ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಆರೋಗ್ಯ ಸುಧಾರಣೆಗೆ ವಿಶೇಷ ಪೂಜೆ

| Published : Oct 22 2024, 12:19 AM IST

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಆರೋಗ್ಯ ಸುಧಾರಣೆಗೆ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಎಂ.ಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ವೈದ್ಯಕೀಯ ತಪಾಸಣೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ ಕೃಷ್ಣ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿ ವಿಶ್ರಾಂತಿ ಪಡೆಯಲಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿ ಹುಟ್ಟೂರು ಸೋಮನಹಳ್ಳಿಯಲ್ಲಿ ಪುತ್ರಿ ಶಾಂಭವಿ ಶ್ರೀಆಂಜನೇಯ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.

ತಾಲೂಕಿನ ಸೋಮನಹಳ್ಳಿಗೆ ಬೆಳಗ್ಗೆ ಆಗಮಿಸಿದ ಎಸ್.ಎಂ.ಕೃಷ್ಣರ ಎರಡನೇ ಪುತ್ರಿ ಶಾಂಭವಿ ಮತ್ತು ಕುಟುಂಬದವರು ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪನೆಯಾದ ಶ್ರೀಆಂಜನೇಯ, ಶ್ರೀಬೋರೇದೇವರು, ಶ್ರೀಮಾರಮ್ಮ, ನಾಗರಕಲ್ಲು ದೇವಾಲಯಗಳ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

ನಂತರ ತಮ್ಮ ತಂದೆ ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ತಂದೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿ ಎಂದು ಪ್ರಾರ್ಥನೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಂಭವಿ, ತಂದೆ ಎಸ್.ಎಂ.ಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ವೈದ್ಯಕೀಯ ತಪಾಸಣೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ ಕೃಷ್ಣ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಪತ್ನಿ ಶೃತಿ ಗುರುಚರಣ್, ದಿ.ಎಸ್.ಎಂ.ಶಂಕರ್ ಪತ್ನಿ ನಾಗವೇಣಿ, ಪುತ್ರಿ ಚೈತ್ರ ಪ್ರಕಾಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ ಹಾಗೂ ಎಸ್. ಎಂ. ಕೃಷ್ಣ ಅವರ ಕುಟುಂಬ ವರ್ಗದವರು ಭಾಗವಹಿಸಿದ್ದರು.

ದೇವಾಲಯಗಳ ಪ್ರತಿಷ್ಠಾಪನ ಮಹೋತ್ಸವ

ಮದ್ದೂರು:ತಾಲೂಕಿನ ಸೋಮನಹಳ್ಳಿಯಲ್ಲಿ ಶ್ರೀಆಂಜನೇಯ, ಶ್ರೀಬೋರೇದೇವರು, ಶ್ರೀಮಾರಮ್ಮ ದೇವಿ ಮತ್ತು ನಾಗರಕಲ್ಲು ದೇವಾಲಯಗಳ ಪ್ರತಿಷ್ಠಾಪನ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಪ್ರತಿಷ್ಠಾಪನ ಮಹೋತ್ಸವದ ಅಂಗವಾಗಿ ಅ.20ರಂದು ಪೂರ್ವಭಾವಿಯಾಗಿ ಗಣಪತಿ ಪೂಜೆ, ಕಳಸ ಸ್ಥಾಪನೆ ಮತ್ತು ಹೋಮದೊಂದಿಗೆ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.ಅ.21ರಂದು ಮೂಲ ವಿಗ್ರಹಗಳಿಗೆ ಪಂಚಾಮೃತ, ಮಂಗಳ ದ್ರವ್ಯ ಅಭಿಷೇಕ, ಕಳಸ ಪ್ರತಿಷ್ಠಾಪನೆ, ಲೋಕ ಕಲ್ಯಾಣಕ್ಕಾಗಿ ಮಹಾ ಚಂಡಿಕಾಯಾಗ, ಪವಮಾನ ಮತ್ತು ಬೋರೇದೇವರ ಹೋಮದ ನಂತರ ಪೂರ್ಣಾಹುತಿ ನೆರವೇರಿಸಲಾಯಿತು.

ಬಳಿಕ ಮೂಲ ವಿಗ್ರಹಗಳಿಗೆ ಪುಷ್ಪಾಲಂಕಾರ, ಕುಂಭಾಭಿಷೇಕ ದೊಂದಿಗೆ ಪ್ರತಿಷ್ಠಾಪನ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಚೈತ್ರಾ ಗುರುಚರಣ್, ನಾಗವೇಣಿ ಶಂಕರ್, ಚೈತ್ರ ಪ್ರಕಾಶ್, ಗ್ರಾಮದ ಮುಖಂಡರು ದೇಗುಲಗಳ ಪ್ರತಿಷ್ಠಾಪನ ಕಾರ್ಯದಲ್ಲಿ ಪಾಲ್ಗೊಂಡು ಹೋಮಕುಂಡಕ್ಕೆ ಪೂರ್ಣಾಹುತಿ ನೆರವೇರಿಸಿದರು.