ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ

| Published : Dec 08 2024, 01:15 AM IST

ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಹಸ್ರಾರು ಮಂದಿ ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿ ಭಕ್ತಿಭಾವ ಪ್ರದರ್ಶಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ಕೆರೆ ಬೀದಿಯಲ್ಲಿರುವ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಕಂದ ದೇವಾಲಯಗಳಲ್ಲಿ ಶ್ರೀ ಸುಬ್ರಹ್ಮಣ್ಯ (ಸ್ಕಂದ) ಷಷ್ಠಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಬೆಳಗ್ಗೆ ೬ ಗಂಟೆಗೆ ಶ್ರೀ ಸ್ವಾಮಿಗೆ ಫಲ ಪಂಚಾಮೃತಪೂರ್ವಕ ಪವಮಾನ ಅಭಿಷೇಕ, ರುದ್ರಾಭಿಷೇಕ, ಬೆಣ್ಣೆ ಅಲಂಕಾರ ಏರ್ಪಡಿಸಲಾಗಿತ್ತು. ಬೆಳಗ್ಗೆ ೭ ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಮಹಾಸಂಕಲ್ಪ, ಕಳಶ ಸ್ಥಾಪನೆ, ನವಗ್ರಹಪೂರ್ವಕ ಮಹಾಗಣಪತಿ ಹೋಮ, ಕಾಳಸರ್ಪ ಶಾಂತಿ ಹೋಮ, ಸುಬ್ರಹ್ಮಣ್ಯ ಮೂಲಮಂತ್ರ ಹೋಮ ಮತ್ತು ಆಶ್ಲೇಷ ಬಲಿಪೂಜೆ, ಮಧ್ಯಾಹ್ನ ೧೨ ಮಹಾಪೂರ್ಣಾಹುತಿ, ೧೨.೩೦ಕ್ಕೆ ಮಹಾಮಂಗಳಾರತಿ ನೆರವೇರಿತು. ಬಳಿಕ ಪ್ರಸಾದ ವಿನಿಯೋಗ ನಡೆಯಿತು.

ಸಂಜೆ ೬.೩೦ಕ್ಕೆ ಶ್ರೀವಲ್ಲಿ -ದೇವಸೇನಾ ಸಮೇತ ಶ್ರೀ ಬಾಲಸುಬ್ರಹ್ಮಣ್ಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಪಾಲ್ಗೊಂಡು ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದರು. ಬೆಳಗ್ಗೆಯಿಂದ ರಾತ್ರಿಯವರೆಗೂ ನೂರಾರು ಭಕ್ತರು ಆಗಮಿಸಿದ್ದರು.

ಹೋಮ-ಹವನದಲ್ಲೂ ಪಾಲ್ಗೊಂಡ ಭಕ್ತಜನ:

ನಗರದ ಕುವೆಂಪು ನಗರದಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಬೆಳಗಿನಿಂದಲೂ ವಿಶೇಷ ಪೂಜೆ, ಹೋಮ, ಹವನ, ಕಾಳಸರ್ಪಶಾಂತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ- ವಿಧಾನಗಳು ಸಾಂಗೋಪಸಾಂಗವಾಗಿ ನೆರವೇರಿದವು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಹೋಮ, ಹವನ, ಆಶ್ಲೇಷ ಬಲಿಪೂಜೆ, ಮಹಾಪೂರ್ಣಾಹುತಿ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.

ಕಳೆದ ಮೂರ್ನಾಲ್ಕು ದಿನಗಳಿಂದಲೂ ಪೂಜಾ ಕಾರ್ಯಕ್ಕಾಗಿ ವಿಶೇಷ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯ ಎರಡೂ ಬದಿಯ ರಸ್ತೆಗಳು, ಜಿಲ್ಲಾ ಪಂಚಾಯಿತಿ ರಸ್ತೆ, ಆರ್‌ಟಿಓ ರಸ್ತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಆವರಣವನ್ನು ತಳಿರು, ತೋರಣಗಳಿಂದ ಶೃಂಗರಿಸಲಾಗಿತ್ತು.

ಬಹುತೇಕ ಸುಬ್ರಹ್ಮಣ್ಯ ದೇವಾಲಯಗಳ ಮುಂದೆ ಅತ್ಯಾಕರ್ಷಕ ನಾಗದೇವರ ರಂಗವಲ್ಲಿಯನ್ನು ಬಿಡಿಸಿ ಅಲಂಕರಿಸಲಾಗಿತ್ತು.

ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಹಸ್ರಾರು ಮಂದಿ ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿ ಭಕ್ತಿಭಾವ ಪ್ರದರ್ಶಿಸಿದರು.

ನಗರದ ರೈಲು ನಿಲ್ದಾಣದ ಬಳಿ ಇರುವ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಕೇವಲ ಸಾಂಕೇತಿಕ ಪೂಜೆಗಷ್ಟೇ ಸೀಮಿತವಾಗಿತ್ತು. ಭಕ್ತಾದಿಗಳು ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು.

ಉಳಿದಂತೆ ಜಿಲ್ಲೆಯ ಎಲ್ಲ ಸ್ಕಂದ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಕೆಲವರು ನಾಗರ ಕಲ್ಲಿಗೆ ಪೂಜೆ ಸಲ್ಲಿಸಿ ತನಿ ಎರೆದರು. ಇನ್ನು ಕೆಲವರು ಹುತ್ತದ ಬಳಿ ತೆರಳಿ ಪೂಜೆ ಸಲ್ಲಿಸಿದ ತಮ್ಮ ಹರಕೆ ಸಲ್ಲಿಸಿದರು.