ಕನ್ನಡಪ್ರಭ ವಾರ್ತೆ ಮದ್ದೂರು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ತಾಲೂಕು ಕುರುಬರ ಸಂಘ ಹಾಗೂ ಅವರ ಅಭಿಮಾನಿಗಳ ಬಳಗದ ವತಿಯಿಂದ ಸೋಮವಾರ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಉಗ್ರನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಅಶ್ವಿನ್ ರಾಮಕೃಷ್ಣ ನೇತೃತ್ವದಲ್ಲಿ ಸಮುದಾಯದ ಮುಖಂಡರು ಹಾಗೂ ಅಭಿಮಾನಿಗಳು ಉಗ್ರ ನರಸಿಂಹಸ್ವಾಮಿ ದೇಗುಲಕ್ಕೆ ತೆರಳಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಅರ್ಚನೆ ಹಾಗೂ ಮಹಾಮಂಗಳಾರತಿಯೊಂದಿಗೆ ಪೂಜೆ ಸಲ್ಲಿಸಿದರು.

ಬಳಿಕ ದೇಗುಲದ ಆವರಣದ ಸೌಮ್ಯ ನಾಯಕಿ ಮತ್ತು ರಂಗನಾಯಕಿ ದೇವರಿಗೆ ಕುಂಕುಮಾರ್ಚನೆಯೊಂದಿಗೆ ಸಿದ್ದರಾಮಯ್ಯ ಅವರಿಗೆ ಭಗವಂತನು ದೀರ್ಘಾಯಸ್ಸು ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿ ಶಾಲಾ ಮಕ್ಕಳಿಗೆ ಸಿಹಿ ಹಂಚಿದರು.

ಈ ವೇಳೆ ಮಾತನಾಡಿದ ಅಶ್ವಿನ್ ರಾಮಕೃಷ್ಣ, ದೀರ್ಘಾವಧಿ ಮುಖ್ಯಮಂತ್ರಿ ಆಗಿ ಸಮರ್ಥ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರು ರಾಜ್ಯದ ಶ್ರೇಯೋಭಿವೃದ್ಧಿಗೆ ಜನಪರ ಆಡಳಿತ ನೀಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಬಣ್ಣಿಸಿದರು.


ಅನ್ನಭಾಗ್ಯ ಯೋಜನೆಗಳ ಮೂಲಕ ಬಡವರ ಹಸಿವು ನೀಗಿಸಿರುವ ಅವರು ಭಾಗ್ಯಗಳ ಸರದಾರ ಎಂದು ಬಿರುದಾಂಕಿತರಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಬಾರದು. ಸಕ್ರಿಯ ರಾಜಕಾರಣದಲ್ಲಿ ಚಟುವಟಿಕೆಯಿಂದ ಇರುವ ಮೂಲಕ ತಮ್ಮ ಅನುಭವವನ್ನು ರಾಜ್ಯದ ರಾಜಕಾರಣಕ್ಕೆ ಧಾರೆ ಎರೆಯಬೇಕು ಎಂದು ಅಶಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಅರಣ್ಯ ಸಂರಕ್ಷಣಾ ಕಾರ್ಯಪಡೆ ಸಮಿತಿ ಹಾಗೂ ಮನ್ಮುಲ್ ಮಾಜಿ ನಿರ್ದೇಶಕ ಲಿಂಗನದೊಡ್ಡಿ ರಾಮಕೃಷ್ಣ, ತಾಲೂಕು ಜನಪರ ಸಾಹಿತ್ಯ ಪರಿಷತ್ ಅಧ್ಯಕ್ಷೆ ಚಿಕ್ಕಮ್ಮ, ಪುರಸಭೆ ಮಾಜಿ ಸದಸ್ಯ ಎಂ.ಡಿ.ಮಹಾಲಿಂಗಯ್ಯ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ನಾರಾಯಣ, ದಿನೇಶ್, ಶ್ರೀಧರ್ ,ಕುಮಾರ್, ಜವರಪ್ಪ, ಈಶ್ವರ್, ಮಲ್ಲರಾಜು, ಮರಿ ಕಾಳೇಗೌಡ, ಮನು ಕುಮಾರ್, ರಾಜೇಂದ್ರ, ರಮೇಶ, ಸಿದ್ದರಾಜು, ಕರಿಯಪ್ಪ, ಬಸವಣ್ಣ, ನಾಗರಾಜು, ಕಿರಣ್, ಕೆ.ಪಿ .ಶ್ರೀಧರ, ವಳಗೆರೆದೊಡ್ಡಿ ದಿನೇಶ, ಸೊಳ್ಳೆಪುರ ರಮೇಶ್ ಮತ್ತಿತರರು ಭಾಗವಹಿಸಿದ್ದರು.