ಪಟ್ಟಣ ಸ್ವಚ್ಛ, ಸುಂದರಗೊಳಿಸಲು ವಿಶೇಷ ಆದ್ಯತೆ: ಮರಿರಾಮಣ್ಣ

| Published : Mar 20 2025, 01:20 AM IST

ಸಾರಾಂಶ

೧೫ನೇ ಹಣಕಾಸು ಯೋಜನೆಯ ₹೨.೯೮ ಕೋಟಿ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪ್ರತಿ ವಾರ್ಡ್‌ಗಳಲ್ಲಿ ಅಗತ್ಯತೆಗೆ ಅನುಗುಣವಾಗಿ ಕೈಗೆತ್ತಿಕೊಳ್ಳಲಾಗುವುದು.

ಹಗರಿಬೊಮ್ಮನಹಳ್ಳಿ ಪುರಸಭೆ ಬಜೆಟ್ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ೧೫ನೇ ಹಣಕಾಸು ಯೋಜನೆಯ ₹೨.೯೮ ಕೋಟಿ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪ್ರತಿ ವಾರ್ಡ್‌ಗಳಲ್ಲಿ ಅಗತ್ಯತೆಗೆ ಅನುಗುಣವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷ ಎಂ. ಮರಿರಾಮಣ್ಣ ತಿಳಿಸಿದರು. ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದ ೫, ೧, ೧೭ ಮತ್ತು ೧೮ನೇ ವಾರ್ಡ್ಗಳಲ್ಲಿ ಮೊಬೈಲ್ ಕ್ಲಿನಿಕ್ ಆರಂಭಿಸಲಾಗುವುದು. ಈ ಸಾಲಿನ ಬಜೆಟ್‌ನಲ್ಲಿ ಶಿಕ್ಷಣ ಮತ್ತು ಆರೋಗ್ಯ ಮತ್ತು ಬಡಜನರಿಗೆ ವೈಯಕ್ತಿಕ ಸೌಲಭ್ಯ ಕಲ್ಪಿಸುವ ಯೋಜನೆಗಳಿಗೆ ಒತ್ತು ನೀಡುವಂತೆ ಕ್ರಿಯಾಯೋಜನೆ ರೂಪಿಸಲಾಗುವುದು. ₹೪.೫ ಕೋಟಿ ವೇತನಕ್ಕಾಗಿ ವಿನಿಯೋಗಿಸಲಾಗುತ್ತಿದೆ. ಪಟ್ಟಣವನ್ನು ಸ್ವಚ್ಛ, ಸುಂದರಗೊಳಿಸಲು ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ರಾಮನಗರ ಬಸ್‌ಶೆಲ್ಟರ್ ಅಭಿವೃದ್ಧಿಪಡಿಸುವಂತೆ ಸದಸ್ಯ ಜೋಗಿ ಹನುಮಂತಪ್ಪ ಕೋರಿದಾಗ, ಈ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಮುಗುಳಿ ಪ್ರತಿಕ್ರಿಯಿಸಿದರು.

ಬಜೆಟ್ ಉದ್ದೇಶ ಸ್ಪಷ್ಟಪಡಿಸುವಂತೆ ಸದಸ್ಯ ಎಲ್.ಗಣೇಶ್ ತಿಳಿಸಿದಾಗ, ಆಯವ್ಯಯದ ಅನ್ವಯ ಅಭಿವೃದ್ಧಿ ಕೈಗೆತ್ತಿಕೊಳ್ಳಲು ಸಂಘ-ಸಂಸ್ಥೆಗಳು ಮತ್ತು ಸದಸ್ಯರ ಸಭೆ ಇದಾಗಿದೆ ಎಂದು ಮುಖ್ಯಾಧಿಕಾರಿ ಸ್ಪಷ್ಟಪಡಿಸಿದರು. ಮಿಲಿಟರಿ ಬಯಲಿನಲ್ಲಿ ಪಾರ್ಕ್ ಅಭಿವೃದ್ಧಿಗೆ ಅನುದಾನ ಕಾಯ್ದಿರಿಸಬೇಕು, ವಿದ್ಯುತ್ ಲೈನ್‌ಗಳಿಗೆ ಕೇಬಲ್ ಅಳವಡಿಸಬೇಕು. ಚಿತ್ರಮಂದಿರದಿಂದ ರಾಮನಗರ ಬಸ್‌ನಿಲ್ದಾಣದವರೆಗೆ ಬೀದಿದೀಪ ಅಳವಡಿಸಬೇಕು ಎಂದು ಮಾಜಿ ಸದಸ್ಯ ಅಲ್ಲಾಭಕ್ಷಿ ಒತ್ತಾಯಿಸಿದರು.ಆಸ್ತಿ ತೆರಿಗೆಯಿಂದ ಸಂಗ್ರಹವಾಗುವ ₹೧.೯೦ ಕೋಟಿ ಪೈಕಿ ಶೇ.೨೬ರಷ್ಟು ಕಡಿತಗೊಳ್ಳಲಿದೆ. ಉಳಿದ ಮೊತ್ತದಲ್ಲಿ ಪುರಸಭೆ ಬೀದಿದೀಪ, ಸ್ವಚ್ಛತೆ, ನಾನಾ ಸಾಮಗ್ರಿ, ವಾಹನಗಳ ದುರಸ್ತಿ ನಿರ್ವಹಿಸಲಾಗುವುದು ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು. ಪಟ್ಟಣದ ಶೇಷಾದ್ರಿ ನಿವಾಸದ ಬಳಿಯ ಸರ್ಕಾರಿ ನಿವೇಶನವನ್ನು ಮುಕ್ತಗೊಳಿಸಲು ಮುಖಂಡ ಸಿಖಂದರ್ ಖಾನ್ ಕೋರಿದರು. ಯಾರದೋ ಪ್ರಭಾವಕ್ಕೆ ಒಳಗಾಗಿದ್ದೀರಿ ಎಂದು ಆರೋಪಿಸುತ್ತಿದ್ದಂತೆ ಯಾರ ಪ್ರಭಾವವೂ ಇಲ್ಲ, ಸದಸ್ಯರ ನಿರ್ಣಯದಂತೆ ಕಾರ್ಯನಿರ್ವಹಿಸುವುದಾಗಿ ಅಧ್ಯಕ್ಷರು ಪ್ರತಿಕ್ರಿಯಿಸಿದರು. ಬೀದಿಬದಿ ವ್ಯಾಪಾರಿಗಳಿಗೆ ಸುಸಜ್ಜಿತ ಮಾರುಕಟ್ಟೆ, ಸುಂಕ ತಡೆ ಕುರಿತಂತೆ ಸಂಘದ ಅಧ್ಯಕ್ಷ ಯು.ಮಂಜುನಾಥ, ಕಾರ್ಯದರ್ಶಿ ಕೆ.ರೋಷನ್ ಕೋರಿದರು. ಸಭೆಯಲ್ಲಿ ಸ್ಮಶಾನದ ಅಭಿವೃದ್ಧಿ ಕುರಿತಂತೆ ಸ್ವಾರಸ್ಯಕರ ಚರ್ಚೆ ನಡೆಯಿತು. ಸದಸ್ಯ ಪವಾಡಿ ಹನುಮಂತಪ್ಪ ಮಾತನಾಡಿ, ಸ್ಮಶಾನಗಳನ್ನು ಅಂದವಾಗಿ ಅಭಿವೃದ್ಧಿಪಡಿಸಬೇಕು. ಎಲ್ಲರೂ ಒಂದು ದಿನ ಅಲ್ಲಿಗೆ ಹೋಗುವುದು, ಸತ್ತ ಮೇಲಾದರೂ ನೆಮ್ಮದಿಯಿಂದಿರುವಂತೆ ಅಭಿವೃದ್ಧಿಪಡಿಸಿ ಎನ್ನುತ್ತಿದ್ದಂತೆ ಮಧ್ಯಪ್ರವೇಶಿಸಿದ ಸದಸ್ಯ ನವೀನ್‌ಕುಮಾರ್ ಎಲ್ಲರೂ ಅಲ್ಲಿಗೆ ಹೋಗುವುದೆಂದು ತಿಳಿದಿದ್ದರೂ ಇತ್ತೀಚೆಗಷ್ಟೆ ದೊಡ್ಡ ಮನೆ ಕಟ್ಟಿಸಿ, ಗೃಹಪ್ರವೇಶ ನಡೆಸಿದ್ದಾರೆ ಎಂದು ಚಟಾಕಿ ಹಾರಿಸಿದರು. ಸದಸ್ಯ ಅಜೀಜುಲ್ಲಾ ತಮ್ಮದೆ ದಾಟಿಯಲ್ಲಿ ಧ್ವನಿಗೂಡಿಸಿದಾಗ ಸಭೆ ನಗೆಯಲ್ಲಿ ತೇಲಿತು. ದೀಪಕ್ ಕಟಾರೆ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸ್ಮಶಾನ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದರು. ಈ ಸಂದರ್ಭ ಪುರಸಭೆ ಸದಸ್ಯರಾದ ಕಮಲಮ್ಮ, ತೆಲಿಗಿ ನೆಲ್ಲು ಇಸ್ಮಾಯಿಲ್, ಚನ್ನಮ್ಮ ವಿಜಯಕುಮಾರ್, ರೇಷ್ಮಾಬಾನು, ನೇತ್ರಾವತಿ ಹುಚ್ಚಪ್ಪ, ದಾದಾಫೀರ್, ತ್ಯಾವಣಗಿ ಕೊಟ್ರೇಶ, ಉಪ್ಪಾರ ಬಾಳಪ್ಪ, ನಾಗರಾಜ ಜನ್ನು ಇತರರಿದ್ದರು.