳೆದು ಬಿಲ್‌ ಮಾಡಲಾಗುತ್ತಿದೆ. ಸಂಬಂಧಿಸಿದ ಗುತ್ತಿಗೆ ದಾರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನಾಮ ನಿರ್ದೇಶನ ಸದಸ್ಯಎಚ್.ಎನ್.ಸುರೇಶ್ ಒತ್ತಾಯಿಸಿದರೆ, 19 ವರ್ಷದಲ್ಲಿ ನೀವು ಏನು ಕೆಲಸ ಮಾಡಿದ್ದೀರಿ ಎನ್ನುವುದು ನಗರದ ಜನತೆಗೆ ತಿಳಿದಿದೆ. ದಂಟರಮಕ್ಕಿ ಕೆರೆ ಏನಾಯಿತು. ಸ್ವಾಮಿ ವಿವೇಕಾ ನಂದರ ಮೂರ್ತಿ ಎಲ್ಲಿ ಹೋಯಿತು ಎನ್ನುವುದೆಲ್ಲ ತಿಳಿದಿದೆ. ಸುಮ್ಮನೆ ಕುಳಿತುಕೊಳ್ಳಿ ಎಂದು ಮಧು ಕುಮಾರ್‌ರಾಜ್ ಅರಸ್ ಅವರನ್ನು ಸದಸ್ಯ ಪರಮೇಶ್‌ ರಾಜ್ ಅರಸ್ ಛೇಡಿಸಿದರು.ರಸ್ತೆ ಗುಂಡಿ ಮುಚ್ಚಿ, ಪ್ಯಾಚ್‌ ವರ್ಕ್ ಕೆಲಸಕ್ಕೆ ₹25 ಲಕ್ಷ ಹಣ ನೀಡಿದ್ದು, ನಗರದಲ್ಲಿ ಸುರಿದ ಸಣ್ಣ ಮಳೆಗೆ ಕೊಚ್ಚಿ ಹೋಗಿದೆ ಎಂದು ಲಕ್ಷ್ಮಣ್ ಸಭೆ ಗಮನ ಸೆಳೆದರು. ಅಧ್ಯಕ್ಷರು ಬಿಜೆಪಿ ಸದಸ್ಯರ ವಾರ್ಡಿಗೆ ಅನುದಾನ ನೀಡುವು ದಾದರೆ ವಿರೋಧ ಪಕ್ಷದ ಸದಸ್ಯರ ವಾರ್ಡಿನ ಜನರು ತೆರಿಗೆ ಹಣ ಕೊಡುವುದಿಲ್ಲವೇ ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.ಕಳೆದ ನಗರಸಭೆ ಅವಧಿಯಲ್ಲಿ ಅಧ್ಯಕ್ಷರಾಗಿದ್ದವರನ್ನು ನೀವು ಬೆಂಬಲಿಸಿದ್ದೀರಿ ನಮ್ಮ ವಾರ್ಡಿಗೆ ಹಣ ನೀಡಲಿಲ್ಲವೆಂದು ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದಾಗ, ವೇಣುಗೋಪಾಲ್ ರನ್ನು ಅಧ್ಯಕ್ಷರನ್ನಾಗಿಸಿದ್ದು ಬಿಜೆಪಿ ನಾವಲ್ಲ ವೆಂದು ಮುನೀರ್ ತಿರುಗೇಟು ನೀಡಿದರು. 35 ವಾರ್ಡಿಗೂ ಗುಂಡಿ ಮುಚ್ಚಲು ₹4.50 ಕೋಟಿ ಅನುದಾನ ಬೇಕಾಗುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕೆಲಸ ನಗರಸಭೆಯಿಂದ ನಡೆದಿದೆ ಇದು ಸರಿಯೇ ಎಂದು ಮುನೀರ್ ಆಯುಕ್ತ ಬಿ.ಸಿ.ಬಸವರಾಜ್ ರನ್ನು ಕೇಳಿದರು. ಈ ರಸ್ತೆ ಮುಖ್ಯ ರಸ್ತೆ ಯಾಗಿದ್ದು, ಪ್ರವಾಸಿ ಗರು ಪ್ರತಿನಿತ್ಯ ಓಡಾಡುವುದರಿಂದ ಗುಂಡಿ ಮುಚ್ಚುವ ಕೆಲಸಕ್ಕೆ ನಾನೇ ಸೂಚಿಸಿದ್ದೆ ಎಂದು ಅಧ್ಯಕ್ಷರು ಸಮಜಾಯಿಸಿ ನೀಡಿದರು.ನಗರೋತ್ಥಾನ 3-4 ನೇ ಹಂತದ ಕಾಮಗಾರಿ ಕಳಪೆಯಿಂದ ಕೂಡಿದೆ. ಬಿಲ್‌ ಮಾಡಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ದ್ದಾಗ ಕಾಮಗಾರಿ ಪರಿಶೀಲನೆ ನಡೆಸಿದಾಗ ಕೆಲಸಗಳು ಸಂಪೂರ್ಣ ಕಳಪೆ ಕಂಡು ಬಂದಿದೆ ಎಂದು ಮುನೀರ್ ತಿಳಿಸಿದರು. ಮಧ್ಯೆ ಪ್ರವೇಶಿಸಿದ ಮಧುಕುಮಾರ್‌ರಾಜ್ ಅರಸ್ ಅಜೆಂಡದಲ್ಲಿ ಇಲ್ಲದ ವಿಷಯ ಚರ್ಚಿಸಿ ಸಮಯ ಹಾಳು ಮಾಡದೆ ಅಧ್ಯಕ್ಷರು ಸಭೆ ಮುಂದುವರೆಸುವಂತೆ ತಿಳಿಸಿದರು.ಕಳೆದ 19 ವರ್ಷದಲ್ಲಿ ಯಾರು ಎಷ್ಟು ತಿಂದಿದ್ದಾರೆಂದು ಜನ ಹೇಳುತ್ತಾರೆ. ಯಾರು ಎಲ್ಲಲ್ಲಿ ಲೂಟಿ ಮಾಡಿದ್ದಾರೆಂಬುದು ಗೊತ್ತು ಕುಳಿತುಕೊಳ್ಳಿ ಎಂದು ಆಡಳಿತ ಪಕ್ಷ ಬಿಜೆಪಿ ಸದಸ್ಯರಿಗೆ ವಿರೋಧಪಕ್ಷದ ಸದಸ್ಯ ಪರಮೇಶ್‌ ರಾಜ್ ಅರಸ್ ಕುಟುಕಿದರು. ಕಳಪೆ ಕಾಮಗಾರಿ ಎಂದು ನಿರ್ಧರಿಸುವವರು ಯಾರು ಎಂದು ವಿಫುಲ್‌ಕುಮಾರ್ ಜೈನ್ ಕೇಳಿದರು. ಕಳಪೆಯಾಗಿದ್ದರೆ ತನಿಖೆಗೆ ಒಳಪಡಿಸುತ್ತೇವೆ, ಸಮಧಾನದಿಂದ ಕುಳಿತರೆ ಉತ್ತರ ಕೊಡುತ್ತೇವೆಂದು ವಿರೋಧ ಪಕ್ಷದ ಸದಸ್ಯರಿಗೆ ಅಧ್ಯಕ್ಷರು ಹೇಳಿದರು.ನಗರೋತ್ಥಾನ ಕೆಲಸ ಕಳಪೆ, ಸಾರ್ವಜನಿಕರ ಹಣ ಲೂಟಿ, ಕಾಮಗಾರಿಗಳ ಬಗ್ಗೆ ಸರಿಯಾದ ಉತ್ತರ ನೀಡಲು ಅಧ್ಯಕ್ಷರು ಮುಂದಾಗುತ್ತಿಲ್ಲ ಹಾಗಾಗಿ ವಿಶೇಷ ಸಭೆ ಬಹಿಷ್ಕರಿಸುವುದಾಗಿ ಮುನೀರ್ ತಿಳಿಸಿ ಹೊರಡಲು ಅಣಿಯಾಗುತ್ತಿದ್ದಂತೆ ವಿಶೇಷ ಸಭೆ ಮುಗಿಸುತ್ತಿರುವುದಾಗಿ ಅಧ್ಯಕ್ಷರು ಹೇಳಿದರು. ಉಪಾಧ್ಯಕ್ಷೆ ಅನುಮಧುಕರ್ ಇದ್ದರು.

4 ಕೆಸಿಕೆಎಂ 2ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಬುಧವಾರ ವಿಶೇಷ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಅನು ಮಧುಕರ್‌, ಪೌರಾಯುಕ್ತ ಬಸವರಾಜ್‌ ಇದ್ದರು.

-- 4 ಕೆಸಿಕೆಎಂ 3ಚಿಕ್ಕಮಗಳೂರು ನಗರಸಭೆಯಲ್ಲಿ ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು.