ಸಂಡೂರು ತಾಲೂಕಿನ ವಿವಿಧೆಡೆ ನಾಗಚತುರ್ಥಿ (ನಾಗಚೌತಿ) ದಿನವಾರ ಭಾನುವಾರ ನಾಗದೇವತೆಗಳಿಗೆ ಭಕ್ತರು ಹಾಲು ಎರೆದು ತಮ್ಮ ಭಕ್ತಿ ಸಮರ್ಪಿಸಿದರು.
ಸಂಡೂರು: ತಾಲೂಕಿನ ವಿವಿಧೆಡೆ ನಾಗಚತುರ್ಥಿ (ನಾಗಚೌತಿ) ದಿನವಾರ ಭಾನುವಾರ ನಾಗದೇವತೆಗಳಿಗೆ ಭಕ್ತರು ಹಾಲು ಎರೆದು ತಮ್ಮ ಭಕ್ತಿ ಸಮರ್ಪಿಸಿದರು. ಕೆಲವರು ಮಣ್ಣಿನ ನಾಗದೇವತೆಗಳ ಮೂರ್ತಿಯನ್ನು ತಂದು ಮನೆಗಳಲ್ಲಿ ಪೂಜಿಸಿದರೆ, ಕೆಲವರು ದೇವಸ್ಥಾನಗಳ ಬಳಿಯಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗಳಿಗೆ ಪೂಜೆ ಸಲ್ಲಿಸಿ, ಹಾಲನ್ನೆರೆದು, ನೈವೇದ್ಯ ಸಮರ್ಪಿಸಿದರು. ತಾಲೂಕಿನಲ್ಲಿ ಕೆಲವರು ಶ್ರಾವಣ ಮಾಸದ ನಾಗಚೌತಿಯಂದು, ಕೆಲವರು ನಾಗ ಪಂಚಮಿಯಂದು, ಕೆಲವರು ನಾಗಚೌತಿ ಹಾಗೂ ನಾಗಪಂಚಮಿಯಂದು, ಕೆಲವರು ಮೂರನೇ ಸೋಮವಾರ, ಕೆಲವರು ಕೊನೆಯ ಶನಿವಾರ ನಾಗ ದೇವತೆಗಳನ್ನು ಪೂಜಿಸಿ, ಹಾಲನ್ನೆರೆಯುವ ಸಂಪ್ರದಾಯ ರೂಢಿಯಲ್ಲಿದೆ.
ಹರಪನಹಳ್ಳಿಯಲ್ಲಿ ಮಂಕಾದ ನಾಗರ ಪಂಚಮಿಹರಪನಹಳ್ಳಿ: ಮುಂಗಾರು ಮಳೆ ಕೊರತೆಯಿಂದ ಬೆಳೆಗಳು ಕುಂಠಿತಗೊಂಡಿದ್ದರಿಂದ ರೈತರು ಈ ಬಾರಿ ನಾಗರ ಪಂಚಮಿ ಹಬ್ಬವನ್ನು ಸರಳವಾಗಿ ಆಚರಿಸಿದರು. ಕೆಲ ಜನರು ನಾಗ ಚೌತಿಗೆ ಹಾಲೆರೆದರೆ, ಇನ್ನೂ ಕೆಲವರು ಪಂಚಮಿಗೆ ಹಾಲೆರೆಯುತ್ತಾರೆ. ಶನಿವಾರ ರೊಟ್ಟಿ ಹಬ್ಬ ಆಚರಿಸಿದವರು, ಭಾನುವಾರ ನಾಗ ದೇವರಿಗೆ ಹಾಲು ಎರೆದು ವಿವಿಧ ಬಗೆಯ ಉಂಡಿಗಳನ್ನು ಮಾಡಿ ಸವಿದರು. ಇನ್ನೂ ಕೆಲವರು ಪಂಚಮಿ ಅಂದರೆ ಮಂಗಳವಾರ ನಾಗ ದೇವರಿಗೆ ಹಾಲೆರೆಯುತ್ತಾರೆ. ಸಾರ್ವಜನಿಕವಾಗಿ ಅಷ್ಟೊಂದು ಜೋಕಾಲಿ ಆಟ, ಕಂಡು ಬರಲಿಲ್ಲ. ಕಲವೇ ಕೆಲವು ಮನೆಗಳಲ್ಲಿ ಮಾತ್ರ ಜೋಕಾಲಿ ಕಟ್ಟಲಾಗಿತ್ತು.
ಮಂಕಾದ ಬಟ್ಟೆ ಖರೀದಿ:ಹೊಸ ಬಟ್ಟೆ ಖರೀದಿ ಈ ಬಾರಿ ಮಂಕಾಗಿದೆ. ಪಟ್ಟಣದಲ್ಲಿನ ಜವಳಿ ವ್ಯಾಪಾರಿಗಳು ಬಟ್ಟೆ ತಂದು ಗ್ರಾಹಕರಿಲ್ಲದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಹಳ್ಳಿ ಜನರು ಬಟ್ಟೆ ಖರೀದಿಗಾಗಿ ನಗರಕ್ಕೆ ಕಾಲಿಟ್ಟಿಲ್ಲ. ಯಾರಲ್ಲೂ ಲವಲವಿಕೆ ಇಲ್ಲ. ಆದರೂ ಬಿಡಬಾರದೆಂದು ಕೇವಲ ನಾಗ ದೇವರಿಗೆ ಹಾಲು ಹಾಕುವುದು ಸೇರಿದಂತೆ ಸರಳ ಪೂಜೆಗೆ ಮಾತ್ರ ನಾಗರ ಪಂಚಮಿ ಸೀಮಿತವಾಗಿದೆ. ಒಟ್ಟಿನಲ್ಲಿ ಹಬ್ಬದ ಸಡಗರ, ಸಂಭ್ರಮ ಅಷ್ಟೊಂದು ಕಾಣುತ್ತಿಲ್ಲ.ಮಳೆ ಇಲ್ಲದ್ದರಿಂದ ಬೆಳೆ ಕುಂಠಿತಗೊಂಡು ರೈತರು ಮಾರುಕಟ್ಟೆಗೆ ಬರುತ್ತಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ. 30ರಷ್ಟು ಬಟ್ಟೆ ಖರೀದಿ ಕಡಿಮೆಯಾಗಿದೆ ಎನ್ನುತ್ತಾರೆ ಬಟ್ಟೆ ಅಂಗಡಿ ಮಾಲೀಕರಾದ ನಾಗರಾಜಶೆಟ್ಟಿ.