ನೀಲಗುಂದ ಗ್ರಾಮದ ಗುದ್ನೇಶ್ವರ ಮಠದಲ್ಲಿ ದಿವ್ಯ ಚೇತನ ಟ್ರಸ್ಟ್ ವತಿಯಿಂದ ಫೆ. 15ರಂದು ಮಹಾಶಿವರಾತ್ರಿ ಉತ್ಸವ ಅಂಗವಾಗಿ ಆಧ್ಯಾತ್ಮಿಕ, ಸಾಹಿತ್ಯಿಕ, ಸಂಗೀತ ಕಾರ್ಯಕ್ರಮಗಳು ನಡೆಯಲಿದೆ.
ವಿಶೇಷ ವರದಿ
ಮುಳಗುಂದ: ನೀಲಗುಂದ ಗ್ರಾಮದ ಗುದ್ನೇಶ್ವರ ಮಠದಲ್ಲಿ ದಿವ್ಯ ಚೇತನ ಟ್ರಸ್ಟ್ ವತಿಯಿಂದ ಫೆ. 15ರಂದು ಮಹಾಶಿವರಾತ್ರಿ ಉತ್ಸವ ಅಂಗವಾಗಿ ಆಧ್ಯಾತ್ಮಿಕ, ಸಾಹಿತ್ಯಿಕ, ಸಂಗೀತ ಕಾರ್ಯಕ್ರಮಗಳು ನಡೆಯಲಿದೆ.ಶರಣ ಸಂಸ್ಕೃತಿ, ಐತಿಹಾಸಿಕ ಪರಂಪರೆ, ಸಾಹಿತ್ಯ, ಸಂಗೀತ ಹಲವಾರು ಕ್ಷೇತ್ರಗಳ ತವರೆನಿಸಿದ ಪುರಾತನ ಗ್ರಾಮವೇ ಶ್ರೀ ಕ್ಷೇತ್ರ ಗುದ್ದೇಶ್ವರ ಮಠ ನೀಲಗುಂದ.
ಪಾಂಡವರು ಈ ಗ್ರಾಮಕ್ಕೆ ಭೇಟಿ ನೀಡಿರುವ ಮತ್ತು ಋಷಿಮುನಿಗಳು ತಪಸ್ಸು ಮಾಡಿದ ಕುರುಹುಗಳಿವೆ. 9 ದಶಕಗಳ ಪೂರ್ವದಲ್ಲಿ ಶ್ರೀ ಗುದ್ದೇಶ್ವರ ಸ್ವಾಮಿಗಳು ತಮ್ಮ ಏಕಾಂತ ಹಾಗೂ ತಪಸ್ಸಿಗೆ ಆಯ್ದುಕೊಂಡ ಶ್ರೇಷ್ಠವಾದ ಸ್ಥಳವೇ ನೀಲಗುಂದ ಗ್ರಾಮ.ಗುದ್ದೇಶ್ವರ ಸ್ವಾಮಿಗಳು ಈಗಿನ ಕೊಪ್ಪಳ ಜಿಲ್ಲೆ, ಕುಕನೂರಿನ ಗುದ್ದೇಶ್ವರ ಮಠದಲ್ಲಿ ತಾಯಿ ಗುದ್ನೆಮ್ಮನ ಉದರದಲ್ಲಿ ಜನಿಸಿದರು. ಇವರು 5 ವರ್ಷದವರಿದ್ದಾಗ ಹುಟ್ಟಿದ ಗ್ರಾಮ ತ್ಯಜಿಸಿ ಅಣ್ಣಿಗೇರಿಯ ತೋಂಟದಾರ್ಯ ಸಿದ್ಧಲಿಂಗ ಸ್ವಾಮಿಗಳ ಕಾರುಣ್ಯ ಶಿಶುವಾಗಿ ಬೆಳೆದು ಅಧ್ಯಾತ್ಮಿಕ ಜ್ಞಾನ ಶಕ್ತಿಯ ಸಂಪನ್ನರಾಗಿ ಅನೇಕ ಲೀಲೆಗಳನ್ನು ಮಾಡುತ್ತ ನೀಲಗುಂದ ಗ್ರಾಮವನ್ನರಸಿ ಬಂದು ಗುಡ್ಡದಲ್ಲಿ ಮಠ ನಿರ್ಮಿಸಿ ಬಂದ ಭಕ್ತರ ಕಷ್ಟ, ಕಾರ್ಪಣ್ಯ ಕಳೆದು ಅವರ ಜೀವನದಲ್ಲಿ ಇಷ್ಟದಾತರಾಗಿ ಮೆರೆದವರು. ತಮ್ಮ ಜೀವನದ ಬಹುಪಾಲು ಅನಾಥರ ಮತ್ತು ನೊಂದವರ ಬಾಳಿನಲ್ಲಿ ಆಶಾಕಿರಣವಾಗಿ ತಮ್ಮ ಬೆಡಗಿನ ಮಾತಿನಲ್ಲಿ ಅವರನ್ನು ಹರಸಿ ಆಶೀರ್ವದಿಸುವ ಮಹಾನ್ ಸಂತರಾಗಿದ್ದರು.
1974ರಲ್ಲಿ ತಮ್ಮ 61-62ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಅವರ ನಂತರ ಶ್ರೀಮಠದ ಪರಂಪರೆಯನ್ನು ವಹಿಸಿಕೊಂಡ ಇಂದಿನ ಪ್ರಭುಲಿಂಗ ದೇವರು ಬಡವರ, ಜನಸಾಮಾನ್ಯರ ಸ್ವಾಮಿಗಳು ಎಂದು ಹೆಸರುವಾಸಿಯಾದವರು. ಕಳೆದ 17 ವರ್ಷಗಳಿಂದ ದಿವ್ಯಚೇತನ ಟ್ರಸ್ಟ್ ವತಿಯಿಂದ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಮಹಾಶಿವರಾತ್ರಿ ಅಂಗವಾಗಿ ಧಾರ್ಮಿಕ ಚಿಂತನೆ, ಉಪನ್ಯಾಸಗಳು, ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ದಿವ್ಯ ಚೇತನ ಟ್ರಸ್ಟ್ ಹುಟ್ಟು ಹಾಕಿ ಆ ಮೂಲಕ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮಲ್ಲಕಂಬ ವಿದ್ಯೆ ಕಲಿಸಿ ಅಪ್ಪಟ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹದ ಜತೆಗೆ ಶ್ರೀಮಠದ ಪ್ರಾಥಮಿಕ ಶಾಲೆ ತೆರೆದು ಈ ಭಾಗದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮವಹಿಸಿದ್ದಾರೆ.ತ್ರಿಲಿಂಗೇಶ್ವರ ಒಂದೇ ಪಾನ ಬಟ್ಟಲದಲ್ಲಿನ ತ್ರಿಲಿಂಗೇಶ್ವರ ಲಿಂಗ ಇರುವ ಇಲ್ಲಿಯ ಬೆಟ್ಟದ ಮೇಲಿನ ಮಲ್ಲಿಕಾರ್ಜುನ ದೇವಸ್ಥಾನ ಗ್ರಾಮದ ಭಕ್ತರ ಆರಾಧ್ಯ ದೈವ. ಜಾಗ್ರತ ಮೂರ್ತಿಯಾದ ಶಿವಲಿಂಗಕ್ಕೆ ಶಿವರಾತ್ರಿಯಂದು ಅಭಿಷೇಕ ಪೂಜಾ ಕೈಂಕರ್ಯಗಳು ವಿಶೇಷವಾಗಿ ನಡೆಯುತ್ತಿವೆ. ಫೆ.15ರಂದು ಸಂಜೆ 6.30ಕ್ಕೆ ಮಹಾಶಿವರಾತ್ರಿ ಕಾರ್ಯಕ್ರಮವನ್ನು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಉದ್ಘಾಟಿಸುವರು. ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬಸವ ಬೆಳವಿ ವಿರಕ್ತಮಠದ ಶರಣಬಸವ ದೇವರು ಸಾನ್ನಿಧ್ಯ ವಹಿಸುವರು. ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ಆನಂತರ ಅಹೋರಾತ್ರಿ ನಡೆಯುವ ಮಹಾಶಿವರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಪಂಡಿತ ದೊಡ್ಡಯ್ಯ, ಶಂಕರ ಬಿನ್ನಾಳ, ಪುಟ್ಟರಾಜ ಹಿರೇಮಠ, ಕುಮಾರೇಶ ಬಿನ್ನಾಳ ಅವರಿಂದ ಸಂಗೀತ ಕಾರ್ಯಕ್ರಮವಿದೆ. ಆನಂತರ ಖ್ಯಾತ ವಯಲಿನ್ ವಾದಕ ನಾರಾಯಣ ಹಿರೇಕೊಳಚಿ, ಶಹನಾಯಿ ವಾದಕ ಪಂ. ರುದ್ರೇಶ ಕುಮಾರ, ಸಿತಾರ ವಾದಕ ಪ್ರವೀಣ ಹೂಗಾರ, ತಬಲಾ ವಾದಕ ಹನುಮಂತ ಕೊಡಗಾನೂರ, ಪಂ. ವೀರಭದ್ರಪ್ಪ ಬೆನಕಲ್ಲ ಅವರಿಂದ ತತ್ ಸಿಶಿರ ನಾದ ತರಂಗ ಜುಗಲಬಂದಿ ಸಂಗೀತ ಹಾಗೂ ಮಂಜುನಾಥ ಆಗೋಲಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.ನಮೋ ಚಹಾ ವಿತರಣೆಬಿಜೆಪಿ ಗದಗ ಗ್ರಾಮೀಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರವಿ ವಗ್ಗನವರ ನೇತೃತ್ವದಲ್ಲಿ ಮಹಾಶಿವರಾತ್ರಿ ಉತ್ಸವಕ್ಕೆ ಬರುವ ಭಕ್ತಾದಿಗಳಿಗೆ ಉಚಿತ ನಮೋ ಚಹಾ ವಿತರಣೆಯನ್ನು ಫೆ. 15ರಂದು ಸಂಜೆ ನೀಲಗುಂದ ಗುದ್ನೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದಾರೆ.
ಉತ್ತಮ ಸಂಸ್ಕಾರಗ್ರಾಮೀಣ ಭಾಗದಲ್ಲಿ ನೀಲಗುಂದ ಗುದ್ನೇಶ್ವರ ಶ್ರೀಗಳು ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲೆ ತೆರೆಯುವ ಮೂಲಕ ಗುಣಮಟ್ಟದ ಶಿಕ್ಷಣದ ಜತೆಗೆ, ಉತ್ತಮ ಸಂಸ್ಕಾರವನ್ನು ನೀಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮ ವಹಿಸಿದ್ದಾರೆ ಎಂದು ಬಿಜೆಪಿ ಗದಗ ಗ್ರಾಮೀಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರವಿ ವಗ್ಗನವರ ಹೇಳಿದರು.