ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಜನಪ್ರಿಯತೆ ನೋಡಿ ಜನರು ಅವರಿಗೆ ಜನಾದೇಶ ನೀಡಿದ್ದಾರೆ ಎಂದು ಸತ್ಯ ಮರೆಮಾಚಲಾಗುತ್ತಿದೆ. ಆದರೆ, ವಾಸ್ತವವಾಗಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ ಜಿಲ್ಲೆಯ ಮತದಾರರು ಜೆಡಿಎಸ್ ಸೋಲಿಸಿ ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಹಲಗೂರು
ಮುತ್ತತ್ತಿ ರಸ್ತೆ ವಿದ್ಯಾಗಣಪತಿ ದೇವಸ್ಥಾನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಪ್ರಾರ್ಥಿಸಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.ಯುವ ಮುಖಂಡ ಲಿಂಗಪಟ್ಟಣ ಗಂಗಾಧರ್ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಹಿಂದಿನ ಕಾಲಘಟ್ಟವನ್ನು ನೆನೆದು ಪಕ್ಷದ ಏಳಿಗೆಗಾಗಿ ತಮ್ಮ ತನು- ಮನ- ಧನವನ್ನು ಮುಡಿಪಾಗಿಟ್ಟು ಶ್ರಮಿಸಿರುವ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಉಳಿದ ಅಧಿಕಾರ ಅವಧಿಯನ್ನು ಡಿಕೆಗೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿದರು.
5 ವರ್ಷಗಳ ಕಾಲ ರಾಜ್ಯ ಸುತ್ತಿ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ವಿಶ್ವಾಸ ಗಳಿಸಿ ಪಕ್ಷ ಬಲಪಡಿಸಿದ ಪರಿಣಾಮ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ 2023ರಲ್ಲಿ ಅಧಿಕಾರಕ್ಕೆ ಬಂತು. ಮುಖ್ಯಮಂತ್ರಿ ಆಗುವ ಅವಕಾಶ ಇದ್ದರೂ ಅರ್ಧ ಅವಧಿಗೆ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಉಳಿದ ಅವಧಿಗೆ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸಿದರು.ಯುವ ಮುಖಂಡ ಶಿವಕುಮಾರ್( ಶಿವಪ್ಪ) ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಜನಪ್ರಿಯತೆ ನೋಡಿ ಜನರು ಅವರಿಗೆ ಜನಾದೇಶ ನೀಡಿದ್ದಾರೆ ಎಂದು ಸತ್ಯ ಮರೆಮಾಚಲಾಗುತ್ತಿದೆ. ಆದರೆ, ವಾಸ್ತವವಾಗಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ ಜಿಲ್ಲೆಯ ಮತದಾರರು ಜೆಡಿಎಸ್ ಸೋಲಿಸಿ ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಡಿ.ಕೆ.ಶಿವಕುಮಾರ್ ಅವರನ್ನು ನಂಬಿ ನಿಮ್ಮ ನಾಯಕತ್ವದಲ್ಲಿ ಚುನಾವಣೆಗೆ ಹೋಗಬೇಕೆಂದು ನೀವೇ ಪಕ್ಷ ಕಟ್ಟಲು ಸಮರ್ಥರೆಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದರು. ಜಗನ್ ಮೋಹನ್ ರೆಡ್ಡಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೇ ವಂಚಿಸಿದ ಪರಿಣಾಮ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಆಂಧ್ರಪ್ರದೇಶದಂಥ ಕ್ಲಿಷ್ಟ ಪರಿಸ್ಥಿತಿಯನ್ನು ಪಕ್ಷ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮುಖಂಡರಾದ ರವಿಗೌಡ, ತಮ್ಮಣ್ಣಗೌಡ, ಸುರೇಶ್, ಮರಿಸ್ವಾಮಿ, ಗಂಗಾಧರ್, ಶಿವಪ್ಪ, ಚಂದನ್, ಬಿ.ಟಿ.ರವಿಕುಮಾರ್, ಬಿ.ಎಚ್.ರಮೇಶ್, ಜಗದೀಶ್, ಮಂಜು, ಕೃಷ್ಣ, ಶಿವಸ್ವಾಮಿ, ಮನು, ನಿಖಿಲ್, ಎಚ್.ಎಸ್.ಕೃಷ್ಣ ಸೇರಿ ಹಲವರು ಭಾಗವಹಿಸಿದ್ದರು.
------------28ಕೆಎಂಎನ್ ಡಿ11
ಹಲಗೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಮಾನಿಗಳಿಂದ ಗಣೇಶ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.