ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ತೈಲೂರು ಗ್ರಾಮದಲ್ಲಿ ಶುಕ್ರವಾರದಿಂದ ಎರಡು ದಿನಗಳ ಕಾಲ ನಡೆಯುವ ಶ್ರೀತೈಲೂರಮ್ಮನವರ ವೀರ ಹಬ್ಬದ ಅಂಗವಾಗಿ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ನೆರವೇರಿತು.ಗ್ರಾಮದಲ್ಲಿ 25 ವರ್ಷಗಳ ನಂತರ ನಡೆಯುತ್ತಿರುವ ವೀರ ಹಬ್ಬದ ಅಂಗವಾಗಿ ಗ್ರಾಮದಲ್ಲಿ ಸಡಗರದ ವಾತಾವರಣ ಮನೆ ಮಾಡಿದೆ. ಶುಕ್ರವಾರ ಮುಂಜಾನೆ ಶ್ರೀತೈಲೂರಮ್ಮನವರ ಮೂಲ ವಿಗ್ರಹಕ್ಕೆ ಅಭಿಷೇಕ, ಕುಂಕುಮಾರ್ಚನೆ ನಂತರ ಪುಷ್ಪಾಲಂಕಾರದೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.
ತೈಲೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಅಸಂಖ್ಯಾತ ಮಹಿಳೆಯರು ಮೆರವಣಿಗೆಯಲ್ಲಿ ಬಂದು ಮೀಸಲು ನೀರು ನೊಂದಿಗೆ ತಂಬಿಟ್ಟಿನ ಆರತಿ ಬೆಳಗಿದರು. ಬಳಿಕ ಶ್ರೀತೈಲೂರಮ್ಮ, ಆವೇರಹಳ್ಳಿಯ ಶ್ರೀ ಪಟಾಲ ದಮ್ಮ, ಹುಣಸೆಮರದೊಡ್ಡಿಯ ಶ್ರೀಮಾರಮ್ಮ ದೇವಿ ಹೂವು, ಹೊಂಬಾಳೆ ಅರ್ಪಿಸಿ, ಧನ್ಯತಾಭಾವ ಮೆರೆದರು.ಏ.19 ರ ಬೆಳಗ್ಗೆ 10 ಗಂಟೆಯಿಂದ ವೀರ ಹಬ್ಬಕ್ಕೆ ಆಗಮಿಸುವ ಭಕ್ತಾದಿಗಳಿಗೆ ಗ್ರಾಮಸ್ಥರು ಸಾವಿರಾರು ಕುರಿ ಕುರಿಗಳನ್ನು ಕಡಿದು ಬಾಡೂಟದ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀತೈಲೂರಮ್ಮ ದೇಗುಲದ ಟ್ರಸ್ಟ್ ಅಧ್ಯಕ್ಷ ಡಾ.ಟಿ.ಚಂದ್ರ ತಿಳಿಸಿದ್ದಾರೆ.
ಮೇ 4 ರಂದು ವಿಶೇಷ ಪೂಜಾ ಮಹೋತ್ಸವಕೆ.ಆರ್.ಪೇಟೆ: ಪುರಸಭಾ ವ್ಯಾಪ್ತಿಯ ಹೊಸಹೊಳಲಿನ 1008 ಶ್ರೀ ಪಾರ್ಶ್ವನಾಥ ತೀರ್ಥಂಕರರು ಹಾಗೂ ಪದ್ಮಾವತಿ ದೇವಿ ಅಮ್ಮನವರ 28ನೇ ವರ್ಷದ ವಾರ್ಷಿಕ ವಿಶೇಷ ಪೂಜಾ ಮಹೋತ್ಸವಗಳು ಮೇ 4ರಂದು ನಡೆಯಲಿವೆ ಎಂದು ದೇವಾಲಯ ಸಮಿತಿ ಸದಸ್ಯ ಎಚ್.ಎನ್.ವಜ್ರಪ್ರಸಾದ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರವಣಬೆಳಗೊಳದ ಜೈನ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಜರುಗಲಿವೆ.ಹೊಸಹೊಳಲಿನ ಜಿನ ಬಸದಿ ಹೊಯ್ಸಳರ ಕಾಲದಲ್ಲಿ 1125ರಲ್ಲಿ ನಿರ್ಮಾಣವಾಗಿದ್ದ, ಪಾರ್ಶ್ವನಾಥ ಬಸದಿಯನ್ನು ಕಳೆದ 28 ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಿಸಿದ್ದು, ಜೀರ್ಣೋದ್ಧಾರಗೊಂಡ ಅನಂತರ ಪಾರ್ಶ್ವನಾಥರು ಮತ್ತು ಪದ್ಮಾವತಿ ಅಮ್ಮನವರ ವಾರ್ಷಿಕ ಪೂಜಾ ಮಹೋತ್ಸವವನ್ನು ಇತರೆ ಸಮುದಾಯಗಳ ನೆರವಿನಿಂದ ಜಿನ ಸಮುದಾಯ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಮೇ4 ರ ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಎಲ್ಲಾ ಜಿನ ಬಂಧುಗಳು ಮತ್ತು ತಾಲೂಕಿನ ಸರ್ವ ಜನಾಂಗದ ಜಿನಾಭಿಮಾನಿಗಳು ಆಗಮಿಸುವರು ಎಂದು ತಿಳಿಸಿದ್ದಾರೆ.