ಸಾರಾಂಶ
ಕನ್ನಡಪ್ರಭ ವಾರ್ತೆ ಮಲ್ಪೆ
ವಿಶೇಷಚೇತನರ ಬಗ್ಗೆ ಅನುಕಂಪದ ಬದಲು ಅವರನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶ ನೀಡಿದರೆ ಅವರೂ ಸಹ ವಿಶೇಷ ಸಾಧನೆ ತೋರಲು ಸಾಧ್ಯವಿದೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ಡೆನಿಸ್ ಡೆಸಾ ಹೇಳಿದರು.ಅವರು ಚರ್ಚಿನಲ್ಲಿ ಆಯೋಜಿಸಿದ್ದ ವಿಶೇಷ ಚೇತನ ವ್ಯಕ್ತಿಗಳ ಜುಬಿಲಿ ಮಹೋತ್ಸವದಲ್ಲಿ ಚರ್ಚ್ ವ್ಯಾಪ್ತಿಯ ವಿಶೇಷ ಚೇತನ ವ್ಯಕ್ತಿಗಳನ್ನು ಸನ್ಮಾನಿಸಿ ಮಾತನಾಡಿದರು.ಪ್ರಸ್ತುತ ವರ್ಷದ ಕ್ರೈಸ್ತ ಧರ್ಮಸಭೆ ವಿಶೇಷ ಜುಬಿಲಿ ವರ್ಷವಾಗಿ ಆಚರಿಸುತ್ತಿದ್ದು, ಈ ನಿಟ್ಟಿನಲ್ಲಿ ವಿವಿಧ ವ್ಯಕ್ತಿಗಳ ದಿನಗಳನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಸಮಾಜದಲ್ಲಿ ಹೆಚ್ಚಾಗಿ ವಿಶೇಷ ಚೇತನ ವ್ಯಕ್ತಿಗಳನ್ನು ಗುರುತಿಸುವುದು ಕಡಿಮೆ. ಈ ನಿಟ್ಟಿನಲ್ಲಿ ಉಡುಪಿ ಧರ್ಮಪ್ರಾಂತ್ಯದ ಪ್ರತಿ ಚರ್ಚಿನಲ್ಲಿ ಅಂತಹ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿ ಅವರೊಂದಿಗೆ ನಾವು ಇದ್ದೇವೆ ಎಂಬ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಶೇಷ ಚೇತನರ ಜುಬಿಲಿಯನ್ನು ಆಚರಿಸಲಾಗುತ್ತದೆ ಎಂದರು.ವಿಶೇಷ ಚೇತನ ವ್ಯಕ್ತಿಗಳಲ್ಲಿ ಸಾಮಾನ್ಯರಿಗಿಂತ ಹೆಚ್ಚು ಪ್ರತಿಭೆ, ಆತ್ಮಸ್ಥೈರ್ಯ, ಸಂಕಲ್ಪ ಇದೆ. ಸಮಾಜ ಅವರಿಗೆ ಶಕ್ತಿ, ಆತ್ಮಸ್ಥೈರ್ಯ ನೀಡಿದರೆ ಉತ್ತಮ ಜೀವನ ರೂಪಿಸಿಕೊಳ್ಳುತ್ತಾರೆ. ಅವರೊಂದಿಗೆ ನಾವಿದ್ದೇವೆ ಎಂಬ ಭಾವನೆ ಮೂಡಿದಾಗ ಅವರೂ ಸಹ ನಮ್ಮಂತೆಯೇ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫರ್ನಾಂಡಿಸ್, ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ, ಆರೋಗ್ಯ ಆಯೋಗದ ಮುಖ್ಯಸ್ಥ ರೊನಾಲ್ಡ್ ಹಾಗೂ ಇತರರು ಉಪಸ್ಥಿತರಿದ್ದರು.