ಪೌರ ಕಾರ್ಮಿಕರ ಮಕ್ಕಳ ಶಿಕ್ಷಣ, ಬದುಕಿಗೆ ವಿಶೇಷ ಆದ್ಯತೆ: ಎಲ್.ಸಂದೇಶ್

| Published : Feb 19 2024, 01:33 AM IST

ಪೌರ ಕಾರ್ಮಿಕರ ಮಕ್ಕಳ ಶಿಕ್ಷಣ, ಬದುಕಿಗೆ ವಿಶೇಷ ಆದ್ಯತೆ: ಎಲ್.ಸಂದೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಪೌರ ಕಾರ್ಮಿಕರು ನಗರ ಮತ್ತು ಪಟ್ಟಣವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಅದೇ ರೀತಿ ಅವರ ಬದುಕು ಹಸನಾಗಬೇಕಾದರೆ ಉತ್ತಮ ಆರೋಗ್ಯ, ಶಿಕ್ಷಣ, ವೇತನ ಸೇರಿದಂತೆ ಅಗತ್ಯ ಮೂಲಭೂತ ಸೌರ‍್ಯಗಳು ದೊರೆಯಬೇಕು. ವಿಶೇಷವಾಗಿ ಪೌರ ಕಾರ್ಮಿಕರ ಮಕ್ಕಳು ಭವಿಷ್ಯದಲ್ಲಿ ಉನ್ನತ ಅಧಿಕಾರವನ್ನು ಹೊಂದುವಂತಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪೌರ ಕಾರ್ಮಿಕರ ಮಕ್ಕಳ ಶಿಕ್ಷಣ ಮತ್ತು ಬದುಕಿನ ಉನ್ನತಿಗೆ ಸರ್ಕಾರ ಮತ್ತು ಖಾಸಗಿ ಸಂಘ-ಸಂಸ್ಥೆಗಳು ವಿಶೇಷ ಆದ್ಯತೆ ನೀಡಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಹೇಳಿದರು.

ನಗರದ ಕುಂಬಾರ ವಿದ್ಯಾರ್ಥಿನಿಲಯದ ಆವರಣದಲ್ಲಿ ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಮತ್ತು ಜಿಲ್ಲಾ ಕುಂಬಾರರ ಜಾಗೃತ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಮಹಿಳಾ ಪೌರಕಾರ್ಮಿಕರಿಗೆ ಸನ್ಮಾನ ಮತ್ತು ರೈತರಿಗೆ ಕಲ್ಪವೃಕ್ಷ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೌರ ಕಾರ್ಮಿಕರು ನಗರ ಮತ್ತು ಪಟ್ಟಣವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಅದೇ ರೀತಿ ಅವರ ಬದುಕು ಹಸನಾಗಬೇಕಾದರೆ ಉತ್ತಮ ಆರೋಗ್ಯ, ಶಿಕ್ಷಣ, ವೇತನ ಸೇರಿದಂತೆ ಅಗತ್ಯ ಮೂಲಭೂತ ಸೌರ‍್ಯಗಳು ದೊರೆಯಬೇಕು. ವಿಶೇಷವಾಗಿ ಪೌರಕಾರ್ಮಿಕರ ಮಕ್ಕಳು ಭವಿಷ್ಯದಲ್ಲಿ ಉನ್ನತ ಅಧಿಕಾರವನ್ನು ಹೊಂದುವಂತಾಗಬೇಕು ಎಂದು ಆಶಿಸಿದರು.

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಘೋಷಿಸಿದೆ. ಅದು ಘೋಷಣೆಗೆ ಸೀಮಿತವಾಗದೆ ಕಾಯಂಮಾತಿ ಪ್ರಕ್ರಿಯೆ ಆರಂಭಗೊಳ್ಳಬೇಕು. ಮಹಿಳಾ ಪೌರ ಕಾರ್ಮಿಕರ ಆರೋಗ್ಯಕ್ಕೆ ವಿಶೇಷ ಕಾಳಜಿ ವಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಶ್ರೀನಿವಾಸ್ ರೈತರಿಗೆ ತೆಂಗಿನಸಸಿ ವಿತರಿಸಿ ಮಾತನಾಡಿ, ಇಂದು ಕೃಷಿಕ್ಷೇತ್ರ ಕೇವಲ ದುಡಿಮೆ ಕ್ಷೇತ್ರವಾಗಿದೆಯೇ ವಿನಃ ಆದಾಯ ತಂದುಕೊಡುತ್ತಿಲ್ಲ. ಆದ್ದರಿಂದ ಕೃಷಿಕ್ಷೇತ್ರ ಉದ್ಯಮವಾಗಿ ಬೆಳೆಯಬೇಕು ಎಂದರು.

ಜಿಲ್ಲಾ ಕುಂಬಾರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ ಮಾತನಾಡಿ, ಕೋವಿಡ್‌ನಂತಹ ಸಂದರ್ಭದಲ್ಲಿ ಎಲ್ಲ ವರ್ಗದವರು ಮನೆಯಲ್ಲಿದ್ದರೂ ಪೌರ ಕಾರ್ಮಿಕರು ಜೀವದ ಹಂಗು ತೊರೆದು ಸ್ವಚ್ಛಗೊಳಿಸುತ್ತಾ ಬೀದಿಯಲ್ಲೇ ಬದುಕು ಸಾಗಿಸಿದರು. ಜೀವ ಭದ್ರತೆ ಇಲ್ಲದ ಪೌರಕಾರ್ಮಿಕರಿಗೆ ದುಡಿಮೆಗೆ ತಕ್ಕಂತೆ ಪ್ರತಿಫಲ ಸಿಗಬೇಕು ಎಂದರು.

ಸುಮಾರು 50ಕ್ಕೂ ಹೆಚ್ಚು ಮಹಿಳಾ ಪೌರ ಕಾರ್ಮಿಕರನ್ನು ಸನ್ಮಾನಿಸಿ ಸೀರೆ ವಿತರಿಸಲಾಯಿತು. ಸರ್ವಜ್ಞ ಸೇವಾಟ್ರಸ್ಟ್ ಅಧ್ಯಕ್ಷರಾದ ಆರ್.ಶ್ರೀನಿವಾಸ್ ಅವರನ್ನು ಅಭಿನಂದಿಸಲಾಯಿತು. ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ತುಳಸಿದಾಸ್, ಕುಂಬಾರ ಸಮುದಾಯದ ಮುಖಂಡರಾದ ಪ್ರದೀಪ್ ಯಲಿಯೂರು, ಕಾಂತರಾಜು, ಪುಟ್ಟಸ್ವಾಮಿ, ವೆಂಕಟೇಶ್, ಆನಂದ್, ಸತೀಶ್, ಸಿದ್ದಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.