ಡೆಂಘೀ, ಮಲೇರಿಯಾ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು: ಡಾ.ರುದ್ರೇಶ

| Published : Jul 15 2024, 01:46 AM IST

ಸಾರಾಂಶ

ರಾಜ್ಯಾದ್ಯಂತ ಮುಂಗಾರು ಬಿರುಸುಗೊಂಡಿದ್ದು, ಜನವಸತಿ ಪ್ರದೇಶಗಳಲ್ಲಿ ಅಶುಚಿತ್ವದ ಪರಿಣಾಮವಾಗಿ ಗಂಭೀರವಾದ ಕಾಯಿಲೆಗಳು ಹಬ್ಬುತ್ತಿವೆ. ಅವುಗಳಲ್ಲಿ ಡೆಂಘೀಜ್ವರ ಹಾಗೂ ಮಲೇರಿಯಾ ಪ್ರಮುಖವಾಗಿವೆ. ಈ ಬಗ್ಗೆ ಜನಸಾಮಾನ್ಯರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಅರಸಾಪುರದ ಪ್ರಾಥಮಿಕ ಆಡಳಿತ ವೈದ್ಯಾಧಿಕಾರಿ ಡಾ.ರುದ್ರೇಶ ಹೇಳಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜ್ಯಾದ್ಯಂತ ಮುಂಗಾರು ಬಿರುಸುಗೊಂಡಿದ್ದು, ಜನವಸತಿ ಪ್ರದೇಶಗಳಲ್ಲಿ ಅಶುಚಿತ್ವದ ಪರಿಣಾಮವಾಗಿ ಗಂಭೀರವಾದ ಕಾಯಿಲೆಗಳು ಹಬ್ಬುತ್ತಿವೆ. ಅವುಗಳಲ್ಲಿ ಡೆಂಘೀಜ್ವರ ಹಾಗೂ ಮಲೇರಿಯಾ ಪ್ರಮುಖವಾಗಿವೆ. ಈ ಬಗ್ಗೆ ಜನಸಾಮಾನ್ಯರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಅರಸಾಪುರದ ಪ್ರಾಥಮಿಕ ಆಡಳಿತ ವೈದ್ಯಾಧಿಕಾರಿ ಡಾ.ರುದ್ರೇಶ ಹೇಳಿದರು.

ನಗರದ ವಿವಿಧೆಡೆ ಯುವ ಅವನಿ ಗ್ರೀನ್ ಫೌಂಡೇಶನ್, ನಗರದ ನಮ್ಮ ದಾವಣಗೆರೆ ಫೌಂಡೇಶನ್, ಮಹಾನಗರ ಪಾಲಿಕೆ ಸಹಯೋಗದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಡೆಂಘೀಜ್ವರ ಲಕ್ಷಣಗಳು, ಬಾಧೆ ತಡೆಗಟ್ಟಲು ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಕಾರ್ಯಕ್ರಮದಲ್ಲಿ ಅವರು ಪ್ರೊಜೆಕ್ಟರ್ ಮೂಲಕ ಮಾಹಿತಿ ನೀಡಿದರು.

ಪಾಲಿಕೆ ಸದಸ್ಯ, ನಮ್ಮ ದಾವಣಗೆರೆ ಫೌಂಡೇಷನ್ ಪ್ರಮುಖ ಪ್ರಸನ್ನಕುಮಾರ್ ಡೆಂಘೀಮುಕ್ತ ದಾವಣಗೆರೆಗಾಗಿ ಮಹಾನಗರ ಪಾಲಿಕೆ, ಜಿಲ್ಲಾಡಳಿತದೊಂದಿಗೆ ಅರಿವಿನ ಹೆಜ್ಜೆ ಇಡೋಣ ಎಂದು ಮಕ್ಕಳಿಗೆ ಜಾಗೃತಿ ಮೂಡಿಸಿದರು. ಎಲ್ಲ ಮಕ್ಕಳೂ ಮತ್ತು ಪೋಷಕರು ತಮ್ಮ ಮನೆ ಸುತ್ತ, ತಮ್ಮ ಓಣಿಗಳಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ಗಮನವಹಿಸೋಣ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಅನಂತರ ಮನೆ ಮನೆಗಳಿಗೆ ತೆರಳಿ, ಡೆಂಘೀಜ್ವರ ಕುರಿತು ಮಾಹಿತಿಯನ್ನು ಹೊಂದಿರುವ ಕರಪತ್ರ ಹಂಚುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ನಗರದ ಡಿಜೆವಿ ಸರ್ಕಾರಿ ಶಾಲೆ, ವಿಶ್ವಭಾರತಿ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧೆಡೆ ನಡೆಸಿದ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ಪವನ್ ರೇವಣಕರ್, ಮುಖ್ಯೋಪಾಧ್ಯಾಯ ಎಂ.ಸಿ. ಗೂಳಪ್ಪ, ಪಾಲಿಕೆ ಆರೋಗ್ಯ ನಿರೀಕ್ಷಕರಾದ ಮದನ್ ಕುಮಾರ್, ರಾಜಪ್ಪ, ಮಾಂತೇಶ್, ಹರೀಶ್ ಕೆ.ಎನ್, ಶಾಲೆಯ ಸಮಾಜ ವಿಜ್ಞಾನದ ಉಪಾಧ್ಯಾಯರು ವಿಜಯ್ ಕುಮಾರ್ ಇದ್ದರು.