ಅವಿಭಜಿತ ಬಳ್ಳಾರಿ ಜಿಲ್ಲೆ ಅಭಿವೃದ್ಧಿಗೆ ವಿಶೇಷ ಆದ್ಯತೆ: ಸಂಸದ ಈ. ತುಕಾರಾಂ

| Published : Nov 20 2024, 12:34 AM IST

ಅವಿಭಜಿತ ಬಳ್ಳಾರಿ ಜಿಲ್ಲೆ ಅಭಿವೃದ್ಧಿಗೆ ವಿಶೇಷ ಆದ್ಯತೆ: ಸಂಸದ ಈ. ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಲೋಕಸಭೆ ಸದಸ್ಯನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿ ಮಾಡಿಸಿ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತೇನೆ ಎಂದು ಸಂಸದ ಈ. ತುಕಾರಾಂ ಹೇಳಿದರು.

ಕೊಟ್ಟೂರು: ಬಳ್ಳಾರಿ ಲೋಕಸಭೆ ಸದಸ್ಯನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿ ಮಾಡಿಸಿ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತೇನೆ ಎಂದು ಸಂಸದ ಈ. ತುಕಾರಾಂ ಹೇಳಿದರು.

ಪಟ್ಟಣದ ಕಾಂಗ್ರೆಸ್ ಮುಖಂಡ ಎಂಎಂಜೆ ಸತ್ಯಪ್ರಕಾಶ ನಿವಾಸದಲ್ಲಿ ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರತಿ ರಸ್ತೆಗಳನ್ನು ಅಭಿವೃದ್ಧಿಗೊಳಿಸಿದರೆ ಶಿಕ್ಷಣ, ವಾಣಿಜ್ಯ ಸೇರಿ ಇತರೆ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ಸಂಡೂರು ಕ್ಷೇತ್ರಾದ್ಯಂತ ಪಟ್ಟಣ, ಹಳ್ಳಿಗಳ ಎಲ್ಲ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗಿದೆ. ಅದೇ ಮಾದರಿಯಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರದ ರಾಜ್ಯ, ರಾಷ್ಟ್ರೀಯ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಯೋಜನೆ ಹೊಂದಿರುವೆ. ಹೊಸಪೇಟೆಯಿಂದ ಮರಿಯಮ್ಮನಹಳ್ಳಿ, ಹ.ಬೊ. ಹಳ್ಳಿ, ಹರಪನಹಳ್ಳಿ ಮೂಲಕ ಹರಿಹರದ ವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಅಭಿವೃದ್ಧಿ ಕೈಗೊಳ್ಳುವಂತೆ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನರೊಡಗೂಡಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದ್ದು, ಅದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲಿ ರಸ್ತೆ ಅಭಿವೃದ್ಧಿ ಅಂದಾಜು ವೆಚ್ಚದ ಡಿಪಿಆರ್ ನಡೆಸಲಾಗುವುದು. ಅದರಂತೆ ಸಂಡೂರಿನಿಂದ ಕೂಡ್ಲಿಗಿ, ಕೊಟ್ಟೂರು ಮಾರ್ಗವಾಗಿ ಹರಪನಹಳ್ಳಿ ವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಗೊಳಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುವುದು ಎಂದರು.

ಈ ಭಾಗದ ರೈಲ್ವೆ ಯೋಜನೆಗಳ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವರು ಬಳ್ಳಾರಿಗೆ ಬಂದ ಸಂದರ್ಭದಲ್ಲಿ ಚರ್ಚೆ ನಡೆಸಿರುವೆ. ಹ.ಬೊ. ಹಳ್ಳಿಯಲ್ಲಿ ಮೇಲು ಸೇತುವೆ, ಕೊಟ್ಟೂರು ನಿಲ್ದಾಣದ ಅಭಿವೃದ್ಧಿ ಕುರಿತು ಮಾತನಾಡಲಾಗಿದೆ. ಕೊಟ್ಟೂರಿನಲ್ಲಿ ರಸಗೊಬ್ಬರ ರೇಕ್ ಪಾಯಿಂಟ್, ಲೋಡ್ ಶೆಡ್ಡಿಂಗ್ ನಿರ್ಮಾಣಕ್ಕೆ ಮಂಜೂರಾತಿ ನೀಡುವಂತೆ ಸಚಿವರನ್ನು ಭೇಟಿ ಮಾಡಿ ಕೋರಲಾಗುವುದು. ಸಂಡೂರಿನಿಂದ ಕೊಟ್ಟೂರಿಗೆ ರೈಲ್ವೆ ಮಾರ್ಗ ಜೋಡಣೆ ಮಾಡಲಾಗುವುದು. ಹೊಸಪೇಟೆ ದಾವಣಗೆರೆ ಹಾಗೂ ದೂರದ ನಗರಗಳಿಗೆ ಹೊಸ ರೈಲು ಮಾರ್ಗ ಆರಂಭಿಸಲು ಸಹ ಪ್ರಯತ್ನಿಸುವೆ ಎಂದು ಹೇಳಿದರು.

ಸಂಡೂರು ನಾರಿಹಳ್ಳ ನೀರು ಬಳಸಿ ಹೈಡ್ರೋಪವರ್ ಆರಂಭಿಸುವ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಕ್ಷೇತ್ರದಲ್ಲಿ ಯಾವುದೇ ಯೋಜನೆ ಕೈಗೊಳ್ಳುವ ಸರಕಾರ ಪರಿಸರ ಹಿತವಾಗಿರಬೇಕು. ಪರಿಸರ ನಾಶ ಪಡಿಸಿ ಗಣಿಗಾರಿಕೆ, ಹೈಡ್ರೋಪವರ್ ನಡೆಸುವುದಕ್ಕೆ ಅವಕಾಶ ನೀಡುವುದಕ್ಕೆ ನನ್ನ ವಿರೋಧವಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಎಂಎಂಜೆ ಸತ್ಯಪ್ರಕಾಶ್, ಎಂಎಂಜೆ ಕುಮಾರಸ್ವಾಮಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ. ದಾರುಕೇಶ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅಡಕೆ ಮಂಜುನಾಥ, ಎಪಿಎಂಸಿ ಸದಸ್ಯ ಚಿರಿಬಿ ಕೊಟ್ರೇಶ, ಎಂಎಂಜೆ ಮಂಜುನಾಥ, ಆರ್‌.ಎಂ. ಗುರು, ಬಿ.ಪಿ. ಮಹೇಶ್, ನಾಗಪ್ಪ ಸೇರಿ ಅನೇಕರು ಇದ್ದರು.