ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಮಂಡ್ಯ ನಗರದ ಹಲವು ಶಿವ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮುಂಜಾನೆ ಪ್ರಸಾದ ವಿನಿಯೋಗ ನಡೆಯಿತು. ಪ್ರಮುಖ ದೇವಾಲಯಗಳಲ್ಲೊಂದಾಗಿರುವ ಶ್ರೀಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ದೇವಾಲಯ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಸೋಮವಾರ ಜಿಲ್ಲೆಯ ಎಲ್ಲಾ ಶಿವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಸಾಂಗೋಪ ಸಾಂಗವಾಗಿ ನಡೆದವು.ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ನಗರದ ಹಲವು ಶಿವ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮುಂಜಾನೆ ಪ್ರಸಾದ ವಿನಿಯೋಗ ನಡೆಯಿತು. ನಗರದ ಪ್ರಮುಖ ದೇವಾಲಯಗಳಲ್ಲೊಂದಾಗಿರುವ ಶ್ರೀಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ದೇವಾಲಯ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ರಾತ್ರಿಯಿಡೀ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಭಕ್ತಗಣ ಭಕ್ತಿಯ ಸಿಂಚನದಲ್ಲಿ ಮಿಂದೆದ್ದರು.
ಸಾಂಪ್ರದಾಯಿಕ ಭೋಜನಕ್ಕೆ ವ್ಯವಸ್ಥೆ:ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿರುವ ಮುನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತಲ್ಲದೆ, ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅವರೇಕಾಳು ಹಿಟ್ಟು ಪ್ರಸಾದವನ್ನು ಭಕ್ತಾದಿಗಳಿಗೆ ಬಡಿಸುವ ಮೂಲಕ ಚೈತನ್ಯ ವಾಯುವಿಹಾರಿಗಳ ಬಳಗ ಸಾಂಪ್ರದಾಯಿಕ ಭೋಜನಕ್ಕೆ ಉತ್ತೇಜನ ನೀಡಿದ್ದು ವಿಶೇಷವಾಗಿತ್ತು.
ನಗರದ ಹೊಸಹಳ್ಳಿ ಬಡಾವಣೆಯ ಶ್ರೀ ಶನೇಶ್ವರ ದೇವಾಲಯ, ಶಂಕರಪುರ ಶ್ರೀ ಶನೇಶ್ವರ ದೇವಾಲಯ, ಉದಯಗಿರಿ ಶ್ರೀ ಶನೇಶ್ವರ, ಕಲ್ಲಹಳ್ಳಿಯ ಶ್ರೀ ಮಲೈಮಹದೇಶ್ವರ, ಚಾಮುಂಡೇಶ್ವರಿ ನಗರದ ಶ್ರೀ ಶನೇಶ್ವರ ದವಾಲಯ, ಚಿಕ್ಕಮಂಡ್ಯ ಬೋರೇದೇವರ ದೇವಾಲಯ, ರಾಗಿಮುದ್ದನಹಳ್ಳಿ ಶ್ರೀ ಶಂಭುಲಿಂಗೇಶ್ವರ, ಶ್ರೀ ಶನೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಪ್ರಸಾದ ವಿನಿಯೋಜನೆ ಏರ್ಪಡಿಸಲಾಗಿತ್ತು.ತಾಲೂಕಿನ ಹೊಳಲು ಗ್ರಾಮದಲ್ಲಿರುವ ಶ್ರೀ ತಾಂಡವೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾತ್ರಿ ಪೂರ್ತಾ ಜಾಗರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮಂಗಲ ಗ್ರಾಮದ ಶ್ರೀ ಕಾಡುಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಮಂದಿ ಗ್ರಾಮಸ್ಥರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಹೊಸಬೂದನೂರು ಗ್ರಾಮದಲ್ಲಿರುವ ೧೫ನೇ ಶತಮಾನದ ಶ್ರೀಕಾಶಿವಿಶ್ವನಾಥ ಸ್ವಾಮಿ ದೇವಾಲಯದಲ್ಲಿ ದೀಪೋತ್ಸವ ನಡೆಯಿತು. ರಾತ್ರಿ ಪೂರ್ತಾ ಜಾಗರಣೆ, ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಬೆಳಗ್ಗೆ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.